ಬ್ಯಾಡಗಿ ಮೆಣಸಿನಕಾಯಿಗೆ ಬಂಗಾರದ ಬೆಲೆ: ಸಂತಸದಲ್ಲಿ ಅನ್ನದಾತ..!

By Kannadaprabha News  |  First Published Dec 23, 2020, 9:45 AM IST

45,111ಗೆ ಕ್ವಿಂಟಲ್‌ ಮೆಣಸಿನಕಾಯಿ ಮಾರಾಟ, ಹೊಸ ದಾಖಲೆ| ಮಾರುಕಟ್ಟೆ ಇತಿಹಾಸದಲ್ಲಿಯೇ ಸರ್ವಕಾಲಿಕ ಧಾರಣೆ| ಬ್ಯಾಡಗಿ ಮಾರುಕಟ್ಟೆಯಲ್ಲಿ ಕಳೆದೆರಡು ವಾರಗಳಿಂದ ಏರುಗತಿಯಲ್ಲಿ ಸಾಗಿ ಮೆಣಸಿನಕಾಯಿ ದರ| 


ಬ್ಯಾಡಗಿ(ಡಿ.23): ಬ್ಯಾಡಗಿ ಮೆಣಸಿನಕಾಯಿಗೂ ಇದೀಗ ಬಂಗಾರದ ಬೆಲೆ ಬರುತ್ತಿದೆ. ಒಂದು ಕ್ವಿಂಟಲ್‌ ಮೆಣಸಿನಕಾಯಿ ಸರಿಸುಮಾರು 1 ತೊಲ ಬಂಗಾರದ ದರಕ್ಕೆ ಮಂಗಳವಾರ ಮಾರಾಟವಾಗಿದ್ದು ಹೊಸ ದಾಖಲೆ ಸೃಷ್ಟಿಸಿದೆ. 

ಗದಗ ಜಿಲ್ಲೆ ರೋಣ ತಾಲೂಕು ಸವಡಿ ಗ್ರಾಮದ ರೈತ ಬಸವರೆಡ್ಡೆಪ್ಪ ಬೂಸರೆಡ್ಡಿ ಬೆಳೆದ ಡಬ್ಬಿ ಮೆಣಸಿನ ಕಾಯಿ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 45,111ರಂತೆ ಮಾರಾಟವಾಗಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಕಳೆದೆರಡು ವಾರಗಳಿಂದ ಮೆಣಸಿನಕಾಯಿ ದರ ಏರುಗತಿಯಲ್ಲಿ ಸಾಗಿದ್ದು, ವ್ಯಾಪಾರಸ್ಥರು ಗುಣಮಟ್ಟದ ಡಬ್ಬಿ ಮೆಣಸಿನಕಾಯಿಗೆ ಉತ್ತಮ ಧಾರಣೆ ನೀಡುತ್ತಿದ್ದಾರೆ. ಎರಡ್ಮೂರು ವರ್ಷಗಳ ಹಿಂದೆ ಕ್ವಿಂಟಲ್‌ಗೆ 20 ಸಾವಿರವನ್ನೂ ಪಡೆಯದ ರೈತರು ಇದೀಗ ಗುಣಮಟ್ಟದ ಒಣಗಿದ ಮೆಣಸಿನಕಾಯಿಗೆ ಸರಿಸುಮಾರು ಅರ್ಧ ಲಕ್ಷ ರುಪಾಯಿ ಬೆಲೆ ಪಡೆಯುತ್ತಿದ್ದಾರೆ. ಕಳೆದ ಶನಿವಾರ ಗದಗ ಎಪಿಎಂಸಿಯಲ್ಲಿ 41,125ಕ್ಕೆ ಬ್ಯಾಡಗಿ ಮೆಣಸಿನಕಾಯಿ ಮಾರಾಟವಾಗಿದ್ದು ಈವರೆಗಿನ ದಾಖಲೆಯಾಗಿತ್ತು.

Tap to resize

Latest Videos

ಡಿ.14 ರಂದು ಇದೇ ರೈತ ಬೆಳೆದ ಮೆಣಸಿನಕಾಯಿ ಪ್ರಸಕ್ತ ವರ್ಷ 35,555 ದರಕ್ಕೆ ಮಾರಾಟವಾಗಿತ್ತು. ಆಗ ಅದೇ ದಾಖಲೆಯ ಬೆಲೆಯಾಗಿತ್ತು. ಈಗ ಮತ್ತೊಂದು ಕ್ವಿಂಟಲ್‌ ಮೆಣಸಿನಕಾಯಿ ದಾಖಲೆಯ 45,111 ದರಕ್ಕೆ ಮಾರಾಟವಾಗಿದೆ. ಇದು ಮಾರುಕಟ್ಟೆ ಇತಿಹಾಸದಲ್ಲಿಯೇ ಸರ್ವಕಾಲಿಕ ಧಾರಣೆಯಾಗಿದೆ.

ಬ್ಯಾಡಗಿ ಮೆಣಸಿನ ಕಾಯಿಗೆ ಭಾರಿ ಬೆಲೆ : ರೈತರಿಗೆ ಬಂಪರ್ ಆದಾಯ

ಅಂತಾರಾಷ್ಟ್ರೀಯ ಖ್ಯಾತಿಯ ಮಾರುಕಟ್ಟೆಗೆ ಇಂದಿನ ದರ ಮತ್ತೊಂದು ಮೈಲಿಗಲ್ಲಾಗಲಿದೆ. ಗುಣಮಟ್ಟದ ಮೆಣಸಿನಕಾಯಿಗೆ ಉತ್ತಮ ಧಾರಣೆ ಸಿಗುತ್ತಿದೆ. ರೈತರು ತೇವಾಂಶ ಇಲ್ಲದ ಮೆಣಸಿನಕಾಯಿ ತಂದರೆ ನ್ಯಾಯಯುತ ಬೆಲೆ ಸಿಗುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ ತಿಳಿಸಿದ್ದಾರೆ. 

ಈ ಹಿಂದೆಯೂ ಉತ್ತಮ ದರಕ್ಕೆ ಮೆಣಸಿನಕಾಯಿ ಮಾರಾಟ ಮಾಡಿದ್ದೆ, ಬಂಗಾರದ ಬೆಲೆ ದೊರೆಯುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ರೈತರಿಗೆ ಈ ರೀತಿ ಉತ್ತಮ ಬೆಲೆ ಸಿಗಬೇಕು. ಆಗ ಮಾತ್ರ ಕೃಷಿ ಮುಂದುವರಿಸಲು ಉತ್ಸಾಹ ಬರುತ್ತೆ ಎಂದು ರೈತ ಬಸವರೆಡ್ಡೆಪ್ಪ ಭೂಸರೆಡ್ಡಿ ಹೇಳಿದ್ದಾರೆ. 
 

click me!