ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚಳ, ಗ್ಯಾರಂಟಿ ಹಣಕ್ಕೆ ಸರ್ಕಾರದಿಂದ ಕುಡುಕರ ಸೃಷ್ಟಿ: ಬಿವೈ ವಿಜಯೇಂದ್ರ ಟೀಕೆ!

Published : Jan 26, 2026, 08:46 AM IST
by vijayendra

ಸಾರಾಂಶ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಗ್ರಾಮೀಣ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಇದು ಕುಡುಕರ ಸಾಮ್ರಾಜ್ಯ ನಿರ್ಮಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.

ಹುಬ್ಬಳ್ಳಿ (ಜ.26): ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ಕುಡುಕರ ಸಾಮ್ರಾಜ್ಯ ಕಟ್ಟಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗೆ ಹಣ ನೀಡಲು ಆಗುತ್ತಿಲ್ಲ. ಒಂದೆಡೆ ಬೆಲೆ ಏರಿಕೆ ಮಾಡಿ ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಹಳ್ಳಿಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ಕುಡುಕರ ರಾಜ್ಯ ಮಾಡಲು ಮುಂದಾಗಿದೆ. ಲಂಚದ ಹಣದ ಮೇಲೆಯೇ ಸರ್ಕಾರ ನಡೆಯುತ್ತಿದ್ದು, ಇದರ ಪಾಪದ ಕೊಡ ತುಂಬುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ನಕಲಿ ಗಾಂಧಿ ಕುಟುಂಬ

ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು "ಹಿಂದ" ಸಮಾಜ ಮರೆತು ಬರೀ ಅಲ್ಪಸಂಖ್ಯಾತರ ಓಲೈಕೆ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ಸಿನದು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣದ ನೀತಿಯಾಗಿದೆ ಎಂದ ಅವರು, ಗಾಂಧಿ ಕುಟುಂಬ ಈ ಹಿಂದೆ ಯಾವ ರೀತಿಯಲ್ಲಿ ರಾಜ್ಯಪಾಲರನ್ನು ನಡೆಸಿಕೊಂಡಿತ್ತು ಎಂಬುದನ್ನು ದೇಶದ ಜನತೆ ಮರೆತಿಲ್ಲ. ದೇಶದ ಗೌರವಾನ್ವಿತ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡಿದ್ದು ನಕಲಿ ಗಾಂಧಿ ಕುಟುಂಬವೇ ಹೊರತು ಬಿಜೆಪಿಯಲ್ಲ ಎಂದು ಕಾಂಗ್ರೆಸ್‌ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಮಹದಾಯಿ ಯೋಜನೆ ಜಾರಿಗೆ ಕೇಂದ್ರದ ಪರಿಸರ ಇಲಾಖೆ ಅನುಮತಿ ಬಾಕಿ ಇರುವ ಕುರಿತು ಕೇಳಿದ ಪ್ರಶ್ನೆಗೆ, ಮಹದಾಯಿ ಯೋಜನೆ ಜಾರಿಗಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಕೆಲವು ತಾಂತ್ರಿಕ ತೊಂದರೆಯಿಂದಾಗಿ ವಿಳಂಬವಾಗಿದೆ ಎಂದರು.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಹಾನಗರ ಪಾಲಿಕೆಯ 16 ಎಕರೆ ಜಾಗವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಿತ್ತು. ಪ್ರಸ್ತುತವಾಗಿ ಇದಕ್ಕೆ ಕೇಂದ್ರ ಸರ್ಕಾರವೂ ಆರ್ಥಿಕ ಸಹಾಯ ಮಾಡಿದೆ. ಇದನ್ನೆಲ್ಲವನ್ನು ಮರೆತ ಕಾಂಗ್ರೆಸ್‌ ಸರ್ಕಾರ ಶನಿವಾರ ಆಶ್ರಯ ಮನೆಗಳನ್ನು ವಿತರಿಸುವ ಮೂಲಕ ತಾವೇ ಎಲ್ಲವನ್ನು ಮಾಡುತ್ತೇವೆ ಎಂದು ಹೇಳಿಕೊಂಡಿದೆ ಎಂದು ಟೀಕಿಸಿದರು.

ಈ ವೇಳೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕಿ ಸೀಮಾ ಮಸೂತಿ, ಮೇಯರ್‌ ಜ್ಯೋತಿ ಪಾಟೀಲ, ಉಪಮೇಯರ್‌ ಸಂತೋಷ ಚವ್ಹಾಣ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ ಸೇರಿದಂತೆ ಹಲವರಿದ್ದರು.

 

PREV
Read more Articles on
click me!

Recommended Stories

ಇತಿಹಾಸದಲ್ಲೇ ಇದೇ ಮೊದಲ ಬಾರಿ ಲಾಲ್‌ಬಾಗ್‌ ಪುಷ್ಪ ಪ್ರದರ್ಶನದಿಂದ ಭಾರೀ ಗಳಿಕೆ
ಬೆಳಗಾವಿ ಬಳಿ ₹400 ಕೋಟಿ ದರೋಡೆ ಪ್ರಕರಣ-ಕಂಟೇನರ್‌ಗಾಗಿ ಭಾರೀ ಹುಡುಕಾಟ : 6 ಜನ ಅರೆಸ್ಟ್