ಬೆಂಗಳೂರು : ಚುನಾವಣೆಯ ಸ್ಥಳ ಬದಲಾವಣೆ

Published : Dec 03, 2019, 08:30 AM IST
ಬೆಂಗಳೂರು :  ಚುನಾವಣೆಯ ಸ್ಥಳ ಬದಲಾವಣೆ

ಸಾರಾಂಶ

ಚುನಾವಣೆಯ ಸ್ಥಳ ಬದಲಾಗಿದೆ. ಸ್ಥಳ ಬದಲಾವಣೆಗೆ ಕಾರಣವೇನು ? ಇಲ್ಲಿದೆ ಮಾಹಿತಿ 

ಬೆಂಗಳೂರು [ಡಿ.03]:  ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಡಿ.4ರಂದು ನಡೆಯಲಿರುವ 12 ಸ್ಥಾಯಿ ಸಮಿತಿ ಚುನಾವಣೆ ನಡೆಯುವ ಸ್ಥಳವನ್ನು ಬಿಬಿಎಂಪಿಯ ‘ಕೆಂಪೇಗೌಡ ಪೌರ ಸಭಾಂಗಣ’ದಿಂದ ‘ಪುಟ್ಟಣ್ಣ ಚೆಟ್ಟಿಪುರಭವನ’ಕ್ಕೆ ಸ್ಥಳಾಂತರಿಸಲಾಗಿದೆ.

ಪ್ರತಿ ವರ್ಷದಂತೆ ಬಿಬಿಎಂಪಿ ಆವರಣದಲ್ಲಿರುವ ಕೆಂಪೇಗೌಡ ಪೌರಸಭಾಂಗಣದಲ್ಲಿ ಸ್ಥಾಯಿ ಸಮಿತಿ ಚುನಾವಣೆ ನಡೆಸುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ, ಬಿಬಿಎಂಪಿ ಕೇಂದ್ರ ಕಚೇರಿ ಆವರಣ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಡಿ.5ರಂದು ಉಪ ಚುನಾವಣೆ ನಡೆಯಲಿದ್ದು, ಚುನಾವಣೆ ನಡೆಯುವ ಸಂದರ್ಭದಲ್ಲಿ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು ಕ್ಷೇತ್ರ ತೊರೆಯಬೇಕಾದ ಅನಿವಾರ್ಯತೆ ಹಾಗೂ 48 ಗಂಟೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಹಾಗಾಗಿ, ಸ್ಥಾಯಿ ಸಮಿತಿ ಚುನಾವಣೆಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಸ್ಪಷ್ಟಪಡಿಸಿದ್ದಾರೆ.

12 ಸ್ಥಾಯಿ ಸಮಿತಿಗಳ ಸದಸ್ಯ ಸ್ಥಾನಕ್ಕೆ ಅಂದು ಬೆಳಗ್ಗೆ 8.30ರಿಂದ 9.30ರ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು. ನಂತರ ವೇಳಾಪಟ್ಟಿಯಂತೆ 11.30ಕ್ಕೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ಆರಂಭವಾಗಲಿದೆ ಎಂದು ಹರ್ಷ ಗುಪ್ತ ಮಾಹಿತಿ ನೀಡಿದ್ದಾರೆ.

ಮುಂದೂಡಿಕೆಗೆ ನಕಾರ:  ಡಿ.5ಕ್ಕೆ ರಾಜ್ಯದ ಒಟ್ಟು 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಡಿ.4ಕ್ಕೆ ನಿಗದಿ ಪಡಿಸಲಾಗಿರುವ 12 ಸ್ಥಾಯಿ ಸಮಿತಿ ಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಮನವಿಯನ್ನು ತಿರಸ್ಕರಿಸಿರುವ ಪ್ರಾದೇಶಿಕ ಆಯುಕ್ತರು ಡಿ.4ಕ್ಕೆ ನಿಗದಿಯಂತೆ ಚುನಾವಣೆ ನಡೆಸುವುದಕ್ಕೆ ಮುಂದಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಿ.5ಕ್ಕೆ ಅಧಿಕಾರವಧಿ ಮುಕ್ತಾಯ :  ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಯಂದೇ ನಡೆಯಬೇಕಾಗಿದ್ದ ಸ್ಥಾಯಿ ಸಮಿತಿಯ ಚುನಾವಣೆಯನ್ನು ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿಲ್ಲ ಹಾಗೂ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಚುನಾವಣೆ ಮುಂದೂಡಿಕೊಂಡು ಬರಲಾಗಿತ್ತು. ಡಿ.5ಕ್ಕೆ ಬಿಬಿಎಂಪಿಯ ಎಲ್ಲ ಸ್ಥಾಯಿ ಸಮಿತಿ ಸದಸ್ಯರ ಮತ್ತು ಅಧ್ಯಕ್ಷರ ಅಧಿಕಾರವಧಿ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಡಿ.4ಕ್ಕೆ ಚುನಾವಣೆ ನಿಗದಿ ಪಡಿಸಿ ಕಳೆದ ವಾರ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಆದೇಶಿಸಿದ್ದರು.

PREV
click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!