ಬಿಎಂಟಿಸಿ ಬಸ್‌ನಲ್ಲಿ ಇನ್ನು ಗೂಗಲ್‌ಪೇ, ಫೋನ್‌ಪೇ ಬಳಸಿಯೂ ಟಿಕೆಟ್‌ ಖರೀದಿ..!

Published : Nov 23, 2022, 06:00 AM IST
ಬಿಎಂಟಿಸಿ ಬಸ್‌ನಲ್ಲಿ ಇನ್ನು ಗೂಗಲ್‌ಪೇ, ಫೋನ್‌ಪೇ ಬಳಸಿಯೂ ಟಿಕೆಟ್‌ ಖರೀದಿ..!

ಸಾರಾಂಶ

ಬಿಎಂಟಿಸಿ ಕಂಡಕ್ಟರ್‌ಗಳಿಗೆ ಆ್ಯಂಡ್ರಾಯ್ಡ್‌ ಟಿಕೆಟ್‌ ಯಂತ್ರ, ನಗದು ಅಥವಾ ಡಿಜಿಟಲ್‌ ಪಾವತಿ ಮಾಡಿ ಟಿಕೆಟ್‌ ಪಡೆಯಬಹುದು, ಗೂಗಲ್‌ ಪೇ, ಫೋನ್‌ ಪೇ ಬಳಕೆದಾರರಿಗೆ ಅನುಕೂಲ 

ಬೆಂಗಳೂರು(ನ.23): ಕೈಯಲ್ಲಿ ನಗದು ಇಲ್ಲದಿದ್ದರೂ ಗೂಗಲ್‌ ಪೇ, ಫೋನ್‌ ಪೇ ಮೂಲಕ ಹಣ ನೀಡಿ ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವಂತೆ ವ್ಯವಸ್ಥೆ ಜಾರಿಗೆ ಬಂದಿದೆ. ಬಿಎಂಟಿಸಿ ಬಹುತೇಕ ಬಸ್‌ ನಿರ್ವಾಹಕರಿಗೆ ಆ್ಯಂಡ್ರಾಯ್ಡ್‌ ಸೌಲಭ್ಯದ ವಿದ್ಯುನ್ಮಾನ ಟಿಕೆಟ್‌ ಯಂತ್ರ (ಇಟಿಎಂ) ನೀಡಲಾಗುತ್ತಿದ್ದು, ಇದರಲ್ಲಿ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಅಳವಡಿಸಿದ್ದು, ಪ್ರಯಾಣಿಕರು ಗೂಗಲ್‌ ಪೇ, ಫೋನ್‌ ಪೇ ಸೇರಿದಂತೆ ಆನ್‌ಲೈನ್‌ ಪಾವತಿ ಮಾಡಿ ಟಿಕೆಟ್‌ ಪಡೆಯಬಹುದು.

ಸದ್ಯ ಬಿಎಂಟಿಸಿ ಬಸ್‌ ನಿರ್ವಾಹಕ ಬಳಿ ಇರುವ ಇಟಿಎಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು, ಕೆಲ ಸಂದರ್ಭದಲ್ಲಿ ಸ್ಥಗಿತವಾಗುತ್ತಿದ್ದವು. ಈ ಸಮಸ್ಯೆ ಪರಿಹಾರಕ್ಕೆ ಹೊಸದಾಗಿ ಎಂಟು ಸಾವಿರ ಇಟಿಎಂ ಖರೀದಿಸಲಾಗುತ್ತಿದೆ. ಸ್ಮಾರ್ಟ್‌ ಮೊಬೈಲ್‌ನಂತಿರುವ ಹೊಸ ಯಂತ್ರ ಆ್ಯಂಡ್ರಾಯ್ಡ್‌ ಆಗಿದೆ. ಬಟನ್‌ ಬದಲಾಗಿ ಟಚ್‌ ಸ್ಕ್ರೀನ್‌ ಇರಲಿದೆ. ಟಿಕೆಟ್‌ ಕೊಡುವುದು ಮಾತ್ರವಲ್ಲದೆ ವೈಫೈ ಕನೆಕ್ಟ್, ಯುಪಿಐ ಕ್ಯುಆರ್‌ಕೋಡ್‌ ಪ್ರದರ್ಶನ ಸೌಲಭ್ಯವನ್ನು ಒಳಗೊಂಡಿದೆ. ನಿರ್ವಾಹಕರು ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ನಿಲ್ದಾಣ ನಮೂದಿಸಿದರೆ ದರ ತೋರಿಸಿ ಕ್ಯಾಶ್‌, ಯುಪಿಐ ಪಾವತಿ ವಿಧಾನ ಆಯ್ಕೆ ತೋರಿಸುತ್ತದೆ. ಯುಪಿಐ ಆಯ್ಕೆ ಮಾಡಿದರೆ ಸ್ಕಿ್ರನ್‌ಮೇಲೆ ಬಾರ್‌ಕೋಡ್‌ ಬರಲಿದ್ದು, ಪ್ರಯಾಣಿಕರು ಸ್ಕಾ್ಯನ್‌ ಮಾಡಿ ಪಾವತಿಸಬಹುದು. ಯಶಸ್ವಿ ಪಾವತಿಯಾದ ಬಳಿಕ ಟಿಕೆಟ್‌ ಬರಲಿದೆ.

ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್ ಟಿಕೆಟ್‌.!

ಕೊರೋನಾ ವೇಳೆ ಯುಪಿಐ ಅವಕಾಶ:

ಕೊರೋನಾ ಹೆಚ್ಚಿದ್ದ ಸಂದರ್ಭದಲ್ಲಿ ಬಿಎಂಟಿಸಿ ನಗದು ರಹಿತ ಟಿಕೆಟ್‌ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ನಿರ್ವಾಹಕರಿಗೆ ಕ್ಯುಆರ್‌ಕೋಡ್‌ ನೀಡಲಾಗಿತ್ತು. ಆದರೆ, ಬ್ಯಾಂಕ್‌ಗಳ ತಾಂತ್ರಿಕ ದೋಷದ ಹಿನ್ನೆಲೆ 2021 ಅಕ್ಟೋಬರ್‌ನಲ್ಲಿ ಸ್ಥಗಿತಗೊಳಿಸಲಾಯಿತು. ಆ ಬಳಿಕ ಬಿಎಂಟಿಸಿ ಆ್ಯಪ್‌ ಆರಂಭಿಸಿ ದಿನದ, ತಿಂಗಳ ಪಾಸ್‌ಗಳು ಮಾತ್ರ ಸಿಗುತ್ತಿತ್ತು. ಈಗ ಮತ್ತೆ ಟಿಕೆಟ್‌ ನೀಡುವ ಯಂತ್ರದಲ್ಲಿಯೇ ಕ್ಯುಆರ್‌ಕೋಡ್‌ ಲಭ್ಯವಾಗುತ್ತಿದೆ. ಸದ್ಯ ಬಿಎಂಟಿಸಿ 5500 ಬಸ್‌ಗಳು ನಗರದಲ್ಲಿ ಸಂಚಾರ ನಡೆಸುತ್ತಿದ್ದು, ಪ್ರತಿ ದಿನ ಸುಮಾರು 20 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ. ಡಿಜಿಟಲ್‌ ಪೇಮೆಂಟ್‌ನಿಂದ ಅನುಕೂಲವಾಗಲಿದೆ. ಡಿಜಿಟಲ್‌ ಪಾವತಿ ವಿಧಾನದಿಂದ ನಿರ್ವಾಹಕರು ಚಿಲ್ಲರೆಗಾಗಿ ತಡಕಾಟ ತಪ್ಪಲಿದೆ. ಚಿಲ್ಲರೆಗಾಗಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ಜಗಳ ನಿವಾರಣೆಯಾಗಲಿದೆ.

ಡಿಸೆಂಬರ್‌ 10ರೊಳಗೆ ವಿತರಣೆ

ಈಗಾಗಲೇ ಪ್ರಯೋಗಿಕವಾಗಿ ಆ್ಯಂಡ್ರಾಯ್ಡ್‌ ತಂತ್ರಜ್ಞಾನದ 1500 ಇಟಿಎಂಗಳನ್ನು ನಿರ್ವಾಹಕರಿಗೆ ನೀಡಲಾಗಿದೆ. ಹೊಸ ಎಂಟು ಸಾವಿರ ಆ್ಯಂಡ್ರಾಯ್ಡ್‌ ತಂತ್ರಜ್ಞಾನದ ಇಟಿಎಂಗಳನ್ನು ಡಿಸೆಂಬರ್‌ 10ರೊಳಗೆ ಎಲ್ಲ ಬಸ್‌ಗಳ ನಿರ್ವಾಹಕರಿಗೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ