ಒಂದೂವರೆ ವರ್ಷದ ಬಳಿಕ ಕೊಡಗಿನಿಂದ ಈ ಸ್ಥಳಕ್ಕೆ ಬಸ್ ಸಂಚಾರ ಆರಂಭವಾಗಿದೆ. ಭಾರೀ ಮಳೆ ಹಿನ್ನೆಲೆ ನಿಂತಿದ್ದ ಸಾರಿಗೆ ವ್ಯವಸ್ಥೆ ಪುನರಾರಂಭವಾಗಿದೆ.
ಮಂಜುನಾಥ್ ಟಿ.ಎನ್.
ವಿರಾಜಪೇಟೆ [ಡಿ.13]: ಒಂದೂವರೆ ವರ್ಷಗಳ ಬಳಿಕ ಕೇರಳ-ಕರ್ನಾಟಕದ ಮಾಕುಟ್ಟ-ಕೋಣನೂರು ರಾಜ್ಯ ಹೆದ್ದಾರಿಯಲ್ಲಿ ತಾತ್ಕಾಲಿಕ ರಸ್ತೆ ದುರಸ್ತಿ ಬಳಿಕ ಬಸ್ ಸಂಚಾರ ಶುರುವಾಗಿದೆ. ಇದು ಈ ಭಾಗದ ನಿತ್ಯ ಪ್ರಯಾಣಿಕರು ಹಾಗೂ ವರ್ತಕರ ಮುಖದಲ್ಲಿ ನಗು ಅರಳಿಸಿದೆ.
undefined
ಕಳೆದ ಎರಡು ವರ್ಷಗಳಿಂದ ಕೇರಳ-ಕರ್ನಾಟಕ ಹೆದ್ದಾರಿಗೆ ಭಾರಿ ಮಳೆಯೇ ಕಂಟಕಪ್ರಾಯವಾಗಿದೆ. 2018ರಲ್ಲಿ ಈ ಅಂತಾರಾಜ್ಯ ಹೆದ್ದಾರಿಯಲ್ಲಿ ಸುಮಾರು 40ಕ್ಕೂ ಅಧಿಕ ಕಡೆ ಭೂಕುಸಿತವಾಗಿ, ಓರ್ವ ವ್ಯಕ್ತಿ ಮೃತಪಟ್ಟು ಇಡೀ ಹೆದ್ದಾರಿಗೆ ಹೆದ್ದಾರಿಯೇ ಅಸ್ತವ್ಯಸ್ತವಾಗಿ ಹೋಗಿತ್ತು. ತಿಂಗಳುಗಟ್ಟಲೆ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. 2018 ಜೂ.12ರಿಂದಲೇ ಭಾರಿ ವಾಹನಗಳಿಗೆ ಸಂಚಾರ ನಿಷೇಧ ಹೇರಲಾಗಿತ್ತು.
ಮತ್ತೆ ಕುಸಿತ:
ಈ ವರ್ಷ ಆ.12ಕ್ಕೆ ಭಾರಿ ಮಳೆಗೆ ಮತ್ತೆ ಈ ಹೆದ್ದಾರಿ ಕುಸಿದು ಹೋಗಿ ಎರಡು ತಿಂಗಳು ಸಂಪೂರ್ಣ ರಸ್ತೆಯೇ ಬಂದ್ ಆಗಿತ್ತು. ಅಲ್ಲಲ್ಲಿ ತಾತ್ಕಾಲಿಕ ದುರಸ್ತಿಗಳ ಬಳಿಕ ಅಕ್ಟೋಬರ್ ಮೊದಲ ವಾರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಹೆದ್ದಾರಿ ನಡುವಿನ ವಾಟೆಕೊಲ್ಲಿ ಸಮೀಪದ ಆಂಜನೇಯ ದೇವಸ್ಥಾನದ ಅಕ್ಕಪಕ್ಕ ಮೂರು ಕಡೆಗಳಲ್ಲಿ ರಸ್ತೆ ಬಹುತೇಕ ಕುಸಿದು ಹೋಗಿದೆ. ಇದೀಗ ತಾತ್ಕಾಲಿವಾಗಿ ಬರೆಯನ್ನು ಅಗಲಗೊಳಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಳೆ ಬಂದರೆ ಮತ್ತೆ ಈ ರಸ್ತೆ ಸಂಚಾರ ಸ್ಥಗಿತವಾಗಲಿದೆ.
ವಹಿವಾಟಿಗೆ ಧಕ್ಕೆ:
ಹೆದ್ದಾರಿ ಬಂದ್ ಆದ ಹಿನ್ನೆಲೆಯಲ್ಲಿ ಇಲ್ಲಿ ಭಾರಿ ಪ್ರಮಾಣದಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿತ್ತು. ಈ ಹೆದ್ದಾರಿಯನ್ನು ಅವಲಂಬಿಸಿಯೇ ಕೇರಳಕ್ಕೆ ಇಲ್ಲಿಂದ ಕಾಫಿ, ಮೆಣಸು, ಭತ್ತ, ತರಕಾರಿ, ಧವಸಧಾನ್ಯಗಳು ಹೋಗುತ್ತಿದ್ದವು. ಕೇರಳದಿಂದ ಪ್ಲೈವುಡ್, ಹಸಿ ಮತ್ತು ಒಣಗಿದ ಮೀನು, ಕೊಬ್ಬರಿ, ರಬ್ಬರ್, ಗೇರು ಬೀಜ, ಮರ, ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಕಲ್ಲು, ಜಲ್ಲಿ ರಾಜ್ಯಕ್ಕೆ ಬರುತ್ತಿದ್ದವು.
ತಾತ್ಕಾಲಿಕ ದುರಸ್ತಿಯ ಬಳಿಕ ಇಲ್ಲಿ ಲಘು ವಾಹನಗಳು ಸಂಚರಿಸುವ ಅವಕಾಶವಿದ್ದರೂ ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಾದ ಅನಿವಾರ್ಯ ಸನ್ನಿವೇಶವಿತ್ತು. ರಸ್ತೆ ಮತ್ತು ತಡೆಗೋಡೆ ಕುಸಿತವಾದ ಬಳಿಕ ಕೇರಳ ಮತ್ತು ಕೊಡಗಿನ ನಡುವೆ ವ್ಯಾಪಾರ ವಹಿವಾಟು, ಮದುವೆ ಮಾಡಲು ಗಂಡು ಹೆಣ್ಣು ಕೊಟ್ಟು ತರುವುದು ಇವೆಲ್ಲದರ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು.
ಪ್ರತಿವರ್ಷ ಕೊಡಗಿನಿಂದ ಶಬರೀಮಲೆಗೆ ಹೋಗುವ ಅಯ್ಯಪ್ಪ ಭಕ್ತಾದಿಗಳಿಗೂ ಪ್ರಯಾಣ ಮಾಡುವುದೇ ಕಷ್ಟದ ವಿಚಾರವಾಗಿತ್ತು. ಕಣ್ಣೂರು ವಿಮಾನ ನಿಲ್ದಾಣಕ್ಕೆ ಹೋಗ ಬಯಸುವವರಿಗೂ ಈ ದಾರಿ ಮುಚ್ಚಿಹೋದಂತಾಗಿತ್ತು.
ಆಸ್ಪತ್ರೆಗೆ ಹೋಗುವವರು, ಸಾವು, ನೋವು, ಕಷ್ಟ-ಸುಖ, ದೇವಾಲಯ ಬೇಟಿ ಎಂದು ಕೇರಳಕ್ಕೆ ಹೋಗಬೇಕೆಂದರೆ ಅವರು ಪಾಡು ಹೇಳತೀರದಾಗಿತ್ತು.
ಪ್ರತಿನಿತ್ಯ ಈ ದಾರಿಯಲ್ಲಿ 100ಕ್ಕೂ ಅಧಿಕ ಬಸ್ಗಳು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದವು. ಕಳೆದೆರೆಡು ವರ್ಷದಿಂದ ಭಾರಿ ವಾಹನಗಳೀಗೆ ಸಂಚಾರ ನಿಷೇಧವಾದ ಹಿನ್ನೆಲೆ ಪ್ರಯಾಣಿಕರ ಗೋಳು ಹೇಳತೀರದಾಗಿತ್ತು. ಜೀಪುಗಳು, ಖಾಸಗಿ ವಾಹನಗಳಲ್ಲಿ ಕೇಳಿದಷ್ಟು ಹಣ ತೆತ್ತು ಪ್ರಯಾಣಿಕರು ಸಾಗಬೇಕಾಗಿತ್ತು. ಒಂದು ರೀತಿಯಲ್ಲಿ ಇಲ್ಲಿ ಪ್ರಯಾಣಿಕರ ಹಗಲು ದರೋಡೆ ನಡೆಯುತ್ತಿತ್ತು.
ಅಂತಾರಾಜ್ಯ ಸಂಚಾರ ಶುರು:
ಬುಧವಾರದಿಂದ ಕರ್ನಾಟಕ ಕೇರಳ ಅಂತಾರಾಜ್ಯ ಹೆದ್ದಾರಿಯಲ್ಲಿ ಬಸ್ಗಳು ಎಂದಿನಂತೆ ತಮ್ಮ ಸಂಚಾರ ಆರಂಭಿಸಿವೆ. ಇದರಿಂದ ಹರ್ಷಗೊಂಡ ಸಾರ್ವಜನಿಕರು ಪರಸ್ಪರ ದೂರವಾಣಿಯ ಮೂಲಕ ವಿಚಾರ ವಿನಿಮಯ ಮಾಡಿಕೊಳ್ಳುವುದು, ಸಂತಸ ವ್ಯಕ್ತಪಡಿಸುವುದು ಕಂಡು ಬಂತು.
ಕಾಮಗಾರಿ ಮುಗಿದಿಲ್ಲ:
ಆದರೆ, ಎರಡು ವರ್ಷದಿಂದ ಈ ಹೆದ್ದಾರಿ ವಿಕೋಪದ ತಾಣವಾಗಿ ಪರಿವರ್ತಿತವಾಗಿದೆ. ಇನ್ನು ಕೂಡಾ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಜನಸಾಮಾನ್ಯರಿಗೆ ಆಗುತ್ತಿದ್ದ ತೊಂದರೆಯನ್ನು ಗಮನಿಸಿ ಜಿಲ್ಲಾಧಿಕಾರಿ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದಾಗಿ ತಿಳಿದುಬಂದಿದೆ.
ಮಳೆ ಬಂದರೆ ಈ ರಸ್ತೆ ಮತ್ತೆ ಯಾವ ಸ್ವರೂಪ ತಳೆಯುತ್ತದೆಯೋ ಹೇಳಲಾಗದು. ಬುಧವಾರ ಬಸ್ ಸಂಚಾರ ಆರಂಭವಾದೊಡನೆ ಕೇರಳ ಭಾಗದಿಂದ ಕೆಂಪುಕಲ್ಲುಗಳನ್ನು ಹೇರಿದ ಭಾರಿ ಭಾರದ ಲಾರಿಗಳ ಸಂಚಾರ ಅಬಾಧಿತವಾಗಿ ಶುರುವಾಗಿದೆ. ಸುಮಾರು 200ರಷ್ಟುಲಾರಿಗಳು ಬುಧವಾರ ಕರ್ನಾಟಕ ಪ್ರವೇಶಿಸಿವೆ. ಈ ಭಾರದ ಸಂಚಾರ ರಸ್ತೆಗೆ ಮತ್ತೆ ಸಮಸ್ಯೆ ಸೃಷ್ಟಿಸುವ ಆತಂಕವಿದೆ.
ವಿರಾಜಪೇಟೆ ಪಟ್ಟಣ ಕೇರಳದ ಗಡಿ ಭಾಗವಾಗಿದ್ದು ಇಲ್ಲಿ ವ್ಯಾಪಾರ ವಹಿವಾಟುಗಳ ನಡೆಯುತ್ತಿದ್ದು ಈ ರಸ್ತೆಯ ಬಂದ್ ನಿಂದ ಪಟ್ಟಣದಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆ ಯಾಗಿತ್ತು. ಜಿಲ್ಲಾಡಳಿತ ಸಂಚಾರಕ್ಕೆ ಮುಕ್ತ ಮಾಡಿರುವದರಿಂದ ಒಳ್ಳೆಯದಾಗಿದೆ. ಜೊತೆಗೆ ಕುಸಿತಗೊಂಡ ಸ್ಥಳಗಳಲ್ಲಿ ಶಾಶ್ವತ ಪರಿಹಾರ ಕಾಮಗಾರಿ ನಡೆಸಬೇಕಾಗಿದೆ.
-ರಶೀದ್ ಯು.ಕೆ., ಉದ್ಯಮಿ, ವಿರಾಜಪೇಟೆ.
ಜಿಲ್ಲಾಡಳಿತ ಅಂತಾರಾಜ್ಯ ಹೆದ್ದಾರಿಯ ಪರಿಸ್ಥಿತಿಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಹೆದ್ದಾರಿಯಲ್ಲಿ ಆರು ಚಕ್ರಕಿಂತ ಕಡಿಮೆ ಇರುವ ವಾಹನಗಳು ಸಂಚರಿಸಲು ಅನುಮತಿ ಕೊಟ್ಟಿದೆ.
-ಜಯಕುಮಾರ್, ಡಿವೈಎಸ್ಪಿ, ವಿರಾಜಪೇಟೆ.