ಪಾಸ್ ಗಲೀಜು ಆಗಿದ್ದನ್ನೇ ನೆಪಮಾಡಿಕೊಂಡು ಎರಡನೇ ತರಗತಿ ವಿದ್ಯಾರ್ಥಿಯನ್ನು ಬಸ್‌ನಿಂದ ಕೆಳಗಿಳಿಸಿದ ನಿರ್ವಾಹಕ| ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಹೊರವಲಯದಲ್ಲಿ ನಡೆದ ಘಟನೆ| ನಿರ್ವಾಹನ ವಿರುದ್ಧ ಸಾರ್ವಜನಿಕರ ಆಕ್ರೋಷ|
ಕೊಪ್ಪಳ(ಡಿ.02): ಪಾಸ್ ಗಲೀಜು ಆಗಿದ್ದನ್ನೇ ನೆಪಮಾಡಿಕೊಂಡು ಎರಡನೇ ತರಗತಿ ವಿದ್ಯಾರ್ಥಿಯನ್ನು ಬಸ್‌ನಿಂದ ನಿರ್ವಾಹಕ ಕೆಳಗಿಳಿಸಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ವಜ್ರಬಂಡಿ ಗ್ರಾಮದ ಹೊರವಲಯದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಜ್ರಬಂಡಿಯ ವಿಶ್ವನಾಥ ತಳುವಗೇರಿ ನಿತ್ಯ ಹಿರೇಹರಹಳ್ಳಿ ಶಾಲೆಗೆ ಹೋಗುತ್ತಾನೆ. ಶನಿವಾರವೂ ಎಂದಿನಂತೆ ಶಾಲೆಗೆ ಹೋಗಲು ಬಸ್ ಏರಿದ್ದಾನೆ. ಈ ವೇಳೆ ನಿರ್ವಾಹಕ ಈ ವಿದ್ಯಾರ್ಥಿ ಪಾಸ್ ಪರಿಶೀಲಿಸಿದ್ದಾರೆ. ಆಗ ಪಾಸ್ ಗಲೀಜು ಆಗಿದೆ ಎಂದು ಗ್ರಾಮದ ಒಂದೂವರೆ ಕಿಲೋ ಮೀಟರ್ ಕ್ರಮಿಸಿದ ಬಳಿಕ ರಸ್ತೆ ಮಧ್ಯೆ ಕೆಳಗಿಸಿದ್ದಾರೆ. ಇದರಿಂದ ಮನನೊಂದ ಬಾಲಕ ಅಳುತ್ತಾ ಮನೆಗೆ ಬಂದು ತಂದೆಗೆ ನಡೆದ ಘಟನೆ ವಿವರಿಸಿದ್ದಾನೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದರಿಂದ ಕುಪಿತಗೊಂಡ ವಿಶ್ವನಾಥ ತಂದೆ ಶರಣಪ್ಪ, ಪ್ರಕರಣದ ಸಮಗ್ರ ಮಾಹಿತಿ ಒಳಗೊಂಡ ದೂರನ್ನು ಮಕ್ಕಳ ಸಹಾಯವಾಣಿ ಮತ್ತು ಸಾರಿಗೆ ಸಂಸ್ಥೆಯ ಡಿಸಿಗೆ ಅಂಚೆ ಮೂಲಕ ದೂರು ದಾಖಲಿಸಿದ್ದಾರೆ. ನಿರ್ವಾಹಕನ ವಿರುದ್ಧ ಕ್ರಮಕೈಗೊಳ್ಳಲೇಬೇಕು ಎಂದು ಹೋರಾಟ ಮುಂದುವರಿದಿದೆ. ಈ ಕುರಿತು ನಿರ್ವಾಹಕನನ್ನು ಕೇಳಿದರೆ, ಇದೇ ರೀತಿ ಮೂರು ಮಕ್ಕಳನ್ನು ಕೆಳೆಗಿಳಿಸಿದ್ದೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ವ್ಯಾಪಕ ಟೀಕೆ:
ಪ್ರಕರಣದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 2ನೇ ತರಗತಿ ವಿದ್ಯಾರ್ಥಿಯನ್ನು ನಡುರಸ್ತೆಯಲ್ಲಿ ಇಳಿಸಿ ಹೋಗಲು ನಿರ್ವಾಹಕನಿಗೆ ಮನಸ್ಸಾದರೂ ಹೇಗೆ ಬಂತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಣ್ಣ ಮಕ್ಕಳು. ಪಾಸ್ ಗಲೀಜು ಮಾಡಿಕೊಂಡಿದ್ದರೆ ಈ ರೀತಿ ಮಾಡಿಕೊಳ್ಳದಂತೆ ಬುದ್ಧಿವಾದ ಹೇಳಬೇಕಿತ್ತು. ಆದರೆ, ನಿರ್ವಾಹಕ ರಸ್ತೆ ಮಧ್ಯೆಯಲ್ಲಿಯೇ ಇಳಿಸಿ ಹೋಗಿರುವುದು ಅಕ್ಷಮ್ಯ ಅಪರಾಧ? ಇಂತಹವರ ವಿರುದ್ಧ ಕ್ರಮವಾಗಬೇಕು ಎಂದು ವಿದ್ಯಾರ್ಥಿ ತಂದೆ ಶರಣಪ್ಪ ತಳವಗೇರಿ ಅವರು ಹೇಳಿದ್ದಾರೆ.
ಘಟನೆ ತೀರಾ ಅಮಾನವೀಯ. 2ನೇ ತರಗತಿ ಬಾಲಕನನ್ನು ನಡುರಸ್ತೆಯಲ್ಲಿ ಇಳಿಸಿ ಹೋಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಕುರಿತು ನಮಗೂ ದೂರು ಬಂದಿದೆ ಎಂದು ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಡಿದ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ ಡಿಟಿಒ ದೇವಾನಂದ ಬಿರಾದಾರ ಅವರು, ಈ ಬಗ್ಗೆ ದೂರು ಬಂದಿದೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಡಿಪೋ ಮ್ಯಾನೇಜರ್‌ಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.