ಬೆಂಗಳೂರಿಗೆ ಹೊಸ ರೂಪ ನೀಡುವ ವಿಚಾರದಲ್ಲಿ ಈಗಾಗಲೇ ಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಜತೆ ಯುವ ಪ್ರತಿಭೆಗಳ ಆಲೋಚನೆಗಳನ್ನು ಪಡೆಯಬೇಕಿದೆ. ಬೆಂಗಳೂರು ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಜನರ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು(ಜು.26): ನಗರಕ್ಕೆ ಹೊಸ ರೂಪ ನೀಡುವ ಮಹತ್ವಾಕಾಂಕ್ಷೆ ಹೊಂದಿದ್ದು, ಭವಿಷ್ಯದ ಬೆಂಗಳೂರನ್ನು ಮುಂದಿನ ಪೀಳಿಗೆಗಾಗಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇನೆ. ಅದಕ್ಕಾಗಿ ಮಕ್ಕಳು, ಯುವ ಜನರ ಸಲಹೆ ಪಡೆಯುತ್ತಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಂಗಳವಾರ ಭಾರತ ಸ್ಕೌಟ್ಸ್ ಭವನದಲ್ಲಿ ನಡೆದ ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆ ವೀಕ್ಷಿಸಿ ಅವರು ಮಾತನಾಡಿದರು. ಬೆಂಗಳೂರಿಗೆ ಹೊಸ ರೂಪ ನೀಡುವ ವಿಚಾರದಲ್ಲಿ ಈಗಾಗಲೇ ಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಜತೆ ಯುವ ಪ್ರತಿಭೆಗಳ ಆಲೋಚನೆಗಳನ್ನು ಪಡೆಯಬೇಕಿದೆ. ಬೆಂಗಳೂರು ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಜನರ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದರು.
12 ಕಿ.ಮೀ. ಕೆಂಪೇಗೌಡ ಪಾರಂಪರಿಕ ಕಾರಿಡಾರ್; ಡಿಪಿಆರ್ ಸಿದ್ಧಪಡಿಸಲು ಸೂಚನೆ
ನಾಯಕರನ್ನು ಸೃಷ್ಟಿಸುವವನು ನಿಜವಾದ ನಾಯಕನೇ ಹೊರತು, ಹಿಂಬಾಲಕರನ್ನು ಸೃಷ್ಟಿಸುವವನಲ್ಲ ಎಂಬ ಮಾತಿದೆ. ವಿದ್ಯಾರ್ಥಿಗಳು ಕೂಡ ತಾವು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರಗಳಲ್ಲಿ ನಾಯಕರಾಗಿ ಬೆಳೆಯಬೇಕು. ಸದೃಢವಾಗಿ ಬೆಳೆದು, ಸಮಾಜಕ್ಕೆ ಕೊಡುಗೆ ನೀಡಬೇಕು. ಸಮಾಜಕ್ಕೆ ತಾವು ಏನು ಮಾಡುತ್ತೀರಿ ಎಂಬುದು ಮುಖ್ಯ. ಸಾಧನೆಯ ಹಾದಿಯಲ್ಲಿ ಎದುರಾಗುವ ಅಡ್ಡಿ, ಆತಂಕಗಳನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ ಎಂದು ಹೇಳಿದರು.
ಬೆಂಗಳೂರು ಪೂರ್ವ ನಿಯೋಜಿತ ನಗರವಲ್ಲ. ಇದಕ್ಕೆ ಹೊಸ ರೂಪ ನೀಡುವುದು ಸವಾಲಿನ ಕೆಲಸ. ಇದಕ್ಕಾಗಿ ನಾವು ಸೋಮವಾರ ಬೆಂಗಳೂರು ವಿನ್ಯಾಸಕ್ಕೆ ಅಂತಾರಾಷ್ಟ್ರೀಯ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಇಲ್ಲಿನ ವಾತಾವರಣ ಹಾಗೂ ಸಂಸ್ಕೃತಿಗೆ ಮನಸೋತು ಬೆಂಗಳೂರಿಗೆ ಬಂದವರು ಮರಳಿ ತಮ್ಮ ಊರಿಗೆ ಹೋಗುವುದಿಲ್ಲ. ಬೆಂಗಳೂರು ಜ್ಞಾನ, ಶಿಕ್ಷಣ, ವೈದ್ಯಕೀಯ, ಐಟಿ ರಾಜಧಾನಿ ಆಗಿದೆ. ಇಲ್ಲಿ ಓದಿ ಬೆಳೆದವರು ವಿಶ್ವದ ಪ್ರಮುಖ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಬ್ರ್ಯಾಂಡ್ ಬೆಂಗಳೂರು ಕುರಿತ ಚರ್ಚಾ ಸ್ಪರ್ಧೆಯಲ್ಲಿ 17 ಶಾಲೆಗಳ 300ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಉಪಸ್ಥಿತರಿದ್ದರು.