ಮೀನುಗಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಪರ್ ಕೊಡುಗೆ

By Web Desk  |  First Published Aug 23, 2019, 1:19 PM IST

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೀನುಗಾರರಿಗೆ ಬಂಪರ್ ಆಫರ್ ನೀಡಿದ್ದಾರೆ. ತೆರಿಗೆ ರಹಿತ ಡೀಸೆಲ್ ಪೂರೈಕೆಗೆ ಸೂಚಿಸಿದ್ದಾರೆ.


ಬೆಂಗಳೂರು [ಆ.23]:   ಮೀನುಗಾರರ ಯಾಂತ್ರೀಕೃತ ಬೋಟ್‌ಗಳಿಗೆ ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್‌ ನೀಡುವಂತೆ ಹಾಗೂ ತೆರಿಗೆ ರಹಿತ ಡೀಸೆಲ್‌ನ ಪ್ರಮಾಣವನ್ನು 400 ಲೀಟರ್‌ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪಶುಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಉಡುಪಿ ಶಾಸಕ ರಘುಪತಿ ಭಟ್‌ ನೇತೃತ್ವದ ಮಲ್ಪೆ ಮೀನುಗಾರರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿ, ಕೆಲವು ಬೇಡಿಕೆಗಳನ್ನು ಮುಂದಿಟ್ಟರು. ಕಳೆದ ಎರಡು ವರ್ಷಗಳಿಂದ ಡೀಸೆಲ್‌ ಬೆಲೆ ಏರಿಕೆ, ಮತ್ಸ್ಯ ಕ್ಷಾಮ ಮತ್ತು ಮೀನಿಗೆ ಯೋಗ್ಯಧಾರಣೆ ಸಿಗದೆ ಮೀನುಗಾರರು ಸುಸ್ತಿದಾರರಾಗಿದ್ದಾರೆ. ಪ್ರಸ್ತುತ ಮೀನುಗಾರರಿಂದ ಮಾರಾಟ ತೆರಿಗೆ ಪಡೆದುಕೊಂಡು ನಂತರ ಅವರ ಖಾತೆಗೆ ಈ ಮೊತ್ತವನ್ನು ಸರ್ಕಾರ ಜಮೆ ಮಾಡುತ್ತಿದೆ. ಈ ತೆರಿಗೆ ಹಣ ಕ್ರಮಬದ್ಧವಾಗಿ ಬಾರದಿರುವ ಕಾರಣ ತೊಂದರೆಯಾಗುತ್ತಿದೆ. ಆದ್ದರಿಂದ ಹಿಂದಿನಂತೆ ಡೆಲಿವರಿ ಪಾಯಿಂಟ್‌ನಲ್ಲಿ ತೆರಿಗೆ ರಹಿತ ಡೀಸೆಲ್‌ ನೀಡುವಂತೆ ಮತ್ತು ಡೀಸೆಲ್‌ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಿದರು.

Latest Videos

undefined

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಹಿಂದಿನ ಪದ್ಧತಿಯಂತೆ ಡೀಸೆಲ್‌ ಒದಗಿಸುವಂತೆ ಮತ್ತು ಡೀಸೆಲ್‌ ಪ್ರಮಾಣವನ್ನು 400 ಲೀಟರ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 ದೋಣಿ ಮುಳುಗಿ ಮೀನುಗಾರರ ಸಾವು: ಕೇಂದ್ರಕ್ಕೆ ಪತ್ರ

ಭಾರತೀಯ ನೌಕಾ ಪಡೆಯ ಹಡಗೊಂದಕ್ಕೆ ಡಿಕ್ಕಿ ಹೊಡೆದು, ಸುವರ್ಣ ತ್ರಿಭುಜ ದೋಣಿ ಮುಳುಗಿದ್ದರಿಂದ ಮೀನುಗಾರರು ಮೃತರಾಗಿದ್ದು, ಅವರ ಕುಟುಂಬಕ್ಕೆ ಪರಿಹಾರ ಕೊಡಿಸುವ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಶ್ವಾಸನೆ ನೀಡಿದರು.

ಮೃತರ ಕುಟುಂಬಗಳು ಸಂಕಷ್ಟದಲ್ಲಿದ್ದು, ಅವರಿಗೆ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಿಂದ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.

click me!