ಕೊಳೆವೆ ಬಾವಿಯಿಂದ ಚಿಮ್ಮುತ್ತಿರುವ ನೀರು| ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಡೆದ ಘಟನೆ| ತೀವ್ರ ಬರದಿಂದ ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟ| ಕಳೆದ ಮೂರು ತಿಂಗಳಿಂದ ಭಾರಿ ಮಳೆಯಾದ ಪರಿಣಾಮ ದಿಢೀರ್ ಹೆಚ್ಚಳವಾದ ಅಂತರ್ಜಲ ಮಟ್ಟ|
ಕೊಪ್ಪಳ(ಡಿ.12): ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಅಂತರ್ಜಲ ಮಟ್ಟ ಹೆಚ್ಚಾದ ಪರಿಣಾಮ ಕೊಳೆವೆ ಬಾವಿಯಿಂದ ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿರುವ ಘಟನೆ ಜಿಲ್ಲೆಯ ನಿಲೋಗಲ್ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿಲೋಗಲ್ ಗ್ರಾಮದ ತಾ.ಪಂ. ಸದಸ್ಯ ಹಾಗೂ ರೈತ ಮಹಿಳೆ ಮಂಜುಳಾ ಪಾಟೀಲ್ ಅವರು ಬುಧವಾರ ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದರು. ಈ ವೇಳೆ ಕೊಳವೆ ಬಾವಿಯಿಂದ ಸುಮಾರು 20ರಿಂದ 30 ಅಡಿವರೆಗೆ ನೀರು ಚಿಮ್ಮುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸರಿಯಾಗಿ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿತ ಕಂಡಿತ್ತು. ಅದರಲ್ಲೂ ಕುಷ್ಟಗಿ ತಾಲೂಕಿನ ಅಂತರ್ಜಲ ಮಟ್ಟ ರೆಡ್ ಝೋನ್‌ಗೆ ಇಳಿದಿತ್ತು. ಆದರೆ, ಕಳೆದ ಮೂರು ತಿಂಗಳಲ್ಲಿ ಮೂರು ಬಾರಿ ವ್ಯಾಪಕವಾಗಿ ಮಳೆಯಾದ ಪರಿಣಾಮ ಅಂತರ್ಜಲ ಮಟ್ಟ ದಿಢೀರ್ ಹೆಚ್ಚಳವಾಗಿದೆ. ಇದರಿಂದ ಈ ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ.