
ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್
ಉತ್ತರಕನ್ನಡ ಜಿಲ್ಲೆಯ ಅತೀ ಸೂಕ್ಷ್ಮ ತಾಲೂಕು ಎಂದು ಗುರುತಿಸಿಕೊಂಡಿದೆ ಭಟ್ಕಳ. ಹಲವು ಉಗ್ರಗಾಮಿಗಳ ಹುಟ್ಟೂರಾಗಿರುವ ಭಟ್ಕಳದಲ್ಲಿ ಇದೀಗ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯ ಇ-ಮೇಲ್ ಬಂದಿದೆ. ಈ ಸಂದೇಶ ಬಂದ ಕೂಡಲೇ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಿದ್ದು, ಈಗಾಗಲೇ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ನಾಲ್ವೆಡೆ ತಪಾಸಣೆ ನಡೆಸಿದೆ.
ಹೌದು, ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಮೊದಲೇ ಹಲವು ಉಗ್ರಗಾಮಿಗಳ ಹುಟ್ಟೂರು. ಯಾಸಿನ್ ಭಟ್ಕಳ, ಇಕ್ಬಾಲ್ ಭಟ್ಕಳ್, ರಿಯಾಜ್ ಭಟ್ಕಳ ಮುಂತಾದವರು ಉಗ್ರ ಸಂಘಟನೆಯಲ್ಲಿ ತೊಡಗಿ ಭಟ್ಕಳದ ಹೆಸರು ಹಾಳು ಮಾಡಿದ್ದರಿಂದ ದೇಶದಲ್ಲಿ ಎಲ್ಲೇ ಉಗ್ರ ಚಟುವಟಿಕೆಗಳು ನಡೆದರೂ ಮೊದಲು ಭಟ್ಕಳದತ್ತ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳು ಕಣ್ಣಿಡುತ್ತಿವೆ. ಇದಕ್ಕಾಗಿಯೇ ರಾ, ಕೇಂದ್ರ ಐಬಿ, ರಾಜ್ಯ ಐಬಿ, ಐಎಸ್‌ಡಿ ಮುಂತಾದ ಗುಪ್ತಚರ ಇಲಾಖೆಗಳು ಭಟ್ಕಳದಲ್ಲಿ ಠಿಕಾಣಿ ಹೂಡಿವೆ.
ಇದೀಗ ಭಟ್ಕಳ ಶಹರ ಪೊಲೀಸ್ ಠಾಣೆಗೆ ಎರಡು ಬಾರಿ ಇ-ಮೇಲ್ ಮಾಡಿ ಭಟ್ಕಳ ನಗರವನ್ನು 24 ಗಂಟೆಯೊಳಗೆ ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನ ವ್ಯಕ್ತಿಯಿಂದ ಜುಲೈ10ರ ಬೆಳಗ್ಗೆ 10 -30 ಕ್ಕೆ kannnannandik@gmail.comನಿಂದ ಭಟ್ಕಳ ಶಹರ ಠಾಣೆಗೆ ಇ-ಮೇಲ್ ಸಂದೇಶ ರವಾನೆಯಾಗಿದ್ದು, ಇಲಾಖೆಯಲ್ಲಿ ಹಾಗೂ ಜನರಲ್ಲಿ ಭೀತಿ ಸೃಷ್ಠಿಸಲು ಯತ್ನಿಸಲಾಗಿದೆ. ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಗೆ ಈಮೇಲ್ ಸಂದೇಶ ರವಾನೆಯಾಗಿದ್ದರಿಂದ ಎಚ್ಚೆತ್ತುಕೊಂಡಿರುವ ನಾಲ್ವೆಡೆ ಭಿಗಿ ಬಂದೋಬಸ್ತ್ ನಡೆಸಿದ್ದಾರೆ.
ಬಾಂಬ್ ಸ್ಫೋಟಿಸೋ ಇ-ಮೇಲ್ ಬಂದ ನಂತರ ಭಟ್ಕಳ ಪೊಲೀಸರಂತೂ ಅಲರ್ಟ್ ಆಗಿದ್ದು, ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್‌ನಿಂದ ಭಟ್ಕಳ ನಗರದ ಪ್ರಮುಖ ಪ್ರದೇಶದಲ್ಲಿ ತಪಾಸಣೆ ನಡೆಸಲಾಗಿದೆ. ಭಟ್ಕಳ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ ನಡೆದಿದ್ದು, ಎಲ್ಲೆಡೆ ಹದ್ದಿನಗಣ್ಣಿಡಲಾಗಿದೆ.
ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣಾ PSI ನವೀನ್ ನಾಯ್ಕ, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಕಣ್ಣನ್ ಗುರುಸ್ವಾಮಿ ವಿರುದ್ಧ ಸುವೋ ಮೋಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಇ-ಮೇಲ್ ಕಳುಹಿಸಿದ ಕಣ್ಣನ್ ಗುರುಸ್ವಾಮಿ ಎಂಬ ವ್ಯಕ್ತಿ ಯಾರು ಹಾಗೂ ಎಲ್ಲಿಂದ ಈ ಸಂದೇಶ ಬಂದಿದೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಫೀಲ್ಡಿಗಿಳಿದಿದ್ದಾರೆ.
ಒಟ್ಟಿನಲ್ಲಿ ಯಾವುದೋ ಅನಾಮಿಕ ವ್ಯಕ್ತಿ ಶಾಂತಿ ಕದಡಿಸುವ ಉದ್ದೇಶದಿಂದ ಈ ಸಂದೇಶ ಕಳುಹಿಸಿದ್ದಾನೋ ಅಥವಾ ತೋಳ ಬಂತು ತೋಳ ಕಥೆ ಸೃಷ್ಠಿಸಿ ನೈಜವಾಗಿ ಬಾಂಬ್ ಬ್ಲಾಸ್ಟ್ ಮಾಡೋ ಯೋಜನೆಯೋ ಎಂಬುದು ಆರೋಪಿಯ ಪತ್ತೆಯ ಬಳಿಕ ತಿಳಿಯಬೇಕಷ್ಟೇ.