ಡೀಸೆಲ್‌ಗಾಗಿ ಬಂಕ್‌ಗಳಲ್ಲಿ ಕ್ಯೂ ನಿಲ್ಲುತ್ತಿರುವ ಬಿಎಂಟಿಸಿ ಬಸ್‌ಗಳು..!

Published : Jun 26, 2022, 01:33 PM ISTUpdated : Jun 26, 2022, 02:06 PM IST
ಡೀಸೆಲ್‌ಗಾಗಿ ಬಂಕ್‌ಗಳಲ್ಲಿ ಕ್ಯೂ ನಿಲ್ಲುತ್ತಿರುವ ಬಿಎಂಟಿಸಿ ಬಸ್‌ಗಳು..!

ಸಾರಾಂಶ

*  ಡಿಪೋಗಳಿಗೆ ಸಗಟು ಪೂರೈಕೆ ನಿಲ್ಲಿಸಿದ ಎಚ್‌ಪಿಸಿಎಲ್‌ *  ಬಂಕ್‌ಗಳಿಗೆ ಬಸ್‌ ಬಂದರೆ ಟ್ರಾಫಿಕ್‌ *  3 ದಿನ ಸಮಸ್ಯೆ ಇಲ್ಲ  

ಬೆಂಗಳೂರು(ಜೂ.26): ಚಿಲ್ಲರೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಡೀಸೆಲನ್ನು ಬಿಎಂಟಿಸಿಗೆ ಪೂರೈಕೆ ಮಾಡದಂತೆ ಹಿಂದೂಸ್ಥಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ತನ್ನ ವ್ಯಾಪ್ತಿಯ ಪೆಟ್ರೋಲ್‌ ಬಂಕ್‌ಗಳಿಗೆ ಫರ್ಮಾನು ಹೊರಡಿಸಿದ್ದು, ಇನ್ನು ಮುಂದೆ ಎಲ್ಲ ಬಸ್‌ಗಳು ಬಂಕ್‌ಗಳಲ್ಲಿಯೇ ಡೀಸೆಲ್‌ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಸಗಟು ಡೀಸೆಲ್‌ ವ್ಯಾಪಾರದಲ್ಲಿ ಪ್ರತಿ ಲೀಟರ್‌ಗೆ .30 ಹೆಚ್ಚಳ ಮಾಡಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಆದೇಶಿಸಿತ್ತು. ಇದರಿಂದ ಬಿಎಂಟಿಸಿಗೆ ಕೋಟ್ಯಂತರ ರುಪಾಯಿ ಹೊರೆ ಬಿದ್ದಿತ್ತು. ಇದನ್ನು ತಪ್ಪಿಸಲು ಬಂಕ್‌ಗಳಿಂದ ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್‌ ಖರೀದಿಗೆ ಮುಂದಾಗಿತ್ತು. ಇದಕ್ಕೆ ಪೂರಕವಾಗಿ ಬಂಕ್‌ ಮಾಲಿಕರು ಬಿಎಂಟಿಸಿ ಡಿಪೋಗೆ ಇಂಧನ ಪೂರೈಸುತ್ತಿದ್ದರು. ಆದರೆ, ಇದೀಗ ಎಚ್‌ಪಿಸಿಎಲ್‌ ಚಿಲ್ಲರೆ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್‌ ಖರೀದಿ ಮಾಡುವವರಿಗೆ ಪೂರೈಕೆ ಮಾಡದಂತೆ ನಿರ್ಬಂಧ ವಿಧಿಸಿದೆ. ಇದರಿಂದ ಡಿಪೋಗಳಿಗೆ ಡೀಸೆಲ್‌ ಪೂರೈಕೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬಸ್‌ಗಳು ಬಂಕ್‌ಗೆ ತೆರಳಿ ಇಂಧನ ತುಂಬಿಸಿ ಕೊಳ್ಳಬೇಕಿದೆ.

ವಾಯವ್ಯ ಸಾರಿಗೆಗೆ ಬರುವ ಗುಜರಿ ಬಸ್‌ನಿಂದಲೂ ಲಾಭ..!

3 ದಿನ ಸಮಸ್ಯೆ ಇಲ್ಲ

ಪ್ರಸ್ತುತ ಎಲ್ಲ ಡಿಪೋಗಳಲ್ಲಿ ಮುಂದಿನ ಮೂರು ದಿನಗಳಿಗೆ ಅಗತ್ಯವಿರುವ ಡೀಸೆಲ್‌ ದಾಸ್ತಾನು ಮಾಡಲಾಗಿದೆ. ಮೂರು ದಿನ ಡೀಸೆಲ್‌ ಪೂರೈಕೆ ಆಗದಿದ್ದರೂ ಬಸ್‌ಗಳಿಗೆ ಸಮಸ್ಯೆ ಇಲ್ಲ. ಆ ಬಳಿಕ ಸಮಸ್ಯೆ ಎದುರಾಗುವ ಸಾಧ್ಯೆಯಿದೆ. ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡುವುದಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಲ್ಲದೆ, ಈ ಸಂಬಂಧ ಎಚ್‌ಪಿಸಿಎಲ್‌ಗೆ ಪತ್ರ ಬರೆದಿದ್ದು, ಬಿಎಂಟಿಸಿ ಲಾಭದ ಉದ್ದಿಮೆಯಲ್ಲ. ಸಾರ್ವಜನಿಕ ಸೇವೆಗಾಗಿ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಚಿಲ್ಲರೆ ಬೆಲೆಗೆ ಪೂರೈಕೆ ಮಾಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಖಾಸಗಿ ಬಂಕ್‌ಗಳು ಡಿಪೋಗಳಿಗೆ ಪೂರೈಕೆ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.

ಬಂಕ್‌ಗಳಿಗೆ ಬಸ್‌ ಬಂದರೆ ಟ್ರಾಫಿಕ್‌

ಬೆಂಗಳೂರು ನಗರದಲ್ಲಿನ ಬಹುತೇಕ ಪೆಟ್ರೊಲ್‌ ಬಂಕ್‌ಗಳು ಇಕ್ಕಟ್ಟಾದ ರಸ್ತೆಗಳಲ್ಲಿವೆ. ಈ ಬಂಕ್‌ಗಳಲ್ಲಿ ಏಕ ಕಾಲಕ್ಕೆ 10 ಬಸ್‌ಗಳು ಬಂದರೂ ಸಂಚಾರ ದಟ್ಟಣೆ ಉಂಟಾಗಲಿದೆ. ಇದರಿಂದ ಸಾಕಷ್ಟು ತೊಂದರೆಯಾಗುವ ಸಾಧ್ಯತೆಯಿದೆ ಎಂದು ಬಿಎಂಟಿಸಿ ಬಸ್‌ ಚಾಲಕರೊಬ್ಬರು ಅಭಿಪ್ರಾಯ ಪಡುತ್ತಾರೆ.
 

PREV
Read more Articles on
click me!

Recommended Stories

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸುಟ್ಟು ಕರಕಲಾದ ರೆನಾಲ್ಟ್ ಡಸ್ಟರ್ ಕಾರು!
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್