
ಬೆಂಗಳೂರು(ಮಾ.19): ರಾಜ್ಯ ಸರ್ಕಾರದ ‘ವನಿತಾ ಸಂಗಾತಿ ಯೋಜನೆ’ಯಡಿ ಇನ್ನು ಮುಂದೆ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಕೇವಲ 105ಕ್ಕೆ ಬಿಎಂಟಿಸಿ ಮಾಸಿಕ ಬಸ್ ಪಾಸ್ ಸಿಗಲಿದೆ.
ಕಳೆದ ವರ್ಷ ಬಜೆಟ್‌ನಲ್ಲಿ ಗಾರ್ಮೆಂಟ್ಸ್ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಬಿಎಂಟಿಸಿ ಬಸ್ ಪಾಸ್ ನೀಡುವ ಈ ಮಹತ್ವದ ಯೋಜನೆ ಘೋಷಿಸಲಾಗಿತ್ತು. ಮಾಸಿಕ ಬಸ್ ಪಾಸ್‌ನ ನಿಗದಿತ ದರದಲ್ಲಿ ಗಾರ್ಮೆಂಟ್ಸ್ ಕಂಪನಿಗಳು ಶೇ.60, ರಾಜ್ಯ ಸರ್ಕಾರ ಶೇ.20, ಬಿಎಂಟಿಸಿ ಹಾಗೂ ಮಹಿಳೆ ತಲಾ ಶೇ.10ರಷ್ಟು ಹಣ ಭರಿಸಲಿವೆ. ಇದರಿಂದಾಗಿ ಮಹಿಳೆಯರು ಕೇವಲ 105 ಪಾವತಿಸಿ ಬಸ್ ಪಾಸ್ ಪಡೆಯಬೇಕು. ಪ್ರಸ್ತುತ ಬಿಎಂಟಿಸಿಯ ಮಾಸಿಕ ಬಸ್ ಪಾಸ್ ದರ 1,050 ಇದೆ.
ರಾಜ್ಯದ ಸಾರಿಗೆ ನೌಕರರಿಗೆ ಸಿಹಿಸುದ್ದಿ
ಯೋಜನೆಗೆ ಕಾರ್ಮಿಕ ಇಲಾಖೆಯಿಂದ ಶೀಘ್ರದಲ್ಲೇ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಪ್ರಸ್ತುತ ನಗರದ ಗಾರ್ಮೆಂಟ್ಸ್‌ಗಳಲ್ಲಿ ಸುಮಾರು ಐದು ಲಕ್ಷಕ್ಕೂ ಅಧಿಕ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರಿಯಾಯಿತಿ ದರ ಮಾಸಿಕ ಬಸ್ ಪಾಸ್ ಸಿಕ್ಕರೆ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ. ಕಾರ್ಮಿಕ ಇಲಾಖೆ ಅನುಮೋದನೆ ಸಿಕ್ಕ ಬಳಿಕ ಪಾಸ್ ವಿತರಣೆಗೆ ಕ್ರಮ ವಹಿಸುವುದಾಗಿ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.