ಶಕ್ತಿ ಯೋಜನೆ ಸಮೀಕ್ಷೆಗೆ 200 ಸಿಬ್ಬಂದಿ ನೇಮಿಸಿದ ಬಿಎಂಟಿಸಿ

Published : Jun 28, 2023, 05:59 AM IST
ಶಕ್ತಿ ಯೋಜನೆ ಸಮೀಕ್ಷೆಗೆ 200 ಸಿಬ್ಬಂದಿ ನೇಮಿಸಿದ ಬಿಎಂಟಿಸಿ

ಸಾರಾಂಶ

ಎಲ್ಲ ಘಟಕಗಳಿಗೆ ಸಲ್ಲಿಕೆಯಾದ ವರದಿಯನ್ನು ಒಂದೆಡೆ ಸೇರಿಸಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಅಂತಿಮ ವರದಿ ಸಲ್ಲಿಸಲಾಗುತ್ತದೆ. ಆ ವರದಿ ಆಧರಿಸಿ ಬಿಎಂಟಿಸಿಯಿಂದ ಬಸ್‌ ಸೇವೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. 

ಬೆಂಗಳೂರು(ಜೂ.28): ‘ಶಕ್ತಿ’ ಯೋಜನೆ ಜಾರಿ ನಂತರ ಹೆಚ್ಚುತ್ತಿರುವ ಪ್ರಯಾಣಿಕರ ಒತ್ತಡ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಜನರಿಂದ ಅಭಿಪ್ರಾಯ ಸಂಗ್ರಹಿಸಲು ಬಿಎಂಟಿಸಿ 200 ಮಂದಿ ಸಿಬ್ಬಂದಿ ನೇಮಿಸಿದೆ. ಈ ಸಿಬ್ಬಂದಿ ಹಲವು ಕಡೆಗಳಲ್ಲಿ ಜನರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ವರದಿ ಸಲ್ಲಿಸಲಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ನಂತರ ನಾಲ್ಕೂ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಯೋಜನೆ ಜಾರಿಗೂ ಮುನ್ನ ಬಿಎಂಟಿಸಿ ಬಸ್‌ಗಳಲ್ಲಿ ನಿತ್ಯ ಸರಾಸರಿ 25ರಿಂದ 27 ಲಕ್ಷ ಜನರು ಸಂಚರಿಸುತ್ತಿದ್ದರು. ಅದೇ ಈಗ ನಿತ್ಯ ಸರಾಸರಿ 32 ಲಕ್ಷಕ್ಕೂ ಹೆಚ್ಚಿನ ಜನರು ಸಂಚರಿಸುತ್ತಿದ್ದಾರೆ. ಹೀಗಾಗಿ ಯೋಜನೆ ಜಾರಿ ನಂತರ ಬಸ್‌ ಸೇವೆಯಲ್ಲಾಗಿರುವ ಬದಲಾವಣೆ ಕುರಿತಂತೆ ಬಿಎಂಟಿಸಿ ವ್ಯವಸ್ಥಾಪಕಿ ಸತ್ಯವತಿ ಅವರು ಕಳೆದ ವಾರ ಖುದ್ದು ಬಸ್‌ನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದರು. ಇದೀಗ ಜನರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದ್ದಾರೆ.

ಉಚಿತ ಪ್ರಯಾಣದ ಎಫೆಕ್ಟ್‌: ಮಹಿಳೆಯರು ತುಂಬಿದ್ದ ಬಸ್ಸಲ್ಲಿ ತಳ್ಳಾಟ, ವಿದ್ಯಾರ್ಥಿನಿ ಅಸ್ವಸ್ಥ

ಸಿಬ್ಬಂದಿ ನಗರದ ಹಲವು ಬಸ್‌ ನಿಲ್ದಾಣಗಳಿಗೆ ತೆರಳಿ ಪ್ರಯಾಣಿಕರಿಂದ ಬಸ್‌ ಸೇವೆಯಲ್ಲಾಗಿರುವ ಬದಲಾವಣೆ, ಸೇವೆಯನ್ನು ಉತ್ತಮಗೊಳಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಜತೆಗೆ ಹೆಚ್ಚಿನ ಪ್ರಯಾಣಿಕರು ಸಂಚರಿಸುವ ಮಾರ್ಗವನ್ನು ಗುರುತಿಸುವುದು, ಹೆಚ್ಚುವರಿ ಬಸ್‌ ಸಂಚಾರದ ಅವಶ್ಯಕತೆ ಇದೆಯೇ ಎಂಬ ಬಗ್ಗೆ ತಿಳಿಸಬೇಕಿದೆ. ಯಾವ ಮಾರ್ಗದಲ್ಲಿ ಬಸ್‌ ಸಂಚಾರದ ಸಂಖ್ಯೆ ಕಡಿಮೆಯಿದೆ, ಅಲ್ಲಿ ಪ್ರಯಾಣಿಕರು ಎಷ್ಟಿದ್ದಾರೆ, ಆ ಮಾರ್ಗದಲ್ಲಿ ಎಷ್ಟುಪ್ರಮಾಣದ ಬಸ್‌ಗಳನ್ನು ಸೇವೆಗೆ ನಿಯೋಜಿಸುವ ಅವಶ್ಯಕತೆಯಿದೆ ಎಂಬುದು ಸೇರಿದಂತೆ ಇನ್ನಿತರ ವಿಚಾರಗಳನ್ನು ಪರಿಶೀಲಿಸಿ ತಮ್ಮ ಘಟಕ ವ್ಯವಸ್ಥಾಪಕರು ಅಥವಾ ಸಂಬಂಧಪಟ್ಟಅಧಿಕಾರಿಗಳಿಗೆ ವರದಿ ಸಲ್ಲಿಸಲ್ಲಿದಾರೆ.

ನಂತರ ಎಲ್ಲ ಘಟಕಗಳಿಗೆ ಸಲ್ಲಿಕೆಯಾದ ವರದಿಯನ್ನು ಒಂದೆಡೆ ಸೇರಿಸಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಅಂತಿಮ ವರದಿ ಸಲ್ಲಿಸಲಾಗುತ್ತದೆ. ಆ ವರದಿ ಆಧರಿಸಿ ಬಿಎಂಟಿಸಿಯಿಂದ ಬಸ್‌ ಸೇವೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಒಂದು ವಾರದ ಅವಧಿಯಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸಿ, ವರದಿ ನೀಡಲಾಗುವುದು. ನಂತರ ಬಿಎಂಟಿಸಿ ಸೇವೆಯಲ್ಲಿ ಬದಲಾವಣೆ ತರಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV
Read more Articles on
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ