ನವ ಬೆಂಗಳೂರು ನಿರ್ಮಾಣಕ್ಕೆ ನೀಲನಕ್ಷೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

By Kannadaprabha NewsFirst Published Sep 10, 2022, 5:42 AM IST
Highlights

ಐಟಿ ಕಂಪನಿಗಳ ದೂರು ಪರಿಹಾರಕ್ಕೆ ಸರ್ಕಾರ, ನಾನು ಸಿದ್ಧ, ಐಟಿ ಕಂಪನಿಗಳು ಬೆಂಗಳೂರು ಬಿಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ 

ಬೆಂಗಳೂರು(ಸೆ.10):  ಉದ್ಯಾನ ನಗರಿಯ ಮೂಲಭೂತ ಸೌಕರ್ಯಗಳ ಕೊರತೆ ಕುರಿತ ಐಟಿ-ಬಿಟಿ ಕಂಪನಿಗಳ ದೂರುಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಹಾಗೂ ಸಚಿವನಾಗಿ ನಾನು ಕೂಡ ಭರವಸೆ ನೀಡಿದ್ದೇನೆ. ಭವಿಷ್ಯದಲ್ಲಿ ಬೆಂಗಳೂರನ್ನು ಹೊಸ ಮಾದರಿಯಲ್ಲಿ ನಿರ್ಮಾಣ ಮಾಡಲು ನೀಲ ನಕ್ಷೆ ಸಿದ್ಧಪಡಿಸಲಾಗುತ್ತಿದೆ. ಹೀಗಾಗಿ ಯಾವ ಕಂಪನಿಗಳೂ ಬೆಂಗಳೂರು ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಪಿಇಎಸ್‌ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡ ಬಳಕ ಸುದ್ದಿಗಾರರೊಂದಿಗೆ ಕೆಲ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಐಟಿ ಬಿಟಿ ಕಂಪನಿಗಳ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರವು ಕ್ರಮ ವಹಿಸುತ್ತಿದೆ. ಕೇಂದ್ರ ಸಚಿವನಾಗಿ ನಾನು ಕೂಡ ಕಂಪನಿಗಳ ಜೊತೆ ನಿಗಟವಾಗಿದ್ದು ಮನವಿ ಮಾಡುತ್ತೇನೆ. ಐಟಿ ಬಿಟಿ ಕಂಪನಿಗಳಿಗೆ ಬೆಂಗಳೂರು ಅತ್ಯಂತ ಆಕರ್ಷಕ ನಗರಿಯಾಗಿದೆ. ಯಾವುದೇ ಕಂಪನಿಗಳು ಬೆಂಗಳೂರು ತೊರೆಯುವುದಿಲ್ಲ ಎಂಬ ಭರವಸೆ ಇದೆ ಎಂದು ಹೇಳಿದರು.

ಸ್ಟಾರ್ಟ್‌ಅಪ್ ತವರಾಗಿದೆ ಪ್ರಧಾನಿ ಮೋದಿ ನವ ಭಾರತ, ಯುವಕರಿಗೆ ಹೆಚ್ಚಿನ ಅವಕಾಶ, ರಾಜೀವ್ ಚಂದ್ರಶೇಖರ್!

ಕೆಲ ಜನಪ್ರತಿನಿಧಿಗಳೂ ನಗರದಲ್ಲಿ ಭೂ ಒತ್ತುವರಿಯಲ್ಲಿ ಶಾಮೀಲಾರಿರುವ ಆರೋಪಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನೆಗೆ, ಬೆಂಗಳೂರಿನಲ್ಲಿ ಕಳೆದ 90 ವರ್ಷದ ಇತಿಹಾಸದಲ್ಲೇ ದಾಖಲೆಯ ಮಳೆ ಬಿದ್ದಿದೆ. ಕಳೆದ ಹತ್ತು ಹದಿನೈದು ವರ್ಷಗಳಿಂದ ನಿರ್ಮಾಣ ಕಾಮಗಾರಿಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ಇದಕ್ಕೆ ರಾಜಕಾರಣಿಗಳು, ಬಿಲ್ಡರ್‌ಗಳು ಕಾರಣವಾ, ಗೊತ್ತಿಲ್ಲ. ನಾನು ಕೂಡ ಬೆಂಗಳೂರು ನಾಗರಿಕ. ಇಲ್ಲಿನ ನಾಗರಿಕರ ಕಾಳಜಿ ನನಗೂ ಇದೆ. ಹಾಗಾಗಿ ಹೊಸ ಬೆಂಗಳೂರು ನಿರ್ಮಾಣದ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಬೆಂಗಳೂರು ಕೇವಲ ಐಟಿಗೆ ಸೀಮಿತ ಆಗದಂತೆ ಕ್ರಮ

ಬೆಂಗಳೂರನ್ನು ಹೊಸ ಮಾದರಿಯಲ್ಲಿ ನಿರ್ಮಾಣ ಮಾಡಲು ನೀಲ ನಕ್ಷೆ ಸಿದ್ಧಪಡಿಸಲಾಗುತ್ತಿದೆ. ಐಟಿ, ಬಿಟಿ ಕಂಪನಿಗಳನ್ನು ಬೆಂಗಳೂರಿಗೆ ಕೇಂದ್ರೀಕರಿಸದೆ ರಾಜ್ಯದ 2 ಮತ್ತು 3ನೇ ಹಂತದ ನಗರಗಳಿಗೂ ವಿಸ್ತರಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಇದೇ ವೇಳೆ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಪ್ರಸ್ತುತ ಬೆಂಗಳೂರು ತನ್ನ ಸಾಮರ್ಥ್ಯದ ಮೇಲೆ ಐಟಿ, ಬಿಟಿ ಹಬ್‌ ಆಗಿ ಬೆಳೆದಿದೆ. ಭವಿಷ್ಯದಲ್ಲಿ ಬೆಂಗಳೂರು ಕೇವಲ ಐಟಿ ಕಂಪನಿಗಳಿಗೆ ಮಾತ್ರ ಆದ್ಯತೆಯ ಕೇಂದ್ರವಾಗದೆ ಎಲ್ಲ ತಂತ್ರಜ್ಞಾನ ಆಧಾರಿತ ಕಂಪನಿಗಳಿಗೂ ಆಯ್ಕೆಯ ನಗರವಾಗಿಸಲಾಗುವುದು. ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರದ ಹೂಡಿಕೆಗೆ ಬೆಂಗಳೂರು ಒಂದೇ ನಗರವನ್ನು ಕೇಂದ್ರವಾಗಿಸದೆ ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ಸೇರಿದಂತೆ ಎರಡು ಮತ್ತು ಮೂರನೇ ಹಂತದ ನಗರಗಳನ್ನು ಪರ್ಯಾಯ ತಂತ್ರಜ್ಞಾನ ಕೇಂದ್ರಗಳಾಗಿ ಬೆಳೆಸುವ ಗುರಿ ಈ ಯೋಜನೆಯದ್ದಾಗಿದೆ ಎಂದು ಹೇಳಿದರು.
 

click me!