ಶಿರಾ ಟಿಕೆಟ್ ವಿಚಾರ : ಬಿಜೆಪಿಗರಲ್ಲೇ ಅಸಮಾಧಾನ

By Kannadaprabha NewsFirst Published Oct 5, 2020, 11:30 AM IST
Highlights

ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದೆ.  ವಿವಿಧ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿವೆ. ಇದೀಗ ಟಿಕೆಟ್ ವಿಚಾರವಾಗಿ ಹಲವು ರಿತಿಯ ಭಿನ್ನಾಭಿಪ್ರಾಯಗಳು ಮೂಡುತ್ತಿವೆ. 

 ಶಿರಾ (ಅ.05): ಬಿಜೆಪಿ ಪಕ್ಷಕ್ಕೆ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಮಗ ಡಾ.ಸಿ.ಎಂ.ರಾಜೇಶ್‌ ಗೌಡ ಅವರು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಶಿರಾ ಉಪಚುನಾವಣೆಗೆ ಅವರಿಗೆ ಟಿಕೆಟ್‌ ಕೊಡಬಹುದೆಂಬ ಆತಂಕದಲ್ಲಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಪ್ರವಾಸಿಮಂದಿರದ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಪರಮಶಿವಯ್ಯ, ಶಿರಾ ತಾಲೂಕಿನಲ್ಲಿ ಬಿಜೆಪಿಯು ನೆಲೆಯೂರಲು ಬಿ.ಕೆ.ಮಂಜುನಾಥ್‌ ಮತ್ತು ಎಸ್‌.ಆರ್‌.ಗೌಡ ಅವರ ಪರಿಶ್ರಮ ಸಾಕಷ್ಟಿದೆ. ಆದರೆ ಟಿಕೆಟ್‌ ನೀಡುವ ವಿಚಾರದಲ್ಲಿ ಅವರಲ್ಲಿ ಯಾರನ್ನಾದರೂ ಪರಿಗಣಿಸಬೇಕು. ಇಷ್ಟುದಿನ ಪಕ್ಷಕ್ಕೆ ಸೇರ್ಪಡೆಯಾಗದೆ ಈಗ ಪಕ್ಷಕ್ಕೆ ಸೇರ್ಪಡೆಯಾಗಿ ಪ್ರಾಥಮಿಕ ಸದಸ್ಯತ್ವ ಪಡೆದಿರುವವರಿಗೆ ಟಿಕೇಟ್‌ ನೀಡಬಾರದು. ಆ ರೀತಿ ಮಾಡಿದರೆ ಕಾರ್ಯಕರ್ತರು ಬೆಂಬಲಿಸುವುದಿಲ್ಲ ಎಂದರು.

"

ಖ್ಯಾತ ವೈದ್ಯ ಬಿಜೆಪಿ ಸೇರ್ಪಡೆ: ಇವರೇ ಶಿರಾ ಬೈ ಎಲೆಕ್ಷನ್ ಅಭ್ಯರ್ಥಿ..! ..

ತಾಪಂ ಉಪಾಧ್ಯಕ್ಷ ರಂಗನಾಥ್‌ ಗೌಡ ಮಾತನಾಡಿ, ಶಿರಾ ತಾಲೂಕಿನಲ್ಲಿ ಬಿಜೆಪಿ ಪಕ್ಷ ಕಟ್ಟಿಬೆಳೆಸಿದ್ದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್‌ ಅವರಿಗೆ ಮೋಸ ಆಗಿದೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನೇ ಇಷ್ಟುದಿನ ಪಡೆಯದೆ, ಈಗ ಪಕ್ಷಕ್ಕೆ ಬಂದವರಿಗೆ ಟಿಕೆಟ್‌ ನೀಡಬಾರದು. ಬಿಜೆಪಿ ಪಕ್ಷ ತತ್ವ ಸಿದ್ಧಾಂತಕ್ಕೆ ಹೆಸರಾಗಿತ್ತು. ಇದನ್ನು ಗಾಳಿಗೆ ತೂರಿ ಬೇರೆಯವರಿಗೆ ಟಿಕೆಟ್‌ ನೀಡಿದರೆ ನಮ್ಮ ವಿರೋಧವಿದೆ ಎಂದರು.

ಪ್ರತಿಭಟನೆಯಲ್ಲಿ ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಸದಸ್ಯ ಮದನ್‌, ಡಾ.ಬಿ.ಗೋವಿಂದಪ್ಪ, ತಾಪಂ ಉಪಾಧ್ಯಕ್ಷ ರಂಗನಾಥ್‌ ಗೌಡ, ಗಿರೀಶ್‌, ನಿರಂಜನ್‌, ಮಲ್ಲಯ್ಯ, ಅಜ್ಜಣ್ಣ, ಬಿಜೆಪಿ ಉಪಾಧ್ಯಕ್ಷ ರಾಘವೇಂದ್ರ, ಬಾಬು, ದೇವರಾಜು, ರಂಗನಾಥ್‌, ಅರುಣ್‌ ಗೌಡ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು

click me!