ರಾಜ್ಯದಲ್ಲಿ ಲೂಟಿಕೋರರ ಸರ್ಕಾರ ಆಡಳಿತ ನಡೆಸುತ್ತಿದ್ದು, ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟೋ ಕಡೆ ಠೇವಣಿ ಸಹ ಉಳಿಯುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ಚನ್ನಪಟ್ಟಣ : ರಾಜ್ಯದಲ್ಲಿ ಲೂಟಿಕೋರರ ಸರ್ಕಾರ ಆಡಳಿತ ನಡೆಸುತ್ತಿದ್ದು, ಇದೇ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟೋ ಕಡೆ ಠೇವಣಿ ಸಹ ಉಳಿಯುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭವಿಷ್ಯ ನುಡಿದರು.
ತಾಲೂಕಿನ ಕೋಡಂಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರ ಹಣವನ್ನು ಲೂಟಿ ಹೊಡೆಯುತ್ತಿದೆ. 2.5 ಲಕ್ಷ ಕೋಟಿ ಬಜೆಟ್ ಹಣವನ್ನು ನುಂಗಿ ಹಾಕಿದೆ. ಮತ್ತೊಂದು ಅವಧಿಗೆ ಅಧಿಕಾರ ನೀಡುವಂತೆ ಬಿಜೆಪಿ ಜನಸಂಕಲ್ಪ ಯಾತ್ರೆ ಹೊರಟಿದೆ. ಈಗ ಪಡೆಯುತ್ತಿರುವ ಶೇ.40ರಷ್ಟುಕಮಿಷನ್ ಸಾಕಾಗದೇ, ಮುಂದಿನ ಬಾರಿ ಅಧಿಕಾರಕ್ಕೆ ಬಂದರೆ 100% ಕಮಿಷನ್ ಹೊಡೆಯುವ ಉದ್ದೇಶದಿಂದ ಯಾತ್ರೆ ನಡೆಸುತ್ತಿದ್ದಾರೆ. ಇಂತ ಭ್ರಷ್ಟಸರ್ಕಾರದಿಂದ ಜನಹಿತ ಎಂದಿಗೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ತಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಘೋಷಿಸುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಎದೆತಟ್ಟಿಕೊಂಡು ಕುಮಾರಸ್ವಾಮಿಯವರ ಹೆಸರನ್ನು ಘೋಷಿಸಿದ್ದೇವೆ. ನೇರವಾಗಿ ಏನನ್ನು ಘೋಷಿಸುವ ಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳು ಇಲ್ಲ ಎಂದು ವ್ಯಂಗ್ಯವಾಡಿದ ನಿಖಿಲ್, ಕಾಂಗ್ರೆಸ್‌ನವರು ಹೋದಲ್ಲಿ ಬಂದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ನಿಜವಾಗಲೂ ಕಾಂಗ್ರೆಸ್ಸೇ ಬಿಜೆಪಿಯ ಬಿ ಟೀಂ ಆಗಿದೆ. ಜನಪರ ಆಡಳಿತ ನೀಡುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ತೆಗೆದು ಬಿಜೆಪಿಗೆ ಹೋದವರು ಯಾರು ಬೆಂಬಲಿಗರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಸಮಿಶ್ರ ಸರ್ಕಾರದ ಇತಿಮಿತಿಗಳ ನಡುವೆಯೂ ಕುಮಾರಸ್ವಾಮಿ ಬಡವರು, ರೈತರಿಗೆ ಅನುಕೂಲ ಕಲ್ಪಿಸಲು ಸಾಕಷ್ಟುಶ್ರಮಿಸಿದರು. 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ, ತಮ್ಮ ವಾಗ್ದಾನ ಉಳಿಸಿಕೊಂಡರು. ಮುಂದಿನ ಬಾರಿ ಜೆಡಿಎಸ್‌ಗೆ ಸ್ಪಷ್ಟಬಹುಮತ ದೊರೆತರೆ ಇನ್ನಷ್ಟುಜನಪರ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮತ್ತೆ ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.
ಸ್ವತಂತ್ರ ಸರ್ಕಾರಕ್ಕೆ ಶ್ರಮ: ರಾಜ್ಯದಲ್ಲಿ ನಿರುದ್ಯೊಗ ಸಮಸ್ಯೆ ಮಿತಿ ಮೀರಿದೆ. ಯುವಜನರು ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಇಷ್ಟುವರ್ಷ ಆಡಳಿತ ನಡೆಸಿದ ಎರಡು ರಾಷ್ಟ್ರೀಯ ಪಕ್ಷಗಳು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಯುವಜನರು ಹಾಗೂ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಜತೆಗೆ, ಬಡವರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಕಲ್ಪಿಸಬೇಕೆಂಬ ಕನಸಿನೊಂದಿಗೆ ಪಂಚರತ್ನ ಯೋಜನೆ ರೂಪಿಸಿ ಅದರ ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರು ದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಮುಖಂಡರಾದ ಭಾನು ಪ್ರಕಾಶ್, ನಿಸರ್ಗ ಲೋಕೇಶ್, ರವಿಶ್ಯಾನುಭೋಗನಹಳ್ಳಿ ಇತರರಿದ್ದರು.
ಸಿಪಿವೈವಿರುದ್ಧ ಪರೋಕ್ಷ ವಾಗ್ದಾಳಿ
ಕುಮಾರಸ್ವಾಮಿ ಸರ್ಕಾರವನ್ನು ಕಿತ್ತೊಗೆದವರಲ್ಲಿ ನಾನು ಒಬ್ಬ, ಆ ಸರ್ಕಾರ ಬೀಳಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಬೀಗುತ್ತಿರುವ ಇಲ್ಲಿನ ಮಾಜಿ ಶಾಸಕರು ಕ್ಷೇತ್ರದ ಜನ ತಮಗೆ ನೀಡಿದ ಅವಕಾಶವನ್ನು ಬಳಸಿಕೊಳ್ಳದೇ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಜನಪರ ಆಡಳಿತ ನೀಡುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಕಿತ್ತೊಗೆಯುವವರೆಗೆ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಇಲ್ಲಿನ ಮಾಜಿ ಶಾಸಕರೊಬ್ಬರು ಪಣ ತೊಟ್ಟಿದ್ದರು. ಸರ್ಕಾರ ಬಿದ್ದ ಮೇಲೆ ತಮಗೆ ತಾವೇ ಶಹಬ್ಬಾಸ್‌ಗಿರಿ ಕೊಟ್ಟುಕೊಂಡು ಓಡಾಡಿದರು ಎಂದು ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಹೆಸರೇಳದೇ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.