ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ 8 ಗ್ರಾಪಂಗಳಲ್ಲಿ 6 ಗ್ರಾಪಂಗಳಿಗೆ ಚುನಾವಣೆ, 2 ಕಡೆ ಅವಿರೋಧ ಆಯ್ಕೆ| 4 ಬಿಜೆಪಿ, 4 ಕಾಂಗ್ರೆಸ್ ಬೆಂಬಲಿತರ ವಶ|
ಹೂವಿನಹಡಗಲಿ(ಫೆ.04): ತಾಲೂಕಿನ ವಿವಿಧ 8 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಫೆ. 3ರಂದು ಚುನಾವಣೆ ನಡೆದಿದ್ದು ಇದರಲ್ಲಿ 4 ಬಿಜೆಪಿ, 4 ಕಾಂಗ್ರೆಸ್ ಬೆಂಬಲಿತರ ವಶವಾಗಿವೆ.
ತಾಲೂಕಿನ 8 ಗ್ರಾಪಂಗಳಲ್ಲಿ 6 ಗ್ರಾಪಂಗಳಿಗೆ ಚುನಾವಣೆ, 2 ಕಡೆ ಅವಿರೋಧ ಆಯ್ಕೆ ಮಾಡಲಾಯಿತು. ಕತ್ತೆಬೆನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಭರಮನಗೌಡ, ಬಿಜೆಪಿ ಬೆಂಬಲಿತ ನೀಲಪ್ಪ ಹಾವನೂರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನದ ನಂತರದಲ್ಲಿ ಇಬ್ಬರಿಗೂ ತಲಾ 6 ಮತಗಳು ಪಡೆದಿದ್ದರು. ಆನಂತರದಲ್ಲಿ ಟಾಸ್‌ನಲ್ಲಿ ನೀಲಪ್ಪ ಹಾವನೂರು ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸುನೀತಾ ಮರಿಯಪ್ಪ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಕೆ. ಅಯ್ಯನಹಳ್ಳಿ ಪಂಚಾಯಿತಿಯ ಅಧ್ಯಕ್ಷರಾಗಿ ಹೂವಕ್ಕ, ಉಪಾಧ್ಯಕ್ಷರಾಗಿ ಹರಿಜನ ಮಂಜವ್ವ ಅವಿರೋಧ ಆಯ್ಕೆಯಾದರೆ, ಹೊಳಲು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕುಂದಗೋಳು ನಾಗಮ್ಮ, ದಾಕ್ಷಾಯಣಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ವಡ್ಡರ ನಾಗರಾಜ, ಶಿವ್ಯಾನಾಯ್ಕ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ನಾಗಮ್ಮ 17 ಮತ ಪಡೆದು ಜಯ ಗಳಿಸಿದರು. ಉಪಾಧ್ಯಕ್ಷರಾಗಿ ವಡ್ಡರ ನಾಗರಾಜ 16 ಮತ ಪಡೆದು ಗೆಲುವಿನ ನಗೆ ಬೀರಿದರು.
ಹಿರೇಮಲ್ಲನಕೆರೆ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಎ. ಶಿವಾನಂದ, ಮೀಟ್ಯಾನಾಯ್ಕ, ಉಪಾಧ್ಯಕ್ಷ ಸ್ಥಾನಕ್ಕೆ ಟಿ. ರುಣುಕಮ್ಮ, ದೇವಿಬಾಯಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಶಿವಾನಂದ 11 ಮತ ಪಡೆದರೆ, ಉಪಾಧ್ಯಕ್ಷರಾಗಿ ರೇಣುಕಮ್ಮ (10 ಮತ) ಜಯಗಳಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯ ಸ್ಥಾಪಕರು ಯಾರು? ವಿದ್ಯಾರ್ಥಿಯ ಫನ್ನಿ ಉತ್ತರ ವೈರಲ್
ನವಲಿ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಯಶೋದಾ ತಳೂರು, ಕಿರಣಕುಮಾರ, ಉಪಾಧ್ಯಕ್ಷ ಸ್ಥಾನಕ್ಕೆ ಶಕುಂತಲಾ, ಎಂ. ಮಂಗಳ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಯಶೋದಾ 9 ಮತ ಪಡೆದು ಜಯಗಳಿಸಿದರೆ, ಉಪಾಧ್ಯಕ್ಷರಾಗಿ ಶಕುಂತಲಾ (9 ಮತ) ಪಡೆದು ಜಯಗಳಿಸಿದ್ದಾರೆ.
ದೇವಗೊಂಡನಹಳ್ಳಿ ಪಂಚಾತಿಯಿಯ ಅಧ್ಯಕ್ಷ ಸ್ಥಾನಕ್ಕೆ ಮಹೇಂದ್ರ, ವೀರನಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಮರಿತಾಬಾಯಿ, ಲಕ್ಷ್ಮೀ ಬಾಯಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಮಹೇಂದ್ರ (8 ಮತ), ಉಪಾಧ್ಯಕ್ಷರಾಗಿ ಮರಿತಾಬಾಯಿ (7 ಮತ) ಗೆಲುವು ಸಾಧಿಸಿದ್ದಾರೆ. ಉತ್ತಂಗಿ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಎಸ್. ನೀಲಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಡಿ. ಪವಿತ್ರ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹೊಳಗುಂದಿ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದವ್ವ, ಗೌರಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ರಮೇಶ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಸಿದ್ದವ್ವ (11 ಮತ), ಉಪಾಧ್ಯಕ್ಷರಾಗಿ ರಮೇಶ ಅವಿರೋಧ ಆಯ್ಕೆಯಾಗಿದ್ದಾರೆ. ಈ ವೇಳೆ ಮಾಜಿ ಶಾಸಕ ಬಿ. ಚಂದ್ರನಾಯ್ಕ, ಎಸ್. ದೂದಾನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಎಸ್. ಸಂಜೀವರೆಡ್ಡಿ, ಓದೋ ಗಂಗಪ್ಪ ಹಾಜರಿದ್ದರು.