
ಚಿಕ್ಕಬಳ್ಳಾಪುರ(ಡಿ.21): ಕೇಂದ್ರದ ಬಿಜೆಪಿ ಸರ್ಕಾರ ಒಂದು ಧರ್ಮವನ್ನು ಪ್ರಧಾನವಾಗಿ ಇಟ್ಟುಕೊಂಡು ಜನರ ಮೇಲೆ ಪ್ಯಾಸಿಸ್ಟ್ ಸಂಸ್ಕೃತಿ ಹೇರುತ್ತಿದೆ ಎಂದು ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯ ಎಂ.ಪಿ. ಮುನಿವೆಂಕಟಪ್ಪ ಆರೋಪಿಸಿದ್ದಾರೆ.
ನಗರದ ಸಿಪಿಎಂ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ವೈವಿಧ್ಯಮಯ ರಾಷ್ಟ್ರವಾಗಿದ್ದು, ಬಹುಸಂಖ್ಯಾತ ಜನರು ವಾಸವಾಗಿದ್ದಾರೆ. ಇಂತಹ ರಾಷ್ಟ್ರದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಜನರ ಮೇಲೆ ಭಾವನಾತ್ಮಕವಾಗಿ ಮನಸ್ಸನ್ನು ಕೆಡಿಸಿ ಹಿಂದೂರಾಷ್ಟ್ರ ಮಾಡಲು ಹೊರಟಿದೆ ಎಂದು ದೂರಿದ್ದಾರೆ.
ದೇಶದಲ್ಲಿ ಹಿಂದುತ್ವ ಹೇರಿಕೆ
ದೇಶವನ್ನು ಹಿಂದೂ ರಾಷ್ಟ್ರವನ್ನು ಮಾಡಲು ಹೊರಟಿರುವ ಬಿಜೆಪಿ ಸರ್ಕಾರ ಪೌರತ್ವ ತಿದ್ದುಪಡಿಯನ್ನು ಉದ್ದೇಶ ಪೂರ್ವಕವಾಗಿ ಜಾರಿ ಮಾಡಿದೆ. ದೇಶದಲ್ಲಿ 20 ಕೋಟಿಗೂ ಅಧಿಕ ಆದಿವಾಸಿಗಳು ವಾಸವಾಗಿದ್ದಾರೆ. ಮುಸ್ಲಿಂರು ಯಾವುದೇ ಭೂಮಿ ದಾಖಲೆ ಇಲ್ಲದೇ ದಶಕಗಳಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ನಾಗರಿಕರು ಪೌರತ್ವ ಪಡೆಯುವ ಕಾನೂನನ್ನು ಬದಲಿಸಿರುವುದು ಸಂವಿಧಾನದ ವಿರೋಧಿ ನಡೆಯಾಗಿದೆ ಎಂದು ಆರೋಪಿಸಿದ್ದಾರೆ.
ದೇಶದ ಐಕ್ಯತೆಗೆ ಅಪಾಯಕಾರಿ
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡಿ, ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ (ಎನ್‌ಆರ್‌ಸಿ) ಸಂವಿಧಾನ ವಿರೋಧಿ ನೀತಿಯಾಗಿದೆ. ಇದು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯಕಾರಿಯಾಗಿದೆ ಎಂದು ದೂರಿದ್ದಾರೆ.
ಅಹಿತಕರ ಘಟನೆ ತಡೆಯಲು 200 ಪೊಲೀಸರಿಂದ ಪಥಸಂಚಲನ.
ಸುದ್ದಿಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸಾವಿತ್ರಮ್ಮ, ಕೃಷಿಕೂಲಿಕಾರರ ಸಂಘದ ಜಿಲ್ಲಾ ಮುಖಂಡ ನರಸಿಂಹಯ್ಯ, ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಸೋಮು, ಜಿಲ್ಲಾ ಸಮಿತಿ ಮುಖಂಡರಾದ ರಮೇಶ್, ಸತೀಶ್ ಸೇರಿದಂತೆ ಇತರರು ಇದ್ದರು.