ಅಧಿಕಾರದಿಂದ ಜೆಡಿಎಸ್ ದೂರ ಇಡಲು ಬಿಜೆಪಿಗೆ ಕಾಂಗ್ರೆಸ್ ನೆರವು

By Kannadaprabha NewsFirst Published Sep 22, 2019, 1:58 PM IST
Highlights

ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದರೆ ಇತ್ತ ಜೆಡಿಎಸ್ ದೂರ ಇಡಲು ಕಾಂಗ್ರೆಸ್ ಬಿಜೆಪಿ ನೆರವು ಪಡೆಯಲು ಸಜ್ಜಾಗಿದೆ. 

ಮಂಡ್ಯ [ಸೆ.22] : ಸೆ. 23ರಂದು ನಡೆಯುವ ಮನ್‌ಮುಲ್ ಆಡಳಿತ ಮಂಡಳಿಯ ಚುನಾವಣೆಗೆ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಮನ್‌ಮುಲ್ ಆಡಳಿತ ಮಂಡಳಿಗೆ 8 ಮಂದಿ ಜೆಡಿಎಸ್, 3 ಕಾಂಗ್ರೆಸ್ ಹಾಗೂ 1 ಬಿಜೆಪಿ ಸದಸ್ಯರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕೇವಲ ಒಬ್ಬ ಸದಸ್ಯನನ್ನು ಹೊಂದಿರುವ ಬಿಜೆಪಿ ಈ ಬಾರಿ ಜೆಡಿಎಸ್, ಕಾಂಗ್ರೆಸ್ ಸದಸ್ಯರ ನೆರವಿನಿಂದ ಮನ್ಮುಲ್ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲ ತಂತ್ರಗಾರಿಕೆ ನಡೆಸಿದೆ.

ಈ ನಡುವೆ ಜೆಡಿಎಸ್‌ನ ಇಬ್ಬರು ನಿರ್ದೇಶಕರಾದ ಎಚ್.ಟಿ. ಮಂಜುನಾಥ್ ಹಾಗೂ ನಲ್ಲೇಗೆರೆ ಬಾಲು ಅವರನ್ನು ಬೈಲಾ ಉಲ್ಲಂಘನೆ ಆರೋಪದಲ್ಲಿ ವಿಚಾರಣೆ ಮಾಡಿ ನಿರ್ದೇಶಕ ಸ್ಥಾನದಿಂದ ವಜಾ ಮಾಡುವ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳುವ ವೇಳೆಗೆ ನ್ಯಾಯಾಲಯ ಇಬ್ಬರು ಸದಸ್ಯರಿಗೆ ತಡೆಯಾಜ್ಞೆ ನೀಡಿದೆ ಎಂದು ಗೊತ್ತಾಗಿದೆ.

ಎಚ್.ಟಿ.ಮಂಜುನಾಥ್ ಅವರು ಸಹಕಾರ ಇಲಾಖೆಯಿಂದ ತಾವು ಪಡೆದಿರುವ ನೋಟಿಸ್‌ಗೆ ತಡೆಯಾಜ್ಞೆ ತಂದಿದ್ದಾರೆ ಎಂದು ಗೊತ್ತಾಗಿದೆ. ಅದೇ ರೀತಿ ಬಾಲು ಕೂಡ ನ್ಯಾಯಾಲಯದ ಮೊರೆ ಹೋಗಿದ್ದರು. ಅವರ ಆಯ್ಕೆ ಪ್ರಕ್ರಿಯೆಯನ್ನು ಲಕೋಟೆಯಲ್ಲಿ ಮುಚ್ಚಿಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಹೇಳಲಾಗಿದೆ. ಈ ಸಂಬಂಧ ಯಾವುದೇ ಸ್ಪಷ್ಟ ಆದೇಶಗಳು ಲಭ್ಯವಾಗಿಲ್ಲ. ಚುನಾವಣಾಧಿಕಾರಿಗಳಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಜೆಡಿಎಸ್-ಕಾಂಗ್ರೆಸ್ ಮುಖಂಡರ ವಾಕ್ಸಮರ: ಈ ನಡುವೆ ಮಾಜಿ ಸಚಿವ ಚಲುವರಾಯಸ್ವಾಮಿ ಬೆಂಬಲಿಗರ ಹಾಗೂ ಜೆಡಿಎಸ್ ಮುಖಂಡರ ನಡುವೆ ವಾಕ್ಸಮರ ನಡೆದಿದೆ. ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ನಾಯಕರು ಧಿಕ್ಕಾರ ಕೂಗಿ ಎರಡು ಬಣಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಪಾಂಡವಪುರ ಸಹಕಾರ ಸಂಘಗಳ ನಿಬಂಧಕರ ಕಚೇರಿ ಬಳಿ ಶನಿವಾರ ಜರುಗಿದೆ. 

ಅನರ್ಹತೆ ಭೀತಿಯಲ್ಲಿರುವ ಮನ್ಮುಲ್ ನೂತನ ನಿರ್ದೇಶಕ ನಲ್ಲೆಗೆರೆ ಬಾಲು ಚಲುವರಾಯಸ್ವಾಮಿ ಹಾಗೂ ನಾರಾಯಣಗೌಡರು ತಮ್ಮ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪಾಂಡವಪುರ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ವಿಚಾರಣೆ ಇತ್ತು. ವಿಚಾರಣೆ ನಂತರ ಆದೇಶವನ್ನು ಕಾಯ್ದಿರಸಲಾಗಿದೆ. ಆ ಮೂಲಕ ನನ್ನನ್ನು ಆಡಳಿತ ಮಂಡಳಿ ಚುನಾವಣೆಯಿಂದ ಹೊರ ಗಿಡುವ ಪ್ರಯತ್ನ ಮಾಡಲಾಗಿದೆ ಎಂದು ಬಾಲು ದೂರಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಆದೇಶ ಪ್ರಶ್ನಿಸಿ ನಾನು ಹೈಕೋರ್ಟ್ ಮೊರೆ ಹೋಗಿದ್ದೆ. ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಪು  ಕಾಯ್ದಿರಿಸಿದೆ ಎಂದು ಹೇಳಿದರು. ಒಟ್ಟಾರೆ ಮನ್ಮುಲ್ ಅಧ್ಯಕ್ಷರ ಚುನಾವಣೆ ಗಲಾಟೆ ತಾರಕಕ್ಕೆ ಏರುವ ಲಕ್ಷಣಗಳು ಸ್ಪಷ್ಟವಾಗಿವೆ. ಬಿಜೆಪಿ ಸಹಾಯದಿಂದ ಜೆಡಿಎಸ್ ಅನ್ನು ಅಧಿಕಾರದಿಂದ ದೂರ ಇಡಲು ಮಾಜಿ ಸಚಿವ ಚಲುವರಾಯಸ್ವಾಮಿ ನಡೆಸಿರುವ ತಂತ್ರಗಾರಿಕೆಯಲ್ಲಿ 
ಸಫಲರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

click me!