ಸರ್ಕಾರದ ಯೋಜನೆ ಸದ್ಬಳಕೆಯಾಗಲಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

By Kannadaprabha NewsFirst Published Aug 18, 2023, 9:08 PM IST
Highlights

ಕಳೆದ 9 ವರ್ಷಗಳಲ್ಲಿ ಜಾರಿಯಾದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಈಗಾಗಲೇ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಈ ಕುರಿತು ಜನರಿಗೆ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಲುಪಬೇಕು. ಹಾಗಾಗಿ ಇನ್ನೂ ಯೋಜನೆಯ ಲಾಭ ಪಡೆಯದ ಜನರು ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ 

ಬೆಳಗಾವಿ(ಆ.18): ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಆಡಳಿತ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಗರೀಬ್‌ ಕಲ್ಯಾಣ ಯೋಜನೆ, ಪಿಎಂ ಪ್ರಣಾಮ್‌ ಯೋಜನೆ, ಕೃಷಿ, ಉಜ್ವಲ, ಕಿಸಾನ್‌ ಸಮ್ಮಾನ್‌, ಪೋಷಣ ಅಭಿಯಾನ್‌, ಆಯುಷ್ಮಾನ್‌ ಭಾರತ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ ಸೇರಿದಂತೆ ಸರ್ಕಾರದ ಎಲ್ಲ ಯೋಜನೆಗಳು ಸಮರ್ಪಕ ಬಳಕೆಯಾಗಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ನಗರದ ಕೃಷ್ಣದೇವರಾಯ ವೃತ್ತದ ಬಳಿಯ ವಿವಿದ್ದೋದ್ದೇಶಗಳ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ, ಧಾರವಾಡ ಹಾಗೂ ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ 9 ವರ್ಷಗಳ ಸೇವೆಯ ಕುರಿತು ಏರ್ಪಡಿಸಲಾದ 5 ದಿನಗಳ ವಿಶೇಷ ಜಾಗೃತಿ, ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 9 ವರ್ಷಗಳಲ್ಲಿ ಜಾರಿಯಾದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಈಗಾಗಲೇ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಈ ಕುರಿತು ಜನರಿಗೆ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿ ತಲುಪಬೇಕು. ಹಾಗಾಗಿ ಇನ್ನೂ ಯೋಜನೆಯ ಲಾಭ ಪಡೆಯದ ಜನರು ಸರ್ಕಾರದ ಕಲ್ಯಾಣ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಬೆಳಗಾವಿ ಪಾಲಿಕೆಯಲ್ಲಿ ಮತ್ತೆ ಎಂಇಎಸ್‌ ಖ್ಯಾತೆ: ಮರಾಠಿ ಭಾಷೆಯಲ್ಲೇ ಸಭೆ ನಡಾವಳಿ ಪತ್ರ ನೀಡುವಂತೆ ಮೊಂಡುತನ!

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಗರೀಬ್‌ ಕಲ್ಯಾಣ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ 5 ಕೆಜಿ ಉಚಿತ ಅಕ್ಕಿ ನೀಡಲಾಗುತ್ತದೆ. ಪಿಎಂ ಕಿಸಾನ್‌ ಸಮ್ಮಾನ್‌ ಯೋಜಯಡಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 3.46 ಲಕ್ಷ ಫಲಾನುಭವಿಗಳಿಗೆ ಉಚಿತ ಸಿಲೆಂಡರ್‌ ಸಂಪರ್ಕ ನೀಡಲಾಗಿದೆ. ಅದೇ ರೀತಿಯಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮೂಲಕ ಯುವಕ​ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸಬಲರಾಗಲು ಈಗಾಗಲೇ ಕಿರು ಸಾಲಗಳನ್ನು ನೀಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋದಲ್ಲಿ ಈಗಾಗಲೇ ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ನಿರ್ಮಾಣ ಮಾಡಲಾಗಿದೆ. ಅದೇ ರೀತಿಯಲ್ಲಿ ಸುಮಾರು .190 ಕೋಟಿ ವೆಚ್ಚದಲ್ಲಿ ಬೆಳಗಾವಿ ಹೊಸ ರೈಲ್ವೆ ನಿಲ್ದಾಣ ಚಾಲನೆ ನೀಡಲಾಗಿದೆ. ಧಾರವಾಡ ಹಾಗೂ ಬೆಳಗಾವಿಗೆ ನೇರ ರೈಲು ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭೂಮಿ ಖರೀದಿ ಪ್ರಕ್ರಿಯೆ ನಡೆದಿದೆ ಎಂದು ತಿಳಿಸಿದರು.

ಸಂಸದೆ ಮಂಗಲ ಅಂಗಡಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 9 ವರ್ಷಗಳ ಅವಧಿಯಲ್ಲಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಜಲ ಜೀವನ ಮಷಿನ್‌, ಮಾತ್ರ ವಂದನಾ, ಆಯುಷ್ಮಾನ್‌ ಭಾರತ, ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಈಗಾಗಲೇ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಸಾರ್ವಜನಿಕರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಭಾರತ ಸರ್ಕಾರದ ಧಾರವಾಡ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್‌.ಎ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ 7 ಜಿಲ್ಲೆಯಲ್ಲಿ ಸರ್ಕಾರದ ಜನಪರ ಯೋಜನೆಗಳಾದ ಏಕ ಭಾರತ, ಅಜಾದಿಕಾ ಅಮೃತ ಮಹೋತ್ಸವ ಸೇರಿದಂತೆ ವಿವಿಧ ಯೋಜನೆಗಳ ಛಾಯಾಚಿತ್ರ ಪ್ರದರ್ಶನ ಪ್ರದರ್ಶಿಸಲಾಗುತ್ತಿದೆ. 5 ದಿನಗಳ ವಿಶೇಷ ಜಾಗೃತಿ ಹಾಗೂ ವಿಶೇಷ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಉಚಿತ ತಪಾಸಣೆ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಪಂ ಸಿಇಒ ಹರ್ಷಲ… ಭೋಯರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗರಾಜ್‌. ಆರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಂ ಕಾಂಬ್ಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಹೇಶ ಕೊಣಿ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ವಾರ್ತಾಧಿಕಾರಿ ಗುರುನಾಥ ಕಡಬೂರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಿ.ಶ್ರೀನಿವಾಸ್‌ ಮತ್ತು ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು ಹಾಗೂ ಮಹಿಳಾ ಸ್ವ​ಸಹಾಯ ಸಂಘಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಗತ್ತಿನ ಟಾಪ್‌ 3ರಲ್ಲಿ ಭಾರತ ಆರ್ಥಿಕತೆ: ಸಂಸದ ಈರಣ್ಣ ಕಡಾಡಿ

ಜಾಗೃತಿ ಮಳಿಗೆ, ಛಾಯಾಚಿತ್ರ ಪ್ರದರ್ಶನ:

ಕೇಂದ್ರ ಸಂವಹನ ಇಲಾಖೆ ಧಾರವಾಡ ವತಿಯಿಂದ 1942ರ ಈಸೂರು ದಂಗೆ, ಶಿವಪುರ ಧ್ವಜ ಸತ್ಯಾಗ್ರಹ, ವಿದುರಾಶ್ವತ್ಥ, ಹಾಗೂ ಸ್ವಾತಂತ್ರ್ಯ ಯೋಧರಾದ ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಪರಿಚಯಿಸುವ ಛಾಯಾ ಚಿತ್ರಗಳನ್ನು ಪ್ರದರ್ಶನ ಹಾಗೂ ವಿವಿಧ ಇಲಾಖೆಯಡಿ ಯೋಜನೆಗಳ ಜಾಗೃತಿ ಫಲಕಗಳ ಮಳಿಗೆಗಳನ್ನು ವೀಕ್ಷಿಸಲಾಯಿತು.

ಆಹಾರ, ಅಕ್ಷರ, ಹಾಗೂ ಆರೋಗ್ಯ ಬಡವರಿಗೆ ತಲುಪಬೇಕು. ಸಾರ್ವಜನಿಕರ, ನಾಗರಿಕ ಬದುಕಿಗೆ ಅವಶ್ಯಕ ಯೋಜನೆಗಳನ್ನು ಈಗಾಗಲೇ ಸರ್ಕಾರ ಜಾರಿಗೆ ತಂದಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ಅವಶ್ಯಕವಾಗಿವೆ.

ಪ್ರತಿಯೊಬ್ಬರಿಗೂ ಯೋಜನೆಗಳ ಬಳಕೆ ಆಗಬೇಕು. ಇಡೀ ವಿಶ್ವ ಭಾರತ ದೇಶದ ಕಡೆಗೆ ಗಮನ ಹರಿಸುವತ್ತ ದೇಶ ಬೆಳೆದು ನಿಂತಿದೆ. ಹಳೆಯ ಕಾಲಘಟ್ಟಕ್ಕೆ ಹೋಲಿಸಿದರೆ ಭಾರತ ಈಗ ಆಹಾರ ಉತ್ಪಾದಿಸಿ ಇತರ ದೇಶಗಳಿಗೆ ರಪ್ತು ಮಾಡುತ್ತಿದೆ ಹಾಗಾಗಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಿಂದ ಎಲ್ಲ ಕ್ಷೇತ್ರಗಳಲ್ಲೂ ದೇಶ ಮುಂಚೂಣಿಯಲ್ಲಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.  

click me!