ಉಡಾನ್ : ಸಿಎಂ ಬಳಿ 500 ಎಕರೆ ಭೂಮಿಗಾಗಿ ಬಿಜೆಪಿ ಸಂಸದ ಮನವಿ

By Kannadaprabha NewsFirst Published Mar 17, 2020, 12:54 PM IST
Highlights

ಕೊಪ್ಪಳಕ್ಕೆ ಘೋಷಣೆಯಾದ ಇತರೆ ಜಿಲ್ಲೆಯಲ್ಲಿ ಈಗಾಗಲೇ ವಿಮಾನ ಹಾರಾಟ ಪ್ರಾರಂಭವಾಗಿವೆ. ಹೀಗಾಗಿ ಸರ್ಕಾರವೇ ವಿಮಾನ ನಿಲ್ದಾಣಕ್ಕಾಗಿ 500 ಎಕರೆ ಭೂಮಿ ಖರೀದಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ. 

ಕೊಪ್ಪಳ [ಮಾ.17]: ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಕೊಪ್ಪಳಕ್ಕೆ ವಿಮಾನಯಾನ ಸೌಲಭ್ಯಕ್ಕೆ ಎರಡು ವರ್ಷದ ಹಿಂದೆ ಎಂಎಸ್‌ಪಿಎಲ್ ಕಂಪನಿ ಕೈ ಎತ್ತಿದ್ದರಿಂದ ಇದುವರೆಗೂ ಯೋಜನೆ ಸಾಕಾರವಾಗಲೇ ಇಲ್ಲ. ಕೊಪ್ಪಳಕ್ಕೆ ಘೋಷಣೆಯಾದ ಇತರೆ ಜಿಲ್ಲೆಯಲ್ಲಿ ಈಗಾಗಲೇ ವಿಮಾನ ಹಾರಾಟ ಪ್ರಾರಂಭವಾಗಿವೆ. ಹೀಗಾಗಿ ಸರ್ಕಾರವೇ ವಿಮಾನ ನಿಲ್ದಾಣಕ್ಕಾಗಿ 500 ಎಕರೆ ಭೂಮಿ ಖರೀದಿಸುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸಂಸದ ಸಂಗಣ್ಣ ಕರಡಿ ಪತ್ರ ಬರೆದಿದ್ದಾರೆ. 

ಪತ್ರಕ್ಕೆ ಸಿಎಂ ಕಡೆಯಿಂದ ಸಾಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಶಾಭಾವನೆ ಮೂಡಿದೆ. ವಿಮಾನ ನಿಲ್ದಾಣ ಇಲ್ಲದೇ ಈ ಭಾಗದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೊಪ್ಪಳ ತಾಲ್ಲೂಕಿನ ಟನಕನಕಲ್ ಗ್ರಾಮದಿಂದ ಹಟ್ಟಿ ಕ್ರಾಸ್ ಪ್ರದೇಶದಲ್ಲಿ 500 ಎಕರೆ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡು ವಿಮಾನ ಸೇವೆಯನ್ನು ಪ್ರಾರಂಭಿಸಬೇಕೆಂದು ಕೋರಿ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.

 ಈ ಪತ್ರಕ್ಕೆ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಎಂ ನಿರ್ದೇಶನದ ಮೇರೆಗೆ ಅವರ ಆಪ್ತ ಕಾರ್ಯದರ್ಶಿ ಎಚ್.ಆರ್. ರಾಜಪ್ಪ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಇವರಿಗೆ ಕಳೆದ ಮಾ. 3 ರಂದು ಪತ್ರ ಬರೆದಿದ್ದು, ಸಂಸದರ ಈ ಮನವಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. 

ಕೊರೋನಾ ಅಬ್ಬರ: ದೇಶಾದ್ಯಂತ ಶಾಲೆ, ಕಾಲೇಜು ಬಂದ್‌!...

ಎಂಎಸ್‌ಪಿಎಲ್ ಮೊಂಡಾಟ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ಉಡಾನ್ ಯೋಜನೆಯನ್ನು ಕಾರ್ಯಗತ ಮಾಡುವುದಕ್ಕೆ ಈಗಾಗಲೇ ಇರುವ ಎಂಎಸ್‌ಪಿಎಲ್ ಏರೋಡ್ರೋಮ್ ಸೂಕ್ತವಾಗಿದೆ. ಎಂಎಸ್ ಪಿಎಲ್ ಕಂಪನಿ ಎಸ್ ಎಂದರೆ ಸಾಕು, ತಿಂಗಳೊಳಗಾಗಿ ಕೊಪ್ಪಳದಿಂದ ನಿತ್ಯವೂ ಉಡಾನ್ ವಿಮಾನಗಳು ಹಾರಾಟ ನಡೆಸುತ್ತಿದ್ದವು. ಆದರೆ, ಇದಕ್ಕೆ ಎಂಎಸ್‌ಪಿಎಲ್ ಕಂಪನಿ ಸೊಪ್ಪು ಹಾಕುತ್ತಲೇ ಅಲ್ಲ. 

ಸಂಸದ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲಾಡಳಿತವೇ ಕೋರಿದರೂ ಕ್ಯಾರೆ ಎನ್ನದೆ ಮೊಂಡು ಹಠ ಹಿಡಿದಿದೆ. ಈಗಾಗಲೇ ಉಡಾನ್ ಯೋಜನೆ ಘೋಷಣೆಯಾಗಿ 2 ವರ್ಷವೇ ಗತಿಸಿದೆ. ಇಷ್ಟು ದಿನಗಳ ಕಾಲ ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡದೆ ಇರುವುದರಿಂದ ಮಹತ್ವಾಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿದಿದೆ. ಇನ್ನಾದರೂ ತುರ್ತಾಗಿ ಈ ಕಾರ್ಯ ಆಗಬೇಕಾಗಿದೆ. ಕೂಡಲೇ ಭೂಮಿಯನ್ನು ಸ್ವಾಧೀನಮಾಡಿಕೊಂಡು ಯೋಜನೆಯನ್ನು ಕಾರ್ಯಗತ ಮಾಡುವ ಮೂಲಕ ಖಾಸಗಿ ಕಂಪನಿಗೆ ಸಡ್ಡು ಹೊಡೆಯಬೇಕಾಗಿದೆ.

click me!