* ಮುಖ್ಯಮಂತ್ರಿ ಬದಲಾವಣೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ: ಶಾಸಕ ರಾಜುಗೌಡ
* ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ
* ಬಿಜೆಪಿ ರಾಷ್ಟ್ರೀಯ ಪಕ್ಷ. ಜತೆಗೆ ಶಿಸ್ತಿನ ಪಕ್ಷವೂ ಹೌದು
ಹೊಸಪೇಟೆ(ಜು.21): ರಾಜ್ಯದಲ್ಲಿ ಮುಂದಿನ ಎರಡು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಸಿಎಂ ಬದಲಾವಣೆ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಇದು ಬರೀ ಊಹಾಪೋಹ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಬರೀ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ಆಗುತ್ತಿದೆ. ಆದರೆ, ಈ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಎಲ್ಲೂ ಚರ್ಚೆ ಆಗಿಲ್ಲ. ಸಿಎಂ ಬದಲಾವಣೆ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬರೀ ಊಹಾಪೋಹದ ವರದಿ ಬಿತ್ತರಿಸುವುದು ಸರಿಯಲ್ಲ ಎಂದರು.
undefined
ಔತಣಕೂಟ:
ಜು. 26ಕ್ಕೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಆಗುತ್ತದೆ. ಅದರ ಹಿಂದಿನ ದಿನ ಸಿಎಂ ಔತಣಕೂಟ ಕರೆದಿದ್ದಾರೆ. ಅದನ್ನೇ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಅಷ್ಟೆ ಎಂದರು. ಸಿಎಂ ಯಡಿಯೂರಪ್ಪ ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡಲಾಗಿದೆ. ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಶಾಮನೂರು ಶಿವಶಂಕ್ರಪ್ಪ, ಎಂ.ಬಿ. ಪಾಟೀಲ್ ಅವರು ಬೆಂಬಲ ನೀಡಿದ್ದಾರೆ. ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ ಎಂದರು.
ದಿಲ್ಲಿಗೆ ಹೋದ್ರೆ ನಾಯಕತ್ವ ಬದಲಾವಣೆ ಆಗುತ್ತದೆ ಅನ್ನೋದಾದ್ರೆ ದಿನ 100 ಜನ ಹೋಗ್ತಾರೆ. ಅವರ ವೈಯಕ್ತಿಕ ಕೆಲಸ ಇರುತ್ತೆ, ಇಲಾಖೆ ಕೆಲಸವೂ ಇರುತ್ತದೆ. ಈಗ ದಿಲ್ಲಿಗೆ ಹೋಗುವುದು ಒಂದು ಟ್ರೆಂಡ್ ಆಗಿದೆ. ಮಾಧ್ಯಮದಲ್ಲಿ ಬರ್ತಿವಿ ಅನ್ನೋ ಆಸೆಯಿಂದಾದ್ರೂ ದಿಲ್ಲಿಗೆ ಹೋಗ್ತಾರೆ ಎಂದು ವ್ಯಂಗ್ಯವಾಡಿದರು.
ಹೈಕಮಾಂಡ್ ಹೇಳಿದಂತೆ ಕೇಳಬೇಕಾಗುತ್ತೆ: ಶ್ರೀಗಳ ಮುಂದೆ ಬಿಎಸ್‌ವೈ ಅಸಹಾಯಕತೆ!
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರದ್ದು ಎಂದು ಆಡಿಯೋವೊಂದನ್ನು ಹರಿಬಿಡಲಾಗಿದೆ. ಕಟೀಲ್ ಅವರ ಹೆಸರಿಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ನಕಲಿ ಆಡಿಯೋಗೆ ಇಷ್ಟೊಂದು ಮಹತ್ವ ಕೊಡುವುದು ಸರಿಯಲ್ಲ. ಬಲಿಷ್ಠ ಪಕ್ಷ ಕಟ್ಟಿದ ವ್ಯಕ್ತಿ ಕಟೀಲ್ ಅವರು ಬಹಳ ಸರಳ. ಅವರೇ ಆ ಆಡಿಯೋ ನನ್ನದಲ್ಲ ಅಂದಿದ್ದಾರೆ. ತನಿಖೆಗೂ ಕೊಟ್ಟಿದ್ದಾರೆ. ಈಗ ಸಾಕಷ್ಟುಡಬ್ಬಿಂಗ್ ಆಗ್ತಿವೆ. ಎಲ್ಲರೂ ವಾಯ್ಸ್ ಡಬ್ ಮಾಡ್ತಾರೆ ಎಂದರು.
ಕೊರೋನಾದಿಂದಾಗಿ ಎಸ್ಟಿ ಮೀಸಲಾತಿ ಪ್ರಕ್ರಿಯೆ ವಿಳಂಬವಾಗಿದೆ. ಎಸ್ಟಿಸಮುದಾಯಕ್ಕೆ ಶೇ. 7.5ರಷ್ಟುಮೀಸಲು ಹೆಚ್ಚಳ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಶೀಘ್ರವೇ ಕೈಗೊಳ್ಳಬೇಕು. ಸಿಎಂ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ ಎಂದರು.
ಮುಖಂಡರಾದ ಕಿಚಿಡಿ ಲಕ್ಷ್ಮಣ, ಗೋಸಲ ಭರಮಪ್ಪ, ಜಂಬಯ್ಯ ನಾಯಕ, ಕಿಚಿಡಿ ಶ್ರೀನಿವಾಸ್, ಛತ್ರಪ್ಪ, ಕಣ್ಣಿ ಶ್ರೀಕಂಠ, ಪಿ.ವಿ. ವೆಂಕಟೇಶ, ಎಸ್. ಚಂದ್ರಪ್ಪ, ಗುಂಡಿ ಪ್ರಶಾಂತ, ಕಿಚಿಡಿ ಮಂಜುನಾಥ ಮತ್ತಿತರರಿದ್ದರು.
ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ:
ಸಿಎಂ ಬದಲಾವಣೆ ಅನ್ನೋದು ಈ ಹೊತ್ತಿನ ದೊಡ್ಡ ಸುದ್ದಿ ಅಷ್ಟೇ. ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಹೇಳಿದರು. ಬಿಜೆಪಿ ರಾಷ್ಟ್ರೀಯ ಪಕ್ಷ. ಜತೆಗೆ ಶಿಸ್ತಿನ ಪಕ್ಷವೂ ಹೌದು. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆದಾಗ ಯಾವ ರೀತಿಯಲ್ಲಿ ಆಯಿತು ಅಂತ ಗೊತ್ತಿದೆ. ಸಿಎಂ ಬದಲಾವಣೆ ಮಾತೇ ಇಲ್ಲ. ಬರೀ ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಆಗುತ್ತಿದೆ. ಯಡಿಯೂರಪ್ಪನವರೇ ಇನ್ನೂ ಎರಡು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದರು.