ಬೆಲ್ಲದಗೆ ಅವಸರವೇ ಮುಳುವಾಯಿತೇ?

Kannadaprabha News   | Asianet News
Published : Aug 05, 2021, 07:13 AM ISTUpdated : Aug 05, 2021, 07:45 AM IST
ಬೆಲ್ಲದಗೆ ಅವಸರವೇ ಮುಳುವಾಯಿತೇ?

ಸಾರಾಂಶ

* ಬಿಎಸ್‌ವೈ- ಶೆಟ್ಟರ್‌ ವಿರೋಧ ಕಟ್ಟಿಕೊಳ್ಳುವ ಅಗತ್ಯವಿರಲಿಲ್ಲ * ಬೆಲ್ಲದ ಇನ್ನು ಅನುಭವದಲ್ಲಿ ಕಿರಿಯರು. ರಾಜಕೀಯದಲ್ಲಿ ಅಪಾರ ತಾಳ್ಮೆ ಬೇಕು * ಸಾಧನೆಯ ಹಾದಿಯಲ್ಲಿ ಇರುವಾಗಲೇ ಅಧಿಕಾರಕ್ಕಾಗಿ ಅವಸರಪಟ್ಟು ಎಡವಿದ ಬೆಲ್ಲದ  

ಹುಬ್ಬಳ್ಳಿ(ಆ.05): 'ಅಪಘಾತಕ್ಕೆ ಅವಸರವೇ ಕಾರಣ’ ಎನ್ನುವ ಮಾತು ಇದೀಗ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ನಡೆಗೆ ಅಕ್ಷರಶಃ ಹೋಲಿಕೆಯಾಗುತ್ತಿದೆ. ಮಂತ್ರಿಗಿರಿಗೂ ಪರಿಗಣನೆಯಾಗದ ಯುವ ಶಾಸಕ ಬೆಲ್ಲದ, ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಅಪಹಾಸ್ಯಕ್ಕೆ ಈಡಾಗಿದ್ದಾರೆ!

ಅರವಿಂದ ಓದಿಕೊಂಡ ಯುವಕ, ಪ್ರಾಮಾಣಿಕ, ರಾಜಕೀಯ ಹಿನ್ನಲೆಯಿಂದ ಬಂದ ಜನಪ್ರತಿನಿಧಿ, ಎರಡನೇ ಬಾರಿ ಶಾಸಕ. ಆದರೆ, ಪಕ್ಷದ ಸಂಘಟನೆ ಮತ್ತು ಕ್ಷೇತ್ರದ ಜನತೆಯ ಸಮಸ್ಯೆ ಬಗೆಹರಿಸುವಲ್ಲಿ ಹೇಳಿಕೊಳ್ಳುವಂತ ಯಾವುದೇ ಸಾಧನೆಯನ್ನು ಇನ್ನೂ ಮಾಡಿಲ್ಲ. ಸಾಧನೆಯ ಹಾದಿಯಲ್ಲಿ ಇರುವಾಗಲೇ ಅಧಿಕಾರಕ್ಕಾಗಿ ಅವಸರಪಟ್ಟು ಎಡವಿದ್ದಾರೆ.

ಒಮ್ಮೆಯೂ ಸಚಿವರಾಗಿ ಅನುಭವ ಹೊಂದದೇ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಅದೂ ರಾಜಕೀಯ ಮುತ್ಸದ್ದಿಗಳು, ಮಾಜಿ ಮುಖ್ಯಮಂತ್ರಿಗಳು, ಪಕ್ಷದ ಹಿರಿಯರಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಯಾರದೋ ಮಾತು ಕೇಳಿ ಮುಖ್ಯಮಂತ್ರಿಯಾಗಲು ಬೆಂಗಳೂರು-ದೆಹಲಿ ಮಧ್ಯೆ ಓಡಾಡಿದರು.

ಸಿಎಂ ಮಾಡಲಿಲ್ಲ, ಮಂತ್ರಿಗಿರಿಯಾದರೂ ಕೊಡ್ರಿ, ವರಿಷ್ಠರ ಮುಂದೆ ಬೆಲ್ಲದ್ ಅಳಲು.!

ದೆಹಲಿ ನಾಯಕರ ಮನೆಗೆ ಎಡತಾಕಿದ್ದು, ಕೋವಿಡ್‌, ಪ್ರವಾಹ ಸಂಕಷ್ಟದಲ್ಲಿ ಕ್ಷೇತ್ರದಿಂದ ದೂರ ಉಳಿದು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿ ತಿರುಗಿದ್ದುದು ಮಂತ್ರಿಗಿರಿ ಇವರ ಹತ್ತಿರವೂ ಸುಳಿಯದಂತೆ ಮಾಡಿತು ಎನ್ನುವುದು ಇಲ್ಲಿ ಗಮನೀಯ.

ಧಾರವಾಡ ಜಿಲ್ಲೆಯಿಂದ ಈಗ ಸಚಿವರಾಗಿರುವ ಶಂಕರ ಪಾಟೀಲ್‌ ಮುಲೇನಕೊಪ್ಪ ಮತ್ತು ಅರವಿಂದ ಬೆಲ್ಲದ ಒಂದೇ ಸಮುದಾಯಕ್ಕೆ ಸೇರಿದವರು. ಆದರೆ, ಅನುಭವದಲ್ಲಿ ಲೆಕ್ಕ ಹಾಕಿದರೆ ಮುನೇನಕೊಪ್ಪ ಹಿರಿಯರು. ಬೆಲ್ಲದ ಅವರ ತಂದೆ ಚಂದ್ರಕಾಂತ ಬೆಲ್ಲದ ಅವರು ಶಾಸಕರಾಗಿದಾಗಿದ್ದಲೇ ಪಾಟೀಲ ಶಾಸಕರು. ಹೀಗಾಗಿ ಸಹಜವಾಗಿ ಹಿರಿತನ ಗಮನಕ್ಕೆ ತೆಗೆದುಕೊಂಡರೆ ಮುನೇನಕೊಪ್ಪ ಮಂತ್ರಿ ಸ್ಥಾನಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಹೈಕಮಾಂಡ್‌ ಬಂದು ಸಚಿವಗಿರಿ ದಯಪಾಲಿಸಿದೆ.

ವಾಸ್ತವ ಹೀಗಿರುವಾಗ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದೆ ಮಂತ್ರಿಯನ್ನಾಗಿ ಮಾಡಿ ಎಂದು ವರಿಷ್ಟರಲ್ಲಿ ಅಲವತ್ತುಕೊಳ್ಳುವುದು, ಮಂತ್ರಿಗಿರಿಯೂ ಸಿಗಲಿಲ್ಲ ಕ್ಷೇತ್ರದ ಜನತೆಗೆ ಹೇಗೆ ಮುಖ ತೋರಿಸಲಿ ಎನ್ನುವ ಹತಾಸೆ ಎರಡೂ ಸರಿಯಲ್ಲ. ಇದೇ ಕೊರಗಲ್ಲಿ ಕ್ಷೇತ್ರಕ್ಕೂ ಬಾರದೆ ಬೆಂಗಳೂರಲ್ಲೇ ಉಳಿದುಕೊಂಡಿರುವ ಕ್ಷೇತ್ರದ ಮತದಾರರ ವಿಶ್ವಾಸವನ್ನೂ ಕಳೆದುಕೊಳ್ಳುವ ಅಪಾಯವಿದೆ.

ಅರವಿಂದ ಬೆಲ್ಲದ ಇನ್ನು ಅನುಭವದಲ್ಲಿ ಕಿರಿಯರು. ರಾಜಕೀಯದಲ್ಲಿ ಅಪಾರ ತಾಳ್ಮೆ ಬೇಕಾಗುತ್ತದೆ. ಆತುರಪಟ್ಟು ನಿರ್ಧಾರಗಳನ್ನು ಕೈಗೊಳ್ಳದೇ ತಾಳ್ಮೆಯಿಂದ ಮುನ್ನೆಡೆಯಬೇಕು. ಅಂದಾಗ ಮಾತ್ರ ರಾಜಕೀಯದಲ್ಲಿ ಒಂದಿಲ್ಲಾ ಒಂದುದಿನ ಉಜ್ವಲ ಭವಿಷ್ಯ ಸಿಕ್ಕೇ ಸಿಗುತ್ತದೆ ಎನ್ನುವ ಸತ್ಯವನ್ನು ಅವರು ಅರ್ಥಮಾಡಿಕೊಂಡು ಜನತೆಯ ಸೇವೆಗೆ ನಿಲ್ಲಬೇಕಿದೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!