ಬಂಡಾಯದ ಮಧ್ಯೆ ಶಿರಾ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್

By Kannadaprabha NewsFirst Published Oct 9, 2020, 12:36 PM IST
Highlights

ಇನ್ನೇನು ಕೆಲ ದಿನಗಳಲ್ಲೇ  ರಾಜ್ಯದಲ್ಲಿ  ಉಪ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಪಕ್ಷಗಳು ತಮ್ಮದೇ ಗೆಲುವಿನ ನಿರೀಕ್ಷೆಯಲ್ಲಿವೆ.

ವರದಿ : ಉಗಮ ಶ್ರೀನಿವಾಸ್‌

 ತುಮಕೂರು(ಅ.09):  ಬಂಡಾಯದ ತಲೆ ಬಿಸಿಯಲ್ಲೇ ಶಿರಾವನ್ನು ಈ ಬಾರಿ ಗೆದ್ದು ತನ್ನ ನೆಲೆ ವಿಸ್ತರಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೆ ಮಧುಗಿರಿ, ಪಾವಗಡ, ಶಿರಾ ಮತ್ತು ಕೊರಟಗೆರೆಯಲ್ಲಿ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿಲ್ಲ. ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕಾಗಿರುವ ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ದಾಖಲಿಸಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಮಧುಗಿರಿ ಮತ್ತು ಶಿರಾದಲ್ಲಿ ದೊಡ್ಡ ಮಟ್ಟದಲ್ಲಿ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಗೆ ಸೇರುವ ಶಿರಾ ಹಾಗೂ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಮಧುಗಿರಿಯಲ್ಲಿ ಬಿಜೆಪಿಗೆ ಮತದಾರರು ಭರ್ಜರಿಯಾಗಿ ಮಣೆ ಹಾಕಿದ್ದಾರೆ. ಆದರೆ ವಿಧಾನಸಭಾ ಚುನಾವಣೆಗೆ ಬಂದರೆ ಈ ಭಾಗದಲ್ಲಿ ಬಿಜೆಪಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಆದರೆ ಈ ಬಾರಿ ಮಾಜಿ ಸಂಸದ ಹಾಗೂ ಮಾಜಿ ಶಾಸಕ ಸಿ.ಪಿ. ಮೂಡಲಗಿರಿಯಪ್ಪ ಅವರ ಪುತ್ರ ರಾಜೇಶಗೌಡ ಅವರನ್ನು ಬಿಜೆಪಿಗೆ ಸೆಳೆದಿರುವ ಬಿಜೆಪಿ ಅವರಿಗೆ ಟಿಕೆಟ್‌ ನೀಡಲು ನಿರ್ಧರಿಸಿದ್ದಾರೆ. ಈಗಾಗಲೇ ಶಿರಾದಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಹಿಂದುಳಿದ ವರ್ಗಕ್ಕೆ ಸೇರಿದ್ದ ಬಿ.ಕೆ. ಮಂಜುನಾಥ್‌ ಹಾಗೂ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಎಸ್‌.ಆರ್‌. ಗೌಡ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ ಏಕಾಏಕಿ ಹೊರಗಿನಿಂದ ಬಂದವರಿಗೆ ಟಿಕೆಟ್‌ ಕೊಡಲು ಹೊರಟಿರುವುದಕ್ಕೆ ಬಿಜೆಪಿಯೊಳಗೆ ಅಸಮಾಧಾನ ಭುಗಿಲೆದ್ದಿದೆ. ಮೂಲತಃ ಶಿರಾದವರೇ ಆದರೂ ಬೆಂಗಳೂರಿನಲ್ಲಿ ತಮ್ಮ ಕಾರ್ಯವ್ಯಾಪ್ತಿ ಹೊಂದಿರುವ ರಾಜೇಶಗೌಡ ಅವರು ಹೊರಗಿನವರು ಎಂಬ ಭಾವನೆ ಬಿಜೆಪಿ ಕಾರ್ಯಕರ್ತರದ್ದು.

ಬಿಹಾರ ವಿಧಾನಸಭಾ ಚುನಾವಣೆ: ಲಾಲುಗೆ ಇದು ಕಡೇ ಅವಕಾಶ, ನಿತೀಶ್‌ ಕುಮಾರ್‌ಗೆ ಅಪಾಯ! .

ಈಗಾಗಲೇ ಎರಡು ಬಾರಿ ನಡೆದ ಬಿಜೆಪಿ ಬೂತ್‌ ಮಟ್ಟದ ಸಭೆಯಲ್ಲಿ ಅಸಮಾಧಾನವನ್ನು ಹೊರ ಹಾಕಲಾಗಿದೆ. ಶಿರಾದ ಚುನಾವಣಾ ಫಲಿತಾಂಶವನ್ನು ಅವಲೋಕಿಸಿದರೆ ಹೇಳಿಕೊಳ್ಳುವಂತಹ ಸಾಧನೆಯನ್ನು ಬಿಜೆಪಿ ಮಾಡಿಲ್ಲ. ಈ ಕ್ಷೇತ್ರ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಕೋಟೆ. ಹೀಗಾಗಿ ಕೋಟೆ ಬೇಧಿಸಲೇಬೇಕೆಂಬ ಪಣವನ್ನು ಬಿಜೆಪಿ ತೊಟ್ಟಿದೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ಗೆದ್ದ ರೀತಿಯಲ್ಲೇ ಈ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಸ್ಥಳೀಯ ಕಾರ್ಯಕರ್ತರ ಅಸಮಾಧಾನ ತಲೆನೋವನ್ನು ತಂದಿದೆ. ಈಗಾಗಲೇ ಕಾರ್ಯಕರ್ತರಿಗೆ ಆಗಿರುವ ಅಸಮಾಧಾನವನ್ನು ಹೋಗಲಾಡಿಸಲು ಬಿಜೆಪಿ ಸರ್ಕಸ್‌ ಮಾಡುತ್ತಿದ್ದರೂ ಇನ್ನೂ ಯಶ ಕಂಡಿಲ್ಲ. ಬಹುಶಃ ಅಧಿಕೃತವಾಗಿ ಟಿಕೆಟ್‌ ಘೋಷಣೆಯಾದ ಬಳಿಕ ಬಂಡಾಯವೆದ್ದಿರುವವರನ್ನು ಒಟ್ಟಾಗಿ ಸೇರಿಸಿ ಸೂತ್ರ ಕಂಡುಕೊಳ್ಳುವ ವಿಶ್ವಾಸವನ್ನು ಬಿಜೆಪಿ ಮುಖಂಡರು ವ್ಯಕ್ತಪಡಿಸಿದ್ದಾರೆ.

ಕುಂಚಿಟಿಗ ಒಕ್ಕಲಿಗ, ಮಾದಿಗ ಸಮುದಾಯ, ಗೊಲ್ಲ, ಮುಸ್ಲಿಂ, ಕುರುಬ, ನಾಯಕ ಹೀಗೆ ಹತ್ತು ಹಲವಾರು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಶಿರಾ ಕ್ಷೇತ್ರವನ್ನು ತಮ್ಮ ವಶಕ್ಕೆ ತೆಗೆದುಕೊಂಡರೆ ಹಿಂದುಳಿದ ತಾಲೂಕಿಗೆ ಬಿಜೆಪಿ ಲಗ್ಗೆ ಇಟ್ಟಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಿರಾ ಕ್ಷೇತ್ರವನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಆದರೆ ಕಾರ್ಯಕರ್ತರ ನಡುವಿನ ಬಂಡಾಯ ಹೊಸ ಸಮಸ್ಯೆಯನ್ನು ತಂದೊಡ್ಡಿದೆ.

click me!