'ಗೊಮ್ಮಟೇಶ್ವರ ನಿರ್ಮಿಸಿದ್ದು ನಾವೇ ಅಂತಾರೆ ರೇವಣ್ಣ'

By Kannadaprabha NewsFirst Published Oct 9, 2020, 2:21 PM IST
Highlights

ಮಾಜಿ ಸಚಿವ ಎಚ್ ಡಿ ರೇವಣ್ಣ ಅವರಷ್ಟು ದೊಡ್ಡವನು ನಾನಲ್ಲ ಎಂದು ಮುಖಂಡರೋರ್ವರು ಹೇಳಿದ್ದಾರೆ

ಹಾಸನ (ಅ.09): ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಮಾತಾನಾಡುವುದಕ್ಕೆ ಬಿಟ್ಟರೆ, ಹಳೇಬೀಡು, ಬೇಲೂರು ದೇವಾಲಯ ಹಾಗೂ ಶ್ರವಣಬೆಳಗೊಳದ ಗೊಮ್ಮಟೇಶ್ವರನ ಮೂರ್ತಿಯನ್ನು ತಾವೇ ಕಟ್ಟಿಸಿದ್ದು ಅಂತಾರೆ ಎಂದು ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರಷ್ಟುದೊಡ್ಡವನು ನಾನಲ್ಲ. ಆದರೂ ಹಾಸನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನನ್ನ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ. ಆದರೆ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ನನಗೆ ಬಹಳಷ್ಟುಕನಸುಗಳಿವೆ. ಅದನ್ನೆಲ್ಲ ನನಸು ಮಾಡಲು ಅಧಿ​ಕಾರ ಇಲ್ಲ ಎನ್ನುವ ರೇವಣ್ಣ ಅವರಿಗೆ ಅ​ಧಿಕಾರ ಇದ್ದಾಗ ಆ ಕನಸುಗಳನ್ನು ನನಸು ಮಾಡುವ ಇಚ್ಛಾಶಕ್ತಿಯೇ ಇರಲಿಲ್ಲ. ಹಾಗಾಗಿ ಕನಸು ಕಾಣುವುದು ಮುಖ್ಯವಲ್ಲ. ಅವುಗಳನ್ನು ನನಸು ಮಾಡುವ ಮನಸ್ಸಿರಬೇಕು ಎಂದು ಟಾಂಗ್‌ ನೀಡಿದರು.

ನಗರಪಾಲಿಕೆ ಮಾಡಿಸಿದ್ದು ರೇವಣ್ಣ ಅಲ್ಲ:

ರೇವಣ್ಣನವರು ಹಾಸನ ನಗರಸಭೆಯನ್ನು ನಗರಪಾಲಿಕೆ ಮಾಡಲು ಹೊರಟಿದ್ದರು. ಅದು ರಿಜೆಕ್ಟ್ ಆಗಿದೆ. ಅವರು ಪ್ರಭಾವಿ ಆಗಿದ್ದರೂ ಅವರಿಂದ ಮಾಡಲು ಆಗಿರಲಿಲ್ಲ. ನಾನು ಸಾಮಾನ್ಯ ಶಾಸಕನಾಗಿ ಆ ಕೆಲಸ ಮಾಡಿದ್ದೇನೆ. 2021ರ ಜನಗಣತಿ ವರದಿ ಬಂದ ಬಳಿಕ ನಗರಪಾಲಿಕೆಯೇ ಅಥವಾ ಮಹಾನಗರಪಾಲಿಕೆಯೇ ಎಂಬುದು ಗೊತ್ತಾಗಲಿದೆ. ಬೇರೆಯವರ ರೀತಿಯ ದುರಂಕಾರ ನನಗಿಲ್ಲ. ಅಭಿವೃದ್ಧಿ ಮಾಡುತ್ತ ಹೋಗುತ್ತಿರುವೆ ಅಷ್ಟೆ. ಹಾಸನಕ್ಕೆ ಯಾವ ರೀತಿ ವ್ಯವಸ್ಥಿತವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಕುಡಿಯುವ ನೀರು, ಯುಜಿಡಿಗೆ ಮುಕ್ತಿ, ರಸ್ತೆ ಅಭಿವೃದ್ಧಿಯಾಗಲಿದೆ. ಬಿಲ್ಡಿಂಗ್‌ ಕಟ್ಟಿದರಷ್ಟೇ ಅಭಿವೃದ್ಧಿಯಲ್ಲ. ರಸ್ತೆ, ನೀರು, ಯುಜಿಡಿಯೂ ಮುಖ್ಯ ಎಂದರು.

ಅಧಿಕಾರಿಯೊಬ್ಬರ ಸಾವಿನ ಬಗ್ಗೆ ವಿಡಿಯೋ ಬಹಿರಂಗ : ರೇವಣ್ಣ ಎಚ್ಚರಿಕೆ! ...

ಮುಂದಿನ ದಿನಗಳಲ್ಲಿ ನಗರಸಭೆಯಲ್ಲಿ ಬಿಜೆಪಿ ಅ​ಧಿಕಾರ ಹಿಡಿಯಲಿದೆ. ಮೊದಲ ಬಾರಿಗೆ ಬಿಜೆಪಿಯ ಸದಸ್ಯರು ಅಧ್ಯಕ್ಷರಾಗಲಿದ್ದಾರೆ. ಯಾವುದೇ ಸಮುದಾಯಕ್ಕೆ ಮೀಸಲು ನಿಗದಿ ಮಾಡಿದರೂ ಬಿಜೆಪಿಗೆ ಅ​ಧಿಕಾರ ಸಿಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ನಗರಕ್ಕೆ ಅಮೃತ್‌ ಯೋಜನೆಯನ್ನು ಮೋದಿ ಮಾಡಬೇಕಿತ್ತು. 25 ಗ್ರಾಮಗಳನ್ನು ನಗರಸಭೆಗೆ ಸೇರಿಸಲು ಯಡಿಯೂರಪ್ಪ ಬರಬೇಕಾಯ್ತು. ಹಿಂದೆ ಅಧಿ​ಕಾರ ನಡೆಸಿದ್ದವರು ಏಕೆ ಮಾಡಲಿಲ್ಲ ಎಂದು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಕನಸು ಯಾರು ಬೇಕಾದರೂ ಕಾಣುತ್ತಾರೆ. ಆದರೆ ಸಾಕಾರಗೊಳಿಸುವ ಬದ್ಧತೆ ಬೇಕು. ಹಾಸನಕ್ಕೆ ರೇವಣ್ಣ ಕೊಡುಗೆ ಏನು ಎಂಬುದನ್ನು ಹೇಳಲಿ. ನಗರಸಭೆಗೆ ಸೇರ್ಪಡೆಯಾಗಿರುವ 25 ಗ್ರಾಮಗಳ ಅಭಿವೃದ್ಧಿಗೆ 165 ಕೋಟಿಗೆ ಮಂಜೂರಾತಿ ಸಿಕ್ಕಿದ್ದು, ಯುಜಿಡಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಅಮೃತ್‌ ಯೋಜನೆ ಬರುವ ಫೆಬ್ರವರಿಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾ​ಧಿಕಾರದಿಂದ ಹೊಸ ಬಡಾವಣೆ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಿಂಗಳಾಂತ್ಯದಲ್ಲಿ ರೈತರೊಂದಿಗೆ ಒಡಂಬಡಿಕೆಯಾಗಲಿದೆ ಎಂದರು.

ಶಿರಾ, ಆರ್‌.ಆರ್‌.ನಗರ ಫಲಿತಾಂಶ ನಂತರ ಸಂಪುಟ ವಿಸ್ತರಣೆಯಾಗಲಿದೆ. ಸಚಿವನಾಗಿ ಬರುತ್ತೇನೋ ಶಾಸನಾಗಿ ಬಂದು ಮಾತನಾಡುತ್ತಾನೋ ಚುನಾವಣೆ ಬಳಿಕ ಮಾತನಾಡುತ್ತೇನೆ. ಬಿಜೆಪಿ ಬಗ್ಗೆ ಜೆಡಿಎಸ್‌ ಸಾಫ್ಟ್‌ ಕಾರ್ನರ್‌ ಆದ್ರೆ ಸ್ವಾಗತ ಮಾಡುವೆ ಎಂದು ಹೇಳಿದರು.

ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣ ಮಾಡಲು ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದೆ. ಡಿಸೆಂಬರ್‌ 31ರ ಒಳಗೆ ಎಲ್ಲ ಪ್ರಕರಣ ಮುಗಿಸಿ ಮುಂದಿನ ಅಕ್ಟೋಬರ್‌ ಒಳಗೆ ಸೇತುವೆ ನಿರ್ಮಾಣವಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನನ್ನ ಮಾತನ್ನು ರೆಕಾರ್ಡ್‌ ಮಾಡಿ ಇಟ್ಟುಕೊಳ್ಳಿ ಎಂದರು.

click me!