'ಕಮಲ' ತೊರೆದು ಕಾಂಗ್ರೆಸ್‌ನತ್ತ ಹೊರಟ್ರಾ ಬಿಜೆಪಿ ನಾಯಕ..?

By Kannadaprabha NewsFirst Published Mar 13, 2021, 2:04 PM IST
Highlights

ಶಹಾಪೂರ ಮತಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ| ಕಾಂಗ್ರೆಸ್‌ ಸೇರ್ಪಡೆಯಾಗಿ ಯಾದಗಿರಿಯಿಂದ ಸ್ಪರ್ಧೆ ಕುರಿತು ವದಂತಿಗಳಿಗೆ ತೆರೆ| ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ: ಶಹಾಪೂರ ಮಾಜಿ ಶಾಸಕ, ಬಿಜೆಪಿಯ ಗುರು ಪಾಟೀಲ್‌| 

ಶಹಾಪುರ(ಮಾ.13): ಈ ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಬಿಜೆಪಿ ಪಕ್ಷ ತೊರೆದು ತಾವು ಕಾಂಗ್ರೆಸ್‌ ಸೇರುವ ಬಗ್ಗೆ ಹಬ್ಬುತ್ತಿರುವ ಮಾತುಗಳು ಕೇವಲ ವದಂತಿಗಳು ಎಂದು ಮಾಜಿ ಶಾಸಕ ಗುರು ಪಾಟೀಲ್‌ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪೂರ ಮತಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಈಗ ಬಿಜೆಪಿ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಯಾದಗಿರಿ ಮತಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತಾರೆಂಬ ವದಂತಿಗಳು ಹಬ್ಬಿದ್ದು, ಅದಕ್ಕೆ ಜನರು ಕಿವಿಗೊಡದಂತೆ ಮನವಿ ಮಾಡಿದರು.

ಕಾಂಗ್ರೆಸ್‌ ಸೇರುವ ಹಿನ್ನೆಲೆಯಲ್ಲಿ ಗುರು ಪಾಟೀಲರು ಈ ಕ್ಷೇತ್ರದ ಅಲಕ್ಷ್ಯತನ ವಹಿಸಿದ್ದಾರೆ. ಜನತೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿಗಳಿಗೆ ಯಾರು ಕಿವಿಗೊಡಬಾರದು, ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಎಂದು ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.

'ಜನರಿಗೆ ದ್ರೋಹ ಮಾಡಿದ ಮೋದಿ ಸರ್ಕಾರ, ಅಚ್ಚೇ ದಿನ್‌ ಯಾರಿಗೆ ಬಂದಿದೆ?'

ನಗರಸಭೆ, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆದು ಈ ಚುನಾವಣೆಗಳಲ್ಲಿ ತುಂಬಾ ಆಸಕ್ತಿಯಿಂದ ಕೆಲಸ ಮಾಡಿದ್ದೇನೆ. ಮುಂಬರುವ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನೂ ಸಹ ಉತ್ಸುಕತೆಯಿಂದ ಹಾಗೂ ಜವಾಬ್ದಾರಿಯಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತೇನೆ. ಕೆಲವರು ಹತಾಶೆಯಿಂದ ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಮತದಾರ ಬಂಧುಗಳಲ್ಲಿ ಮತ್ತು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟುಮಾಡುವ ತಂತ್ರ ರೂಪಿಸಿದ್ದಾರೆ ಎಂದು ವದಂತಿಗಳ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ ಅವರು, ನಾನು ಚುನಾವಣೆಗೆ ಸ್ಪಧಿ​ರ್‍ಸುವುದಾದರೆ ಅದು ಬಿಜೆಪಿ ಪಕ್ಷದಿಂದ ಮಾತ್ರ. ಅದು ಈ ಕ್ಷೇತ್ರದಿಂದಲೇ ಹಿಂದಿನಿಂದಲೂ ಪಕ್ಷದ ಮೇಲೆ ಮತ್ತು ನನ್ನ ಮೇಲೆ ಇಷ್ಟು ಪ್ರೀತಿ, ವಿಶ್ವಾಸ, ನಂಬಿಕೆ ಅದು ಯಾವತ್ತೂ ಸುಳ್ಳಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಬಿಜೆಪಿಯ ಹಿರಿಯ ಮುಖಂಡ ಮಲ್ಲಣ್ಣ ಸಾಹು ಮಡ್ಡಿ, ರಾಮಚಂದ್ರಪ್ಪ ಕಾಶಿರಾಜ, ನಗರಸಭೆ ಸದಸ್ಯ ಲಾಲಮಹಮ್ಮದ್‌ ಕುರೇಶಿ ಇದ್ದರು.
 

click me!