ರಾಮನಗರದಲ್ಲಿ ಡಿಕೆ ಸಹೋದರರು ದೌರ್ಜನ್ಯ ಎಸಗುತ್ತಿದ್ದಾರೆ. ನಿರಂತರವಾಗಿ ಇಲ್ಲಿ ಗೆಲುವು ಸಾಧಿಸುತ್ತಿರುವ ಇವರಿಗೆ ಪ್ರೀತಿಯಿಂದ ಗೆಲುವು ಸಿಗುತ್ತಿಲ್ಲ. ಹೆದರಿಸಿ ಗೆಲುವು ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕನಕಪುರ [ಜ.14]: ಪ್ರಕೃತಿ ಮೇಲೆ ಡಿಕೆ ಸಹೋದರರು ಮಾಡಿರುವ ದೌರ್ಜನ್ಯದ ವಿರುದ್ಧ ಅವರಿಗೆ ಪ್ರಾಕೃತಿಕ ನ್ಯಾಯಾಲಯದಲ್ಲಿ ಏನು ಶಿಕ್ಷೆಯಾಗಬೇಕೋ ಅದಾಗಿದೆ. ಆದರೆ, ಕೆಲವೊಂದು ಶಿಕ್ಷೆಯನ್ನು ಅವರು ತಮ್ಮದೇ ಪ್ರಯತ್ನದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವ್ಯಂಗ್ಯವಾಡಿದರು.
ಕನಕಪುರದಲ್ಲಿ ಮಾತನಾಡಿದ ಅವರು ಡಿಕೆ ಸಹೋದರರ ವಿರುದ್ಧ ನಾನು ನಿರಂತರವಾಗಿ ರಾಜಕೀಯ ಹೋರಾಟ ಮಾಡುತ್ತಲೇ ಬಂದಿದ್ದೇನೆ. ಇಂದು ಕೂಡ ಹಿಂದೂ ಜಾಗರಣಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಏಸು ಪ್ರತಿಮೆ ನಿರ್ಮಾಣವನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವಾಗಿದೆ. ಜತೆಗೆ, ಇದು ಡಿ.ಕೆ.ಶಿವಕುಮಾರ್ ವಿರುದ್ಧ ವೈಯಕ್ತಿಕ ಹೋರಾಟವಲ್ಲ, ಇದು ಅವರ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಾಗಿದೆ ಎಂದು ಪ್ರತಿಪಾದಿಸಿದರು.
ಡಿಕೆಶಿ ರಾಜಕೀಯ ಅವನತಿ ಶುರು: 'ಯೋಗಿ' ಭವಿಷ್ಯ ನುಡಿದ್ರು!...
ಕನಕಪುರದಲ್ಲಿ ಡಿಕೆ ಬ್ರದರ್ಸ್ ನಿರಂತರವಾಗಿ ಗೆಲ್ಲುತ್ತಾ ಬರುತ್ತಿದ್ದಾರೆ. ಅವರು ಈ ಪ್ರದೇಶವನ್ನು ಅಭಿವೃದ್ಧಿ ಮಾಡಿ ಇಲ್ಲಿನ ಜನರ ಮನಸ್ಸನ್ನು ಗೆಲ್ಲುತ್ತಿಲ್ಲ. ಜನರಲ್ಲಿ ಭಯ-ಭೀತಿ ಮೂಡಿಸುವ ಮೂಲಕ ಅಕ್ರಮ, ಕೊಲೆ-ಸುಲಿಗೆ, ಅನಾಚಾರಗಳನ್ನು ಅನುಚಾನವಾಗಿ ಮಾಡುವ ಮೂಲಕ ಈ ಭಾಗದಲ್ಲಿ ರಾಜಕೀಯವಾಗಿ ಬೇರೂರಿದ್ದಾರೆ. ಮುಂದಿನ ದಿನಗಳಲ್ಲಿ ಅವರ ದೌರ್ಜನ್ಯ ನಡೆಯಲ್ಲ, ಜನರೂ ಈಗ ಬುದ್ಧಿವಂತರಾಗಿದ್ದಾರೆ. ಜನತೆಗೂ ಎಲ್ಲವೂ ಅರ್ಥವಾಗಿದೆ. ಹಾಗಾಗಿ, ಮುಂಬರುವ ದಿನಗಳಲ್ಲಿ ಕನಕಪುರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ ಎಂದು ಯೋಗೇಶ್ವರ್ ಭವಿಷ್ಯ ನುಡಿದರು.
ಕನಕಪುರ ಕಲ್ಲುಬಂಡೆ, ಬೆಟ್ಟ-ಗುಡ್ಡಗಳಿಗೆ ಹೆಸರುವಾಸಿಯಾಗಿತ್ತು. ಆದರೆ, ಇಂದು ಡಿಕೆ ಬ್ರದರ್ಸ್ ಕಪಿಮುಷ್ಟಿಗೆ ಸಿಲುಕಿ, ಬಯಲು ಪ್ರದೇಶವಾಗಿ ಬರಡು ಸೀಮೆಯಾಗಿ ಮಾರ್ಪಟ್ಟಿದೆ. ನಾನು ಅರಣ್ಯ ಸಚಿವನಾಗಿದ್ದ ವೇಳೆ ಈ ಸಹೋದರರ ಅಕ್ರಮವನ್ನು ಬಯಲಿಗೆಳೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮಾಡಿದ್ದುಣ್ಣೋ ಮಾರಾಯ ಎಂಬಂತೆ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರಿಗೆ ಕಷ್ಟದ ದಿನಗಳು ಕಾದಿವೆ. ಆ ಪ್ರಕೃತಿಯ ಜೊತೆಗೂಡಿ ಜನರೇ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಎಚ್ಚರಿಸಿದರು.