ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಪ್ರಾಮಾಣಿಕರ ಮೇಲೆ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಾಮನಗರ [ಡಿ.03]: ತಮ್ಮ ಅಕ್ರಮ ದಂಧೆಗಳಿಗೆ ಸಹಕಾರ ನೀಡುತ್ತಿಲ್ಲವೆಂಬ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲೆಯ ಪ್ರಾಮಾಣಿಕ ಅಧಿಕಾರಿಗಳೊಂದಿಗೆ ಡಿಕೆ ಸಹೋದರರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ ನಾರಾಯಣಗೌಡ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಅಧಿಕಾರಿಗಳು ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಹಿಡಿತಕ್ಕೆ ಸಿಗುತ್ತಿಲ್ಲವೆಂಬ ಕಾರಣಕ್ಕಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಡಿಕೆ ಸಹೋದರರು ಬ್ಲಾಕ್ಮೇಲ್ ಮಾಡಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಕೈಗೊಂಬೆಯಾಗಿ ಕೆಲಸ ಮಾಡಲು ಬರುವುದಿಲ್ಲ. ಕಾನೂನು ವ್ಯಾಪ್ತಿಯಲ್ಲಿ ತಾವೇನು ಕೆಲಸ ಮಾಡಬೇಕೊ ಅದನ್ನು ಮಾಡುತ್ತಾರೆ. ಇದು ತಿಳಿದಿದ್ದರೂ ಸಹ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅಧಿಕಾರಿಗಳೊಂದಿಗೆ ಬಿಹಾರಿ ರಾಜಕಾರಣಿಗಳಂತೆ ನಡೆದುಕೊಳ್ಳುತ್ತಿದ್ದಾರೆ ಎಂದರು.
ಕಾಲಹರಣ
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇಡಿ ಮತ್ತು ಐಟಿ ಪ್ರಕರಣದಲ್ಲಿ ಸಿಲುಕಿ ತಿಹಾರ್ ಜೈಲು ಸೇರಿದ್ದರು. ಡಿ.ಕೆ. ಸುರೇಶ್ ಸಂಸದರಾಗಿ ಆಯ್ಕೆಯಾದ ನಂತರ ಆರು ತಿಂಗಳಿಂದ ಸಹೋದರನ ಜೈಲು ಬೇಲು
ಇದರಲ್ಲಿಯೇ ಓಡಾಡಿಕೊಂಡು ಕಾಲಹರಣ ಮಾಡಿದರು. ಜೈಲಿನಿಂದ ಹೊರ ಬಂದ ನಂತರ ಡಿಕೆ ಸಹೋದರರು ರಾಮನಗರ ಜಿಲ್ಲೆಯನ್ನು ರಿಪಬ್ಲಿಕ್ ಆಫ್ ಡಿಕೆಎಸ್ ಮಾಡಲು ಹೊರಟಿದ್ದಾರೆ ಎಂದು ಟೀಕೆ ಮಾಡಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಜಿಲ್ಲೆಯ ಒಂದೂವರೆ ಲಕ್ಷ ರೈತರು ವಂಚಿತರಾಗಿದ್ದಾರೆ. ಅಷ್ಟುಪ್ರಮಾಣದ ರೈತರು ವಂಚಿತರಾಗಲು ಕಾರಣ ಏನೆಂಬುದರ ಮಾಹಿತಿಯನ್ನು ಸಂಸದರು ಸಂಗ್ರಹಿಸಿಕೊಳ್ಳಬೇಕಿತ್ತು. ಆದರೆ, ಅಧಿಕಾರಿಗಳು ತಮ್ಮ ಹಿಡಿತಕ್ಕೆ ಬರುತ್ತಿಲ್ಲವೆಂದು ದಿಶಾ ಸಭೆಯಲ್ಲಿ ಸಂಸದರು ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಅಧಿಕಾರಿಗಳ ವಿರುದ್ಧ ಅರೆ ಹುಚ್ಚರ ರೀತಿಯಲ್ಲಿ ಕೂಗಾಡಿದ್ದಾರೆ ಎಂದರು.
ಎಸ್ಪಿ ಟಾರ್ಗೆಟ್:
ಜಿಲ್ಲಾ ಎಸ್ಪಿ ಅನೂಪ್ ದಕ್ಷ ಅಧಿಕಾರಿಯೆಂದು ಹೆಸರು ಪಡೆದಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಎಸ್ಪಿ ಅವರಿಗೆ ಜಿಲ್ಲೆ ಬಗ್ಗೆ ಏನು ಗೊತ್ತಿಲ್ಲ. ಹೊಸದಾಗಿ ಬಂದಿದ್ದಾರೆ. ಅವರನ್ನು ಹೇಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಗೊತ್ತಿದೆ ಎಂದಿದ್ದರು. ಇದೀಗ ಸಂಸದರು ಎಸ್ಪಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕನಕಪುರದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣದಲ್ಲಿ 64 ಅಧಿಕಾರಿಗಳು, ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಅವರ ಪತ್ನಿ ಉಷಾ ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹೆಸರು ಅಪರಾಧಿಗಳ ಪಟ್ಟಿಯಲ್ಲಿದೆ. ಅಧಿಕಾರಿಗಳನ್ನು ಹೇಗೆಲ್ಲ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಅರಣ್ಯ ಲೂಟಿ ಪ್ರಕರಣಕ್ಕಿಂತಲೂ ಮತ್ತೊಂದು ಉದಾಹರಣೆ ಬೇಕಿಲ್ಲ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸದನದಲ್ಲಿ ಚೆನ್ನಾಗಿರಬಹುದು. ಭ್ರಷ್ಟಾಚಾರದ ವಿಚಾರದಲ್ಲಿ ಡಿಕೆಶಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಲು ಬರುವುದಿಲ್ಲ. ಹೈಕೋರ್ಟ್ ಆದೇಶದಂತೆ 64 ಅಧಿಕಾರಿಗಳು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅಶ್ವತ್್ಥ ನಾರಾಯಣಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಾಗೂ ಲೋಕಸಭೆ ಸ್ಪೀಕರ್ಗೆ ದೂರು:
ಅಕ್ರಮ ದಂಧೆಗಳಿಗೆ ಪ್ರಾಮಾಣಿಕ ಅಧಿಕಾರಿಗಳು ಸಹಕಾರ ನೀಡುತ್ತಿವೆಂದು ಡಿಕೆ ಸಹೋದರರು ಬ್ಲಾಕ್ ಮೇಲೆ ಮಾಡಿ ತಮ್ಮ ಹಿಡಿತಕ್ಕೆ ಇಟ್ಟುಕೊಳ್ಳುವುದನ್ನು ಬಿಜೆಪಿ ಖಂಡಿಸುತ್ತದೆ. ಈ ಕೂಡಲೇ ಅಧಿಕಾರಿಗಳಲ್ಲಿ ಕ್ಷಮೆ ಕೇಳಬೇಕು. ಅಧಿಕಾರಿಗಳಿಗೆ ಧಮಕಿ ಹಾಕಿರುವ ವಿಚಾರವನ್ನು ರಾಜ್ಯ ಸರ್ಕಾರ ಹಾಗೂ ಲೋಕಸಭೆ ಸ್ಪೀಕರ್ಗೆ ದೂರು ಸಲ್ಲಿಸುತ್ತೇವೆ ಎಂದರು.
ಡಿಕೆ ಸಹೋದರರ ಅಕ್ರಮ ದಂಧೆಗಳ ಹಿಂದೆ ತಹಸೀಲ್ದಾರ್ ಆನಂದಯ್ಯ ಕಾಣದ ಕೈಯಾಗಿ ಕೆಲಸ ಮಾಡುತ್ತಿದ್ದಾರೆ. ಶಿರಸ್ತೆದಾರರಾಗಿದ್ದ ಅವರನ್ನು ತಹಸೀಲ್ದಾರ್ ಹುದ್ದೆಯಲ್ಲಿ ಕೂರಿಸಿದ್ದಾರೆ. ರೈತನ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿದ್ದಕ್ಕೆ ಆನಂದಯ್ಯ ಅವರನ್ನು ಹೈಕೋರ್ಟ್ ಅಮಾನತಿಗೆ ಆದೇಶಿಸಿತ್ತು. ಆದರೆ, ಕೆಇಟಿಯಿಂದ ತಡೆಯಾಜ್ಞೆ ತಂದ ಅಂತಹ ಅಧಿಕಾರಿಯನ್ನು ಉಳಿಸಿಕೊಂಡಿದ್ದಾರೆ.
ಶಿಸ್ತು ಕ್ರಮ ಜರುಗಿಸಿ: ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ನಗರಸಭೆ ಆಯುಕ್ತೆ ಶುಭಾ ಸೇರಿದಂತೆ ಕೆಲ ಅಧಿಕಾರಿಗಳು ಅಕ್ರಮ ಖಾತೆ ಮಾಡಿರುವ ದೂರುಗಳಿದ್ದರೆ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ರಾಜ್ಯಸರ್ಕಾರಕ್ಕೆ ಪತ್ರ ಬರೆದು ಅಮಾನತಿಗೆ ಆದೇಶಿಸುವಂತೆ ಒತ್ತಡ ಹೇರುತ್ತಿಲ್ಲವೇಕೆ ಎಂದು ಡಿಕೆ ಸಹೋದರರನ್ನು ಪ್ರಶ್ನಿಸಿದರು.
ಸರ್ಕಾರಿ ಅಧಿಕಾರಿಗಳಿಗೆ ಧಮಕಿ ಹಾಕುವ ಕಾಲ ಹೊರಟು ಹೋಗಿದೆ. ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ನಾವು ಅದಕ್ಕೆ ಸಹಕಾರ ನೀಡುತ್ತೇವೆ. ಅದನ್ನು ಬಿಟ್ಟು ಗೂಂಡಾ ರೀತಿಯಲ್ಲಿ ವರ್ತನೆ ಮಾಡುವುದನ್ನು ಯಾರು ಸಹಿಸುವುದಿಲ್ಲ ಎಂದು ಅಶ್ವತ್ ನಾರಾಯಣಗೌಡ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪ್ರವೀಣ್ ಗೌಡ, ಮುಖಂಡರಾದ ಪದ್ಮನಾಭ, ರುದ್ರದೇವರು, ಸುರೇಶ್, ಭರತ್ ರಾಜ್, ಜಯಣ್ಣ, ಮಂಜು, ನಗರಸಭೆ ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ನಾಗೇಶ್ ಇದ್ದರು.