ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಹಂಚಿಕೆ ಗೊಂದಲವಿಲ್ಲ : ಎಚ್‌.ಡಿ. ಕುಮಾರಸ್ವಾಮಿ

By Kannadaprabha News  |  First Published Feb 13, 2024, 9:17 AM IST

ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಸ್ಥಾನದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ನ ದುರಾಡಳಿತ ಕೊನೆಗಾಣಿಸಬೇಕು. ಈ ಭ್ರಷ್ಟ ಸರ್ಕಾರ ತೆಗೆಯಬೇಕು, ೨೮ಕ್ಕೆ ೨೮ ಲೋಕಸಭೆ ಕ್ಷೇತ್ರ ಗೆಲ್ಲಬೇಕು. ಸ್ಥಾನಗಳ ಹಂಚಿಕೆ ಎಷ್ಟು ಎನ್ನುವುದು ಮುಖ್ಯವಲ್ಲ ಎಂದು ಮಾಹಿತಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.


  ಹಾಸನ :  ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಸ್ಥಾನದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್‌ನ ದುರಾಡಳಿತ ಕೊನೆಗಾಣಿಸಬೇಕು. ಈ ಭ್ರಷ್ಟ ಸರ್ಕಾರ ತೆಗೆಯಬೇಕು, ೨೮ಕ್ಕೆ ೨೮ ಲೋಕಸಭೆ ಕ್ಷೇತ್ರ ಗೆಲ್ಲಬೇಕು. ಸ್ಥಾನಗಳ ಹಂಚಿಕೆ ಎಷ್ಟು ಎನ್ನುವುದು ಮುಖ್ಯವಲ್ಲ ಎಂದು ಮಾಹಿತಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಾಲೂಕಿನ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದ ಶ್ರೀ ಕೆರೆಕೋಡಿಯಮ್ಮ ಮತ್ತು ಶ್ರೀ ಈಶ್ವರ ದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದರು. ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಸೀಟು ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದರು.

Latest Videos

undefined

ಮಂಡ್ಯದಲ್ಲಿ ಪ್ರತಿ ದಿನ ಒಂದು ಧಾರಾವಾಹಿ ಇರಲೇಬೇಕು. ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲೇಬೇಕು ಎಂದು ರಾಜಕೀಯ ಮಾಡಿದರು. ಲೋಕಸಭೆಗೆ ನಿಖಿಲ್‌ ಸ್ಪರ್ಧೆ ಬಗ್ಗೆ ಒಂದು ತಿಂಗಳಿನಿಂದ ಧಾರಾವಾಹಿ ನಡೆಯುತ್ತಿದೆ. ಈ ಜಿಲ್ಲೆಯಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲ್ಲಬೇಕು. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನ ಮಂತ್ರಿ ಆಗುವುದನ್ನು ಯಾರು ತಪ್ಪಿಸಲು ಆಗುವುದಿಲ್ಲ ಎಂದು ಭವಿಷ್ಯ ನುಡಿದರು.

ಪ್ರೀತಂ ಗೌಡರನ್ನು ಚುನಾವಣೆಗೆ ನಿಲ್ಲಿಸೋಣ:

‘ಪ್ರೀತಂ ಗೌಡರಿಗೆ ಇನ್ನು ಸಣ್ಣ ವಯಸ್ಸು, ಹಾಗಾಗಿ ಮಾತನಾಡುತ್ತಾರೆ. ಪ್ರೀತಂ ಗೌಡ ನನಗೆ ತಮ್ಮ ಇದ್ದಂತೆ. ಎಲ್ಲವನ್ನು ಕುಳಿತು ಸರಿ ಮಾಡೋಣ. ಬೇಕಾದರೆ ಅವರನ್ನೇ ಲೋಕಸಭೆ ಚುನಾವಣೆಗೆ ನಿಲ್ಲಿಸೋಣ. ನಾವು, ಅವರು ಅಣ್ಣ-ತಮ್ಮಂದಿರ ತರ ಹೋಗಬೇಕಲ್ವಾ. ಕುಳಿತು ಸರಿ ಮಾಡೋಣ, ಅದು ಸಮಸ್ಯೆ ಅಲ್ಲ’ ಎಂದು ವ್ಯಂಗ್ಯವಾಗಿ ಮಾತನಾಡಿದರು.

ಹಾಸನ ಮತ್ತು ಮಂಡ್ಯ ಬಿಜೆಪಿಗೆ ಟಿಕೆಟ್ ನೀಡುವಂತೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಒತ್ತಾಯ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಲೋಕಸಭೆಗೆ ಸ್ಪರ್ಧೆ ತೀರ್ಮಾನ ಇಲ್ಲ:

ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ‘ನಾನು ಸ್ಪರ್ಧೆ ಮಾಡಬೇಕು ಅಂತ ನಿಮಗೆ ಆಸೆ ಇದೆಯಾ, ರಾಜ್ಯ ಬಿಟ್ಟು ನನ್ನ ಏಕೆ ಕಳಿಸ್ತೀರಾ, ನಾನು ರಾಜ್ಯದಲ್ಲಿ ಇರೋಣ ಅಂತ ಇದ್ದೇನೆ. ಎಲ್ಲಾ ಕಡೆ ಕೇಳ್ತಾರೆ, ಈ ಬಾರಿ ನಿಂತರೆ ನೀವು ಕೇಂದ್ರದಲ್ಲಿ ಮಂತ್ರಿ ಆಗ್ತೀರಿ ಎಂದು. ರಾಜ್ಯಕ್ಕೆ ಒಳ್ಳೆಯದಾಗುತ್ತೆ ನಿಲ್ಲಬೇಕು ಅಂತಾರೆ. ನಾನು ಆ ವಿಷಯದಲ್ಲಿ ಈ ಕ್ಷಣದವರೆಗೂ ಯಾವುದೇ ತೀರ್ಮಾನ ಮಾಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಣ ಕೊಡುವ ಈ ವ್ಯವಸ್ಥೆ ಪ್ರಾರಂಭವಾಗಿದ್ದು ಯಾವಾಗ? ಈಗ ದೊಡ್ಡ ಮಟ್ಟದಲ್ಲಿ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಈ ರಾಜ್ಯದಲ್ಲಿ ದಾಖಲೆಯ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿ ನೀವೇ. ಈಗ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಹೇಳುತ್ತಿದ್ದೀರಿ. 1952 ಸಂವಿಧಾನದಲ್ಲಿ ಸಂಸ್ಥೆಯನ್ನು ಪ್ರಾರಂಭ ಮಾಡಿದರು. ಅಲ್ಲಿಂದ ಚರ್ಚೆ ಮಾಡಲು ಹೋದರೆ ದೊಡ್ಡ ಕಥೆಯಿದೆ. ಎನ್‌ಡಿಆರ್‌ಎಫ್‌ನಿಂದ ಬಿಡಿಗಾಸು ಕೊಟ್ಟಿಲ್ಲ ಅಂತಾರೆ. ವಿಶೇಷ ಅನುದಾನ ಕೆಲವನ್ನು ದೊಡ್ಡ ಪ್ರಮಾಣದಲ್ಲಿ ಕೇಂದ್ರದಿಂದ ನೀಡಲಾಗಿದೆ’ ಎಂದು ಅಣಕವಾಡಿದರು.

ರಾಜಕೀಯ ಜೀವನದಲ್ಲಿ ದೇವೇಗೌಡರು ಅಧಿಕಾರ ನೋಡಿದ್ದು ಕೇವಲ ಮೂರ್ನಾಲ್ಕು ವರ್ಷ. ಬಹುಶಃ ಅವರಿಗೆ ಕನಿಷ್ಠ ಐದು ವರ್ಷ ಅವಕಾಶ ಸಿಕ್ಕಿದ್ದರೆ ಸಾಕಷ್ಟು ಅಭಿವೃದ್ಧಿ ಆಗುತ್ತಿತ್ತು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯಾಗಿ ಇದ್ದಾರೆ ಎಂದು ಸರ್ಕಾರದವರು ಹೇಳುತ್ತಾರೆ. ಆದರೆ ಜನರು ಕೆಲಸ ಇಲ್ಲದೆ, ಒಂದೊತ್ತಿನ ಊಟಕ್ಕೂ ಇಲ್ಲದೆ ಕೆಲ ಕುಟುಂಬ ಬೀದಿಪಾಲಾಗುತ್ತಿವೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್, ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ, ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.

ಫೋಟೋ: ಹಾಸನದ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮದ ಶ್ರೀ ಕೆರೆಕೋಡಿಯಮ್ಮ, ಶ್ರೀ ಈಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್ ಡಿ. ಕುಮಾರಸ್ವಾಮಿ ಅವರಿಗೆ ಅರ್ಚಕರು ಪುಷ್ಪಮಾಲೆ ಹಾಕಿ ಆಶೀರ್ವದಿಸಿದರು.

click me!