'ಅಲ್ಪಸಂಖ್ಯಾತ ಮತಗಳಿಗಾಗಿ ಎಸ್‌ಡಿಪಿಐಗೆ ಬಿಜೆಪಿ ಆರ್ಥಿಕ ನೆರವು'

By Kannadaprabha News  |  First Published Oct 8, 2022, 4:42 AM IST

ಅಲ್ಪಸಂಖ್ಯಾತ ಮತಗಳು ಬಿಜೆಪಿ ಬಿಟ್ಟು ಚದುರದಂತೆ ನೋಡಿಕೊಳ್ಳಲು ಎಸ್‌ಡಿಪಿಐಗೆ ಬಿಜೆಪಿ ಆರ್ಥಿಕ ನೆರವು ನೀಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.


 ಮೈಸೂರು (ಅ.08) : ಅಲ್ಪಸಂಖ್ಯಾತ ಮತಗಳು ಬಿಜೆಪಿ ಬಿಟ್ಟು ಚದುರದಂತೆ ನೋಡಿಕೊಳ್ಳಲು ಎಸ್‌ಡಿಪಿಐಗೆ ಬಿಜೆಪಿ ಆರ್ಥಿಕ ನೆರವು ನೀಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಆರೋಪಿಸಿದರು.

ನಗರದ ಕಾಂಗ್ರೆಸ್‌ (Congress) ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ (SDPI) ಬಿಜೆಪಿ ಬೆನ್ನಿಗೆ ನಿಂತಿದೆ. ಆದ್ದರಿಂದಲೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಣಕಾಸಿನ ನೆರವು ನೀಡುತ್ತಿದೆ. ಒಂದು ವೇಳೆ ಇಲ್ಲ ಎಂದಾದರೆ ಪಿಎಫ್‌ಐ ನಿಷೇಧಿಸಿದಂತೆ ಎಸ್‌ಡಿಪಿಐಯನ್ನೂ ಕೂಡ ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದರು.

Latest Videos

undefined

ಧರ್ಮಸಿಂಗ್‌ ಅವರು ಮುಖ್ಯಮಂತ್ರಿ ಆಗಿದ್ದಾಗ ಪಿಎಫ್‌ಐಗೆ (PFI) ಅನುಮತಿ ನೀಡಿರಲಿಲ್ಲ. ಆದರೆ, ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರವು ಅನುಮತಿ ನೀಡಿತ್ತು. ಅಂದು ರಹಮತುಲ್ಲಾ ಅಸ್ರತ್‌ ಆಗಿದ್ದ ಆರ್‌. ಅಶೋಕ್‌ ಈಗ ಪಿಎಫ್‌ಐ ಭಾಗ್ಯ ಸಿದ್ದರಾಮಯ್ಯ ಅಂತ ಹೇಳಿತ್ತಿರುವುದು ನಾಚಿಕೆಗೇಡು ಎಂದು ಅವರು ಟೀಕಿಸಿದರು.

ಪಿಎಫ್‌ಐ ಪರವಾಗಿ ಸುಪ್ರೀಂಕೋರ್ಚ್‌ನಲ್ಲಿ ವಾದಿಸುತ್ತಿರುವ ವಕೀಲರು ಬಿಜೆಪಿಗೆ ಸೇರಿದವರು. ಕಾಂಗ್ರೆಸ್‌ ಪರವಾಗಿ ಮುಸ್ಲಿಮರು ನಿಲ್ಲಬಾರದು ಎಂದು ಎಸ್‌ಡಿಪಿಐ ಬೆಳೆಯಲು ಕಾರಣರಾಗಿದ್ದಾರೆ. ಈಗ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವಂತೆ ಮಾಡಿ, ಮುಂದೆ ಅವರನ್ನೇ ಕಾಂಗ್ರೆಸ್‌ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದಾಗಿ ಅವರು ಹೇಳಿದರು.

ಧಮ್‌ ಇದ್ದರೆ ಮೋದಿಯಿಂದ ಪಾದಯಾತ್ರೆ ಮಾಡಿಸಿ: ಭಾರತ್‌ ಜೋಡೋ ಯಾತ್ರೆಯನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಧಮ್‌ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಶ್ವಗುರು ಎನ್ನುವ ಪ್ರಧಾನಿ ನರೇಂದ್ರಮೋದಿ ಸೇರಿಕೊಂಡು ಪಾದಯಾತ್ರೆ ಮಾಡಲಿ. 630 ಕಿ.ಮೀ ಪಾದಯಾತ್ರೆ ನಡೆಸಿರುವುದನ್ನೇ ಸಹಿಸದ ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಗುಜರಾತ್‌ನಲ್ಲಿ ಲಕ್ಷಾಂತರ ಜನರು ಕಾದು ನಿಂತಿದ್ದರೂ ದರ್ಶನ ಕೊಡದೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದ ವಿಶ್ವಗುರು ಪ್ರಧಾನಿ ನರೇಂದ್ರಮೋದಿ ಅವರಿಂದಲೇ ಪಾದಯಾತ್ರೆ ಮಾಡಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧಮ… ಇದ್ದರೆ ಹತ್ತು ಕಿ.ಮೀ ಪಾದಯಾತ್ರೆ ಮಾಡಲಿ ನೋಡೋಣ ಎಂದು ಅವರು ಸವಾಲು ಹಾಕಿದರು.

ಪಾದಯಾತ್ರೆ ರಾಜಕೀಯ ಲಾಭಕ್ಕೆ, ಚುನಾವಣೆ ಗಿಮಿಕ್‌ ಎನ್ನುತ್ತಿದ್ದಾರೆ. ಆದರೆ ಕೇರಳ, ತಮಿಳುನಾಡಿನಲ್ಲಿ ಚುನಾವಣೆ ನಡೆಯುತ್ತಿಲ್ಲ. ಗುಜರಾತ್‌ನಲ್ಲಿ ಈಗ ಚುನಾವಣೆ ನಡೆಯುವ ವರ್ಷವಾದ್ದರಿಂದ ಅಲ್ಲಿ ಮಾತ್ರವೇ ಮಾಡಬಹುದಿತ್ತು ಎಂದರು.

ಪರೇಸ್‌ ಮೆಸ್ತಾ ಹತ್ಯ ಪ್ರಕರಣ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಸಚಿವ ಸುನಿಲ್‌ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣ ಮುಂದಿಟ್ಟುಕೊಂಡು ಕೋಮುದ್ವೇಷ ಹರಡಿದ್ದರು. ಚುನಾವಣೆ ಲಾಭ ಪಡೆದಿದ್ದಾಗಿ ಅವರು ತಿಳಿಸಿದರು.

ಪರೇಸ್‌ ಮೆಸ್ತಾ ಸಹಜ ಸಾವನ್ನು ಕೊಲೆಯೆಂದು ಬಿಂಬಿಸಿ . 150 ಕೋಟಿ ಆಸ್ತಿಪಾಸ್ತಿ ಹಾನಿಗೀಡಾಗಲು ಕಾರಣರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್‌ ಕಟೀಲ್‌, ಸುನಿಲ್‌ಕುಮಾರ್‌, ಅರವಿಂದ ಲಿಂಬಾವಳಿ, ಸಿ.ಟಿ. ರವಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆಯಾದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 37 ಮುಸ್ಲಿಂ ಕಾರ್ಯಕರ್ತರ ಹತ್ಯೆಯಾಗಿದೆ. ಒಂದೇ ಒಂದು ಪ್ರಕರಣದಲ್ಲೂ ಸತ್ಯಾಂಶ ಸಾಬೀತಾಗಿಲ್ಲ ಎಂದರು.

ಒಕ್ಕಲಿಗರು ನಿಮ್ಮ ಜೇಬಿನಲಿಲ್ಲ

ಭಾರತ್‌ ಜೋಡೋ ಯಾತ್ರೆಯಿಂದ ಪ್ರಯೋಜನವಿಲ್ಲ. ಮಂಡ್ಯ ಬದಲಾವಣೆ ಆಗಲಿದೆಯೇ ಎಂದಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮೈ ಮೇಲೆ ಚೇಳು ಬಿಟ್ಟುಕೊಂಡಂತೆ ಮಾತನಾಡಿದ್ದಾರೆ. ಅವರಂತೆ ಮಂಡ್ಯವನ್ನು ನಾವು ಬರೆಸಿಕೊಂಡಿಲ್ಲ. ಒಕ್ಕಲಿಗರು ನಿಮ್ಮ ಜೇಬಿನಲ್ಲಿ ಇದ್ದರೆ ನಿಮ್ಮ ಪುತ್ರ ಚುನಾವಣೆಯಲ್ಲಿ ಸೋಲುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ನಗರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್‌. ಮೂರ್ತಿ, ಪ್ರಧಾನ ಕಾರ್ಯದರ್ಶಿ ಈಶ್ವರ್‌ ಚಕ್ಕಡಿ ಇದ್ದರು.

ಯಶವಂತಪುರ ದಸರಾ ಆಚರಣೆ

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು, ಮೈಸೂರು ದಸರಾ ಬದಲಿಗೆ ಯಶವಂತಪುರ ದಸರಾ ಮಾಡಿದ್ದಾರೆ. 35 ಸಾವಿರ ಪಾಸ್‌ಗಳಲ್ಲಿ 15 ಸಾವಿರ ಪಾಸ್‌ಗಳನ್ನು ಯಶವಂತಪುರ ಕ್ಷೇತ್ರಕ್ಕೆ ಹಂಚಿದ್ದಾರೆ. ಇದಕ್ಕೆ ನಂಜನಗೂಡು ಶಾಸಕರು ಪಾಸ್‌ ವಾಪಸ್‌ ಕೊಟ್ಟಿರುವುದೇ ಸಾಕ್ಷಿ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಯಂತೆ ಮಾಡಿ ಮುಗಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ದೂರಿದರು. ಯುವ ದಸರಾಗೆ . 8 ಕೋಟಿ ಖರ್ಚು ಮಾಡಲಾಗಿದೆ. ನಗರದ ಐದಾರು ರಸ್ತಗೆ ಡಾಂಬರೀಕರಣ ಮಾಡಿದ್ದು ಬಿಟ್ಟರೆ ಬೇರೆ ಎಲ್ಲಿಯೂ ಡಾಂಬರು ಹಾಕಲಿಲ್ಲ ಎಂದು ಆರೋಪಿಸಿದರು.

click me!