ಬಿಜೆಪಿ ಮೌನ, ಕಾಂಗ್ರೆಸ್‌ ಚೆಲ್ಲಾಟ: ಅಧಿಕಾರದಲ್ಲಿದ್ದರೂ ಕಮಲ ನಾಯಕರ ನಡೆ ಮಾತ್ರ ನಿಗೂಢ..!

By Kannadaprabha NewsFirst Published Oct 18, 2020, 1:43 PM IST
Highlights

ಕೈಕೊಟ್ಟ ಸದಸ್ಯರ ವಿರುದ್ಧ ಯಾಕಿಲ್ಲ ಕ್ರಮ?| ಮತ್ತೆ ಜಿಪಂ ಅಧ್ಯಕ್ಷ ಪಟ್ಟರಾಜಶೇಖರ ಹಿಟ್ನಾಳಗೆ ಪಕ್ಕಾ| ಅಧ್ಯಕ್ಷರಾಗಿದ್ದ ವಿಶ್ವನಾಥ ರೆಡ್ಡಿ ಅವರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ ಕೆಳಗಿಸಲು ಕಾಂಗ್ರೆಸ್‌ ರೂಪಿಸಿದ ತಂತ್ರಕ್ಕೆ ಬಿಜೆಪಿ ಸದಸ್ಯರೇ ಕೈಜೋಡಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ| ಕಾಂಗ್ರೆಸ್‌ನಿಂದ ಆರಿಸಿಬಂದು ಜಿಪಂ ಅಧ್ಯಕ್ಷರಾಗಿದ್ದರೂ ವಿಶ್ವನಾಥ ರೆಡ್ಡಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದು ಗುಟ್ಟಾಗಿ ಉಳಿದಿರಲಿಲ್ಲ| 
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.18): ಇಲ್ಲಿಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಅವಿಶ್ವಾಸ ಮತ್ತು ಮರಳಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆ​ಪಿ ಇದ್ದು ಇಲ್ಲದಂತೆ ವರ್ತಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಎಲ್ಲದಕ್ಕೂ ಮೌನ ನಡೆಯನ್ನೇ ಅನುಸರಿಸುತ್ತಿರುವುದರಿಂದ ಕಾಂಗ್ರೆಸ್‌ ಭಾರಿ ಚೆಲ್ಲಾಟವನ್ನೇ ನಡೆಸಿದೆ.

ಅಧ್ಯಕ್ಷರಾಗಿದ್ದ ವಿಶ್ವನಾಥ ರೆಡ್ಡಿ ಅವರನ್ನು ಅವಿಶ್ವಾಸ ಗೊತ್ತುವಳಿ ಮಂಡಿಸಿ ಕೆಳಗಿಸಲು ಕಾಂಗ್ರೆಸ್‌ ರೂಪಿಸಿದ ತಂತ್ರಕ್ಕೆ ಬಿಜೆಪಿ ಸದಸ್ಯರೇ ಕೈಜೋಡಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಕಾಂಗ್ರೆಸ್‌ನಿಂದ ಆರಿಸಿಬಂದು ಜಿಪಂ ಅಧ್ಯಕ್ಷರಾಗಿದ್ದರೂ ವಿಶ್ವನಾಥ ರೆಡ್ಡಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದು ಗುಟ್ಟಾಗಿ ಉಳಿದಿರಲಿಲ್ಲ.

ಈಗ ಕಾಂಗ್ರೆಸ್‌ ಮರಳಿ ಅಧಿಕಾರದ ಗದ್ದುಗೆ ಏರಲು ಮುಂದಾಗಿದೆ. ಇದಕ್ಕೂ ಬಿಜೆಪಿ ಸದಸ್ಯರು ಸಾಥ್‌ ನೀಡಿರುವುದು ಅಚ್ಚರಿಯ ಸಂಗತಿ. ಕಾಂಗ್ರೆಸ್‌ ಸದಸ್ಯರೊಂದಿಗೆ ಬಿಜೆಪಿ ಸದಸ್ಯರು ಅಜ್ಞಾತ ಸ್ಥಳಕ್ಕೆ ಪ್ರವಾಸಕ್ಕೆ ಹೋಗಿರುವುದು ಇನ್ನು ಅಚ್ಚರಿ. ಇಷ್ಟಾದರೂ ಬಿಜೆಪಿ ನಾಯಕರು ಮಾತ್ರ ತುಟಿ ಪಿಟಕ್‌ ಅನ್ನುತ್ತಿಲ್ಲ ಎನ್ನುವುದೇ ಅಚ್ಚರಿ.

ಬಹುಮತ ಇಲ್ಲದಿದ್ದರೂ ತಮ್ಮ ಸದಸ್ಯರು ತಮ್ಮ ಜತೆಗೆ ಇದ್ದಾರೆ ಎನ್ನುವ ಮೂಲಕ ರಾಷ್ಟ್ರೀಯ ಪಕ್ಷದ ಘನತೆಯನ್ನಾದರೂ ಉಳಿಸಿಕೊಳ್ಳಬೇಕಿತ್ತು. ಇಲ್ಲವೇ ಕೈಕೊಟ್ಟು ಕಾಂಗ್ರೆಸ್‌ ತೆಕ್ಕೆಯಲ್ಲಿರುವ ಬಿಜೆಪಿ ಸದಸ್ಯರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ರೀತಿ ಕ್ರಮಕೈಗೊಳ್ಳಬಹುದಾಗಿತ್ತು. ಆದರೆ, ಬಿಜೆಪಿ ಜಿಲ್ಲಾಧ್ಯಕ್ಷರು ಮಾತ್ರ ಇದ್ಯಾವುದನ್ನು ಮಾಡುತ್ತಲೇ ಇಲ್ಲ ಎನ್ನುವುದು ನಾನಾ ಚರ್ಚೆಗಳನ್ನು ಹುಟ್ಟು ಹಾಕಿದೆ.

ಗಂಗಾವತಿ: ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ, ಒಂದೇ ವಾರದಲ್ಲಿ ಮೂರನೇ ಬಾರಿ ಪ್ರತ್ಯಕ್ಷ

ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಸದಸ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾರದಷ್ಟುಅಸಹಾಯಕ ಸ್ಥಿತಿಗೆ ಬಿಜೆಪಿ ಜಿಲ್ಲೆಯಲ್ಲಿ ಬಂದಿದೆಯಾ? ಎನ್ನುವುದಕ್ಕೆ ಅದೇ ಪಕ್ಷದ ನಾಯಕರು ಉತ್ತರ ನೀಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಇರುವ ವೇಳೆಯಲ್ಲಿಯೂ ಕಾಂಗ್ರೆಸ್‌ ತೊಡೆತಟ್ಟಿನಿಂತರೂ ಕನಿಷ್ಠ ಬಿಜೆ​ಪಿ ಪ್ರತಿರೋಧವನ್ನು ಇದುವರೆಗೂ ತೋರಿಲ್ಲ ಮತ್ತು ತೋರುವ ಲಕ್ಷಣಗಳು ಕಾಣುತ್ತಿಲ್ಲ. 

ಮತ್ತೆ ರಾಜಶೇಖರ ಹಿಟ್ನಾಳ ಅಧ್ಯಕ್ಷ

ರಾಜಶೇಖರ ಹಿಟ್ನಾಳ ಮತ್ತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗುವುದು ಪಕ್ಕಾ ಆಗಿದೆ. ಅವಿಶ್ವಾಸಕ್ಕೆ ಕಾಂಗ್ರೆಸ್‌ ಮುಂದಾದ ವೇಳೆಯಲ್ಲಿಯೇ ಈ ನಿರ್ಧಾರ ಮಾಡಲಾಗಿದೆ. ಇಡೀ ಕಾರ್ಯಾಚರಣೆಯ ಉಸ್ತುವಾರಿಯನ್ನು ಮೇಲ್ನೋಟಕ್ಕೆ ಪಕ್ಷ ವಹಿಸಿಕೊಂಡಿದ್ದರೂ ಇದರ ಹಿಂದೆ ನಿಂತಿರುವುದು ರಾಜಶೇಖರ ಹಿಟ್ನಾಳ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಅವರು.

ಕ್ಷೇತ್ರದಲ್ಲಿನ ಪ್ರತಿಷ್ಠೆಗಾಗಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಸಹ ಹಠಕ್ಕೆ ಬಿದ್ದವರಂತೆ ಕೆಲಸ ಮಾಡಿದ್ದಾರೆ. ತನ್ನ ಕಟ್ಟಾಬೆಂಬಲಿಗನಾಗಿದ್ದ ವಿಶ್ವನಾಥ ರೆಡ್ಡಿ ಪಕ್ಷದ ಒಪ್ಪದಂತೆ ಮಾತಿಗೆ ಬೆಲೆ ನೀಡದೆ ಇರುವುದರಿಂದ ತಕ್ಕ ಪಾಠ ಕಲಿಸಲು ಅವಿರತ ಶ್ರಮಿಸಿದ್ದಾರೆ.

ಬಲಾಬಲ

ಕೊಪ್ಪಳ ಜಿಲ್ಲಾ ಪಂಚಾಯಿತಿಯಲ್ಲಿ 29 ಸದಸ್ಯ ಬಲ ಇದೆ. ಇದರಲ್ಲಿ ಕಾಂಗ್ರೆಸ್‌ 17, ಬಿಜೆಪಿ 11 ಹಾಗೂ ಓರ್ವ ಪಕ್ಷೇತರ (ಬಿಜೆಪಿ ಬೆಂಬಲಿತ) ಸದಸ್ಯರು ಇದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ ತನ್ನ 16 ಸದಸ್ಯರು, 8 ಬಿಜೆಪಿ ಸದಸ್ಯರ ಬೆಂಬಲದೊಂದಿಗೆ 24 ಸದಸ್ಯ ಬಲವನ್ನು ಅಧ್ಯಕ್ಷರ ಚುನಾವಣೆಯಲ್ಲಿ ತೋರಿಸಲು ತಯಾರಿ ಮಾಡಿಕೊಂಡಿದೆ. ಈಗ ಪ್ರವಾಸದಲ್ಲಿ ಇರುವ ಸದಸ್ಯರ ಸಂಖ್ಯೆ 23 ಇದ್ದು, ಓರ್ವ ಸದಸ್ಯರು ಶಾಸಕ ಅಮರೇಗೌಡ ಭಯ್ಯಾಪುರ ಅವರ ಸುಪರ್ದಿಯಲ್ಲಿ ಇದ್ದಾರೆ. ಹೀಗಾಗಿ, ಈಗ ಬಿಜೆಪಿಗೆ ಓರ್ವ ಕಾಂಗ್ರೆಸ್‌ ಸದಸ್ಯ ಹಾಗೂ ನಾಲ್ವರು ಬಿಜೆಪಿ ಸದಸ್ಯರು ಸೇರಿದಂತೆ ಕೇವಲ 5 ಸದಸ್ಯರ ಬಲ ಹೊಂದಿದೆ.

ನಾಳೆ ಚುನಾ​ವ​ಣೆ

ಅ. 19ರಂದು ಜಿಪಂ ಅಧ್ಯಕ್ಷ ಸ್ಥಾನಕ್ಕ ಚುನಾವಣೆ ನಿಗದಿಯಾಗಿದ್ದು, ಮಧ್ಯಾಹ್ನ 1.30ರ ವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ. ಇದಾದ ಮೇಲೆ ಮಧ್ಯಾಹ್ನ 3.30ಕ್ಕೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ನಮ್ಮ ಪಕ್ಷದಲ್ಲಿ ಈಗಾಗಲೇ ಯಾರನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನಿಸಿದ್ದು, ಇನ್ನೇನು ಘೋಷಣೆಯೊಂದೆ ಬಾಕಿ ಇದೆ. ನಮ್ಮ ಬಲ ಮೀರಿ ಗೆಲುವು ಸಾಧಿಸಲಿದ್ದೇವೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ.

ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ತೀರ್ಮಾನ ಮಾಡಿದ್ದು, ಹಾಕಿಯೇ ಹಾಕುತ್ತೇವೆ. ಇನ್ನು ಉಳಿದ ಸದಸ್ಯರಿಗೆ ವಿಪ್‌ ಜಾರಿ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಅವರು ಹೇಳಿದ್ದಾರೆ. 
 

click me!