
ಹಾಸನ : ಹಾಸನದಲ್ಲಿ ಕಳೆದ ತಿಂಗಳು ನಡೆದ ರೈತ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರಕಿದೆ. ಗಂಡನನ್ನು ಕೊಂದು ರೈತ ಆತ್ಮಹತ್ಯೆ ಎಂದು ಬಿಂಬಿಸಲು ಪತ್ನಿಯೇ ಯತ್ನಿಸಿದ್ದಳು ಎನ್ನುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಕಳೆದ ಜೂನ್ 8 ರಂದು ಯೋಗೇಶ್ ಎನ್ನುವ ವ್ಯಕ್ತಿ ಬೇಲೂರು ತಾಲೂಕು ಮತ್ತಾವರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ರೈತನ ಮರಣೊತ್ತರ ಪರೀಕ್ಷೆ ವರದಿ ಬಂದಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ.
ಈ ಸಂಬಂಧ ಯೋಗೇಶ್ ಪತ್ನಿ ಗಾಯತ್ರಿ ಹಾಗೂ ಪುತ್ರ ದರ್ಶನ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಇಬ್ಬರೂ ಕೂಡ ತಪ್ಪೊಪ್ಪಿಕೊಂಡಿದ್ದಾರೆ.
ಯೋಗೇಶ್ ಮಲಗಿದ್ದಾಗ ಕತ್ತು ಹಿಸುಕಿ ಸಾಯಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾಟಕವಾಡಿದ್ದಾಗಿ ತಾಯಿ ಮಗ ಹೇಳಿದ್ದಾರೆ. ಸಾಲಬಾಧೆಯಿಂದ ಆತ್ಮಹತ್ಯೆ ಎಂದು ಬಿಂಬಿಸಿ ಪರಿಹಾರ ಪಡೆಯಲು ಯತ್ನಿಸಿದ್ದರು ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.