
ಬೆಂಗಳೂರು: ಕೆಲವು ಕಡೆಗಳಲ್ಲಿ ಗೃಹಜ್ಯೋತಿ ಫಲಾನುಭವಿಗಳಿಗೆ ಬೆಸ್ಕಾಂ ಬಿಗ್ಶಾಕ್ ಕೊಟ್ಟಿದೆ. ಎರಡು ತಿಂಗಳ ಬಿಲ್ ಒಟ್ಟಿಗೇ ನೀಡುವ ಮೂಲಕ, 4-5 ಸಾವಿರ ರೂಪಾಯಿಗಳ ಬಿಲ್ ಹಾಕಿ ನೀಡಿದೆ. ಅಬ್ಬಬ್ಬಾ ಎಂದರೆ 100 ರಿಂದ 200 ರೂಪಾಯಿ ಕಟ್ಟುತ್ತಿದ್ದ ಕೆಲವು ಗ್ರಾಹಕರಿಗೆ ಭಾರಿ ಮೊತ್ತದ ಬಿಲ್ ಬಂದಿದ್ದು, ಇದನ್ನು ಸರಿಪಡಿಸುವುದಕ್ಕಾಗಿ ಬೆಸ್ಕಾಂ ಕಚೇರಿ ಅಲೆದೂ ಅಲೆದೂ ಸುಸ್ತಾಗುವಂತಾಗಿದೆ. ಅಷ್ಟಕ್ಕೂ ಎರಡು ತಿಂಗಳ ಬಿಲ್ ಒಟ್ಟೊಟ್ಟಿಗೇ ಬರಲು ಕಾರಣ, ಕಳೆದ ತಿಂಗಳು ಅರ್ಥಾತ್ ಜುಲೈ ತಿಂಗಳಿನಲ್ಲಿ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮನೆಗಳಿಗೆ ಮಾಹಿತಿ ಪರಿಶೀಲನೆಗೆ ಮೀಟರ್ ರೀಡರ್‌ಗಳು ನಿಯೋಜನೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೀಟರ್ ರೀಡಿಂಗ್ಗೆ ಬಂದಿರಲಿಲ್ಲ.
ಜುಲೈ ತಿಂಗಳಲ್ಲಿ ಗೃಹ ಬಳಕೆ ಗ್ರಾಹಕರಿಗೆ ಸರಾಸರಿ ಬಿಲ್ ನೀಡಲಾಗಿತ್ತು. ಅದನ್ನು ಪಾವತಿ ಮಾಡಿದ ಗ್ರಾಹಕರೂ ಶಾಕ್ ಆಗುವಂತೆ ಈಗ ಜುಲೈ ಮತ್ತು ಆಗಸ್ಟ್ ತಿಂಗಳ ರೀಡಿಂಗ್ ಮಾಡಿ ಒಂದೇ ಬಿಲ್ನಲ್ಲಿ ಒಟ್ಟಿಗೇ ಎರಡು ತಿಂಗಳ ಯೂನಿಟ್ ನೀಡಲಾಗಿದೆ. ರಾಜ್ಯ ಸರ್ಕಾರದಿಂದ 200 ಯೂನಿಟ್ವರೆಗೆ ಉಚಿತವಿದೆ. 201 ಯೂನಿಟ್ ವಿದ್ಯುತ್ ಬಳಕೆಯಾದರೂ ಗ್ರಾಹಕರು ಸಂಪೂರ್ಣ ಮೊತ್ತವನ್ನು ಪಾವತಿಸಬೇಕು ಎನ್ನುವುದು ನಿಯಮ. ಇದೀಗ ಕೆಲವು ಕಡೆಗಳಲ್ಲಿ ಮೀಟರ್ ರೀಡಿಂಗ್ಗೆ ಬಂದವರು ಎರಡೂ ತಿಂಗಳ ಯೂನಿಟ್ಗಳನ್ನು ಬೇರ್ಪಡಿಸದೇ ಒಂದೇ ತಿಂಗಳಿನಲ್ಲಿ ಹಾಕಿಕೊಟ್ಟಿದ್ದಾರೆ. ಇದರಿಂದ ಯೂನಿಟ್ 200 ಮೀರಿ 300- 400 ಅನ್ನೂ ದಾಟಿ ಹೋಗಿದೆ!
ಕೆಲವು ಮನೆಗಳಲ್ಲಿ ಮೀಟರ್ ರೀಡಿಂಗ್ಗೆ ಬಂದ ದಿನ ಬೀಗ ಹಾಕಿದ್ದ ಕಾರಣದಿಂದಲೋ ಅಥವಾ ಇನ್ನಾವುದೋ ಕಾರಣದಿಂದ ನಿಗದಿತ ದಿನಾಂಕದಂದು ಮೀಟರ್ ರೀಡಿಂಗ್ಮಾಡಲಿಲ್ಲ. ಆದರೆ 2-3 ವಾರ ಬಿಟ್ಟು ಮೀಟರ್ ರೀಡಿಂಗ್ ಮಾಡಿ ಎರಡು ತಿಂಗಳ ಬಿಲ್ ಜೊತೆಗೆ ಈ 2-3 ವಾರಗಳ ಅರ್ಥಾತ್ ಸುಮಾರು ಎರಡೂವರೆ ತಿಂಗಳ ಯೂನಿಟ್ ಒಟ್ಟಿಗೇ ಹಾಕಿ ನೀಡಲಾಗಿದೆ. ಇದರಿಂದ ನಾಲ್ಕೈದು ಸಾವಿರ ಬಿಲ್ ಬಂದಿದೆ. ಇದರಿಂದ ಗ್ರಾಹಕರು ಹೈರಾಣಾಗಿ ಹೋಗಿದ್ದಾರೆ. ಕಚೇರಿಗೆ ಹೋಗುವುದನ್ನು ಬಿಟ್ಟು ಬೆಸ್ಕಾಂ ಅಲೆಯುವಂತಾಗಿದೆ. ಮಾಡದ ತಪ್ಪಿಗೆ ಗ್ರಾಹಕರು ವಾರಗಟ್ಟಲೆ ಕಚೇರಿ ಅಲೆದು ಸುಸ್ತಾಗಿ ಹೋಗಿದ್ದಾರೆ. ಆದರೆ ಕೆಲವರ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ. ಇಲ್ಲಿ ಹೋಗಬೇಕು, ಅಲ್ಲಿ ಹೋಗಬೇಕು, ಇವರನ್ನು ಭೇಟಿಯಾಗಬೇಕು, ಅವರನ್ನು ಭೇಟಿಯಾಗಬೇಕು ಎಂದೆಲ್ಲಾ ಹೇಳುತ್ತಿರುವ ಕಾರಣದಿಂದ ಆ ಕಚೇರಿ, ಈ ಕಚೇರಿ ಎಂದು ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.
ಶಿವಾಜಿನಗರ ಕ್ಷೇತ್ರದ ಮಖಾನ್ ಕಾಂಪೌಂಡ್ ಏರಿಯಾದಲ್ಲಿ ಹಲವು ಮನೆಗಳಿಗೆ ಈ ರೀತಿಯ ದುಬಾರಿ ವಿದ್ಯುತ್ ಬಿಲ್ ಬಂದಿದೆ. ಝೀರೋ ಬಿಲ್ ಬರುತ್ತಿದ್ದ ಮನೆಗಳಿಗೆ ಏಕಾಏಕಿ ಸಾವಿರಾರು ರೂಪಾಯಿ ಬಿಲ್ ನೀಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಇದನ್ನು ಹೊರತುಪಡಿಸಿ ಮೇಲೆ ತಿಳಿಸಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಸಮಸ್ಯೆ ಉದ್ಭವವಾಗಿದ್ದು, ಪ್ರತಿ ತಿಂಗಳು ಚಾಚೂತಪ್ಪದೇ ಬಿಲ್ ಪಾವತಿ ಮಾಡುತ್ತಿರುವ ಗ್ರಾಹಕರು ಹೈರಾಣಾಗುವಂತೆ ಆಗಿದೆ.