ರೆಡ್ಡಿ- ಶ್ರೀರಾಮುಲು ಬಣವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದೂ ಸಿಂಗ್‌ಗೆ ದೊಡ್ಡ ಸವಾಲು| ಆನಂದ ಸಿಂಗ್ ಆಸೆಪಟ್ಟಂತೆಯೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಲಭಿಸಿದೆ| ಕೊರೋನಾ ವೈರಸ್ ಸಂಕಷ್ಟ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಏ.12): ಭಾರೀ ವಿರೋಧದ ನಡುವೆ ಗಣಿನಾಡು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೊನೆಗೂ ಹೊಸಪೇಟೆ ಶಾಸಕ ಅರಣ್ಯ ಸಚಿವ ಆನಂದ ಸಿಂಗ್‌ಗೆ ದಕ್ಕಿದ್ದು, ರೆಡ್ಡಿ ಮತ್ತು ಶ್ರೀರಾಮುಲು ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೋನಾ ಸಂಕಷ್ಟ ಎದುರಿಸುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.
undefined
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಮೊಳಕಾಲ್ಮೂರು ಶಾಸಕ, ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಿಗಲಿದೆ ಎಂಬ ಮಾತು ಮುನ್ನಲೆಗೆ ಬಂದಿತ್ತು. ನಂತರದ ಬೆಳವಣಿಗೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ವಹಿಸಲಾಯಿತು. ಸವದಿ ಅವರು ಉಸ್ತುವಾರಿ ತೆಗೆದುಕೊಂಡ ಬಳಿಕ ನಾಮಕಾವಸ್ತೆಯಾಗಿ ಮೂರ್ನಾಲ್ಕು ಸಭೆ ಮಾಡಿದ್ದು ಬಿಟ್ಟರೆ ಜಿಲ್ಲೆಯ ಕಡೆ ಗಮನ ಹರಿಸಲೇ ಇಲ್ಲ. ಹೀಗಾಗಿ, ಬಳ್ಳಾರಿ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬೇಕು ಎಂಬ ಕೂಗುಗಳು ಬಲವಾಗಿ ಕೇಳಿ ಬಂದಿದ್ದವು. ಆನಂದ ಸಿಂಗ್ ಆಸೆಪಟ್ಟಂತೆಯೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಲಭಿಸಿದೆ.
ನನಸಾಗದ ಕನಸು: ಶ್ರೀರಾಮುಲು ಬ್ಯಾಡ್‌ಲಕ್, ಆನಂದ ಸಿಂಗ್‌ಗೆ ಗುಡ್ ಲಕ್..!
ತಮ್ಮ ರಾಜಕೀಯ ಅಸ್ತಿತ್ವ ಮತ್ತು ಜಿಲ್ಲಾ ವಿಭಜನೆ ವಿಷಯವಾಗಿ ರೆಡ್ಡಿ-ಶ್ರೀರಾಮುಲು ಗುಂಪು ಆನಂದ ಸಿಂಗ್ ಅವರನ್ನು ಶತಾಯಗತಾಯ ವಿರೋಧಿಸುತ್ತಲೇ ಬಂದಿದೆ. ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಆ ಎಲ್ಲ ವಿರೋಧದ ಮಧ್ಯೆಯೂ ಜಿಲ್ಲಾ ಉಸ್ತುವಾರಿ ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅವರು ಅಂದುಕೊಂಡಷ್ಟು ಸರಳವಿಲ್ಲ ಬಳ್ಳಾರಿ ಆಡಳಿತ. ಇದು ಸದ್ಯದ ಕೊರೋನಾ ವೈರಸ್ ಸಂಕಷ್ಟ ನಿರ್ವಹಣೆಯ ಮೇಲೆ ದುಷ್ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳಿವೆ.
ಕೊರೋನಾ ಮೊದಲು ಸವಾಲು:
ಸಚಿವ ಆನಂದ ಸಿಂಗ್‌ಗೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ತಡೆಯುವುದು ಇದೀಗ ಎದುರಿಗಿರುವ ದೊಡ್ಡ ಸವಾಲು. ಜಿಲ್ಲಾಡಳಿತದ ಜೊತೆ ಸಮನ್ವಯತೆಯಿಂದ ಹೇಗೆ ಕೆಲಸ ಮಾಡಿಕೊಂಡು ಹೋಗುತ್ತಾರೆ ಎಂಬುದೇ ಬಹಳ ಮಹತ್ವದ್ದು. ಈಚೆಗೆ ಹೊಸಪೇಟೆಯಲ್ಲಿ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಖನಿಜ ನಿಧಿ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜೊತೆ ಮುನಿಸಿಕೊಂಡಿರುವ ಆನಂದ ಸಿಂಗ್ ಇಡೀ ಜಿಲ್ಲಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೇಗೆ ಕಾರ್ಯ ನಿರ್ವಹಿಸುತ್ತಾರೆ? ಜಿಲ್ಲಾ ಉಸ್ತುವಾರಿ ಸಚಿವರಾದರೂ ಆನಂದಸಿಂಗ್ ಹೊಸಪೇಟೆಗೆ ಕೇಂದ್ರೀಕೃತರಾಗುತ್ತಾರೇಯೇ ಎಂಬ ಮಾತುಗಳು ಈಗಾಗಲೇ ಕೇಳಿ ಬರುತ್ತಿದ್ದು, ಕೊರೋನಾ ವೈರಸ್ ನಿಯಂತ್ರಣ ಸೇರಿದಂತೆ ಜಿಲ್ಲೆಯ ಪ್ರಗತಿಗೆ ಹೇಗೆ ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಕೆಲವು ತಿಂಗಳ ಕಾಯಬೇಕಾಗಿದೆ.