Big 3 Dharwad School story: ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ಇಲ್ಲದ ಕಾರಣಕ್ಕೆ ಗ್ರಾಮದಲ್ಲಿ ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸೋಕೆ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಧಾರವಾಡ (ಸೆ. 23): ಕನ್ನಡ ಶಾಲೆಗಳ ಅಭಿವೃದ್ದಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತೆ. ಆದರೆ ಈ ಜಿಲ್ಲೆಯಲ್ಲಿನ ಶಾಲೆಯೊಂದರ (School) ಪರಿಸ್ಥಿತಿ ನೋಡ್ತಿದ್ರೆ ನಿಜಕ್ಕೂ ನಾಚಿಕೆ ಆಗುತ್ತೆ. ಅಲ್ಲಿನ ಅಧಿಕಾರಿ, ಜನಪ್ರತಿನಿಧಿಗಳು ಬದುಕಿದ್ದಾರಾ ಇಲ್ಲ ಸತ್ತಿದ್ದಾರಾ ಅನ್ನೋ ಅನುಮಾನ ಶುರುವಾಗುತ್ತೆ. ಧಾರವಾಡ (Dharwad) ಜಿಲ್ಲೆ ನವಲಗುಂದ ತಾಲೂಕಿನ ಬ್ಯಾಲಾಳ ಗ್ರಾಮ ರಾಷ್ಟ್ರೀಯ ಪ್ರಶಸ್ತಿಗಳನ್ನ ತನ್ನ ಮಡಿಲಿಗೆ ಏರಿಸಿಕೊಂಡ ಗುಮ್ಮಗೋಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತೆ. ಈ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಆದರೆ ಈ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ (Toilet) ಇಲ್ಲದ ಕಾರಣಕ್ಕೆ ಗ್ರಾಮದಲ್ಲಿ ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸೋಕೆ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಕಳೆದ ಮೂರು ನಾಲ್ಕು ವರ್ಷದಿಂದ ಶಾಲೆಯಲ್ಲಿ ಶೌಚಾಲಯ ಇಲ್ಲದ ಕಾರಣ ಮಕ್ಕಳು ಶೌಚಕ್ಕೆ ಬಯಲು ಕಡೇ ಹೋಗುತ್ತಿದ್ದರು. ಇದನ್ನ ಅರಿತ ಗ್ರಾಮದ ಕೆಲವರು ತಮ್ಮ ಸ್ವಂತ ಖರ್ಚಿನಿಂದ ಒಂದು ಶೆಡ್ ಮಾಡಿ ಅದಕ್ಕೆ ತಾಡಪಲ್ ಹಾಕಿದ್ದಾರೆ. ಇದೀಗ ಆ ತಾಡಪಲ್ ಕೂಡಾ ಹಾಳಾಗಿದ್ದು, ಮಕ್ಕಳು ಶೌಚಕ್ಕೆ ಹೋಗಬೇಕು ಅಂದ್ರೆ ಅದ್ರಲ್ಲೂ ಹೆಣ್ಣು ಮಕ್ಕಳು ಶಿಕ್ಷಕರೂ ಶೌಚಾಲಯಕ್ಕೆ ಹೋಗಲು ಪರದಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿ ಜನಪ್ರತಿನಿಧಿಗಳಿಗೆ ಅದೆಷ್ಟೇ ಬಾರಿ ಮನವಿ ಮಾಡಿದ್ರೂ ಯಾರು ಕೂಡ ಕ್ಯಾರೆ ಅಂತಿಲ್ಲ ಅಂತಾರೆ ಸ್ಥಳಿಯರು.
undefined
ಶಾಲೆಗೆ ಶೌಚಾಲಯ ನಿರ್ಮಿಸಿ ಕೊಡಿ ಎಂದು ಗ್ರಾಮ ಪಂಚಾಯತಿ ಪಿಡಿಓ, ತಾಲೂಕು ಪಂಚಾಯತಿ, ಬಿಇಓ, ಡಿಡಿಪಿಐ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೂ ಮನವಿ ಕೊಟ್ಟು ಬೇಸತ್ತಿದ್ದಾರೆ. ಕಾಟಚಾರಕ್ಕೆ ಅಂತಾ ಕೇವಲ ಕಾಲಂ ಹಾಕಿ ಅರ್ಧಂಬರ್ಧ ಕೆಲಸ ಮಾಡಿ ಗುತ್ತಿಗೆದಾರ ಕೈ ಕೊಟ್ಟಿದ್ದಾರೆ. ಹೀಗಾಗಿ ಅಧಿಕಾರಿ, ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಶಾಪ ಹಾಕುತ್ತಿದ್ದಾರೆ. ನಮ್ಮ ಮಕ್ಕಳು ಕಲಿಯಬೇಕು ಅಂದ್ರೆ ಮೂಲಭೂತ ಸೌಕರ್ಯ ಬೇಕು. ಅದರಲ್ಲೂ ಶೌಚಾಲಯ ಇಲ್ಲದಿದ್ರೆ ನಮ್ಮ ಮಕ್ಕಳನ್ನ ಶಾಲೆಗೆ ಕಳಿಸೊಲ್ಲ ಅಂತಿದ್ದಾರಂತೆ.
ಒಟ್ಟಿನಲ್ಲಿ ಸರ್ಕಾರ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯಗಳನ್ನ ನೀಡದೇ ಇರೋದು ನಿಜಕ್ಕೂ ನಾಚಿಕೆ ಗೇಡಿನ ಸಂಗತಿ. ಸುವರ್ಣನ್ಯೂಸ್ ಬಿಗ್-3 ಈ ಸ್ಟೋರಿಯನ್ನ ನಿಮ್ಮ ಮುಂದಿಟ್ಟಿದೆ. ಕಾದು ನೋಡೋಣ ಸಂಬಂಧಿಸಿದ ಅಧಿಕಾರಿ ಜನಪ್ರತಿನಿಧಿಗಳು ಇನ್ಮುಂದಾದ್ರೂ ಎಚ್ಚೆತ್ತುಕೊಳ್ತಾರ ಅನ್ನೋದನ್ನ.