Big 3 Davanagere Story: ಹೊಸ ಚಿಕ್ಕನಹಳ್ಳಿ ಬಡಾವಣೆಯಲ್ಲಿ 1 ಎಕರೆ 20 ಗುಂಟೆ ಜಾಗದಲ್ಲಿ 76 ಕುಟುಂಬಗಳು ವಾಸ ಮಾಡುತ್ತಿವೆ. ಆದ್ರೆ ಕನಿಷ್ಠ ಮೂಲಸೌಕರ್ಯಗಳು ಈ ಕುಟುಂಬಗಳಿಗೆ ಸಿಕ್ಕಿಲ್ಲ
ದಾವಣಗೆರೆ (ಅ. 12): ದಾವಣಗೆರೆ (Davanagere) ನಗರ ಸ್ಮಾರ್ಟ್ ಸಿಟಿ ಅಂತ ಘೋಷಣೆಯಾಗಿ ಎಂಟು ವರ್ಷ ಕಳೆಯಿತು. ಅದಕ್ಕಾಗಿ ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿ ಸಿಟಿ ಒಂದು ಕಡೆಯಿಂದ ಸ್ಮಾರ್ಟ್ ಆಗಿದೆ. ಆದ್ರೆ, ಕೆಲ ವಾರ್ಡ್ ನಿವಾಸಿಗಳ ಪಾಲಿಗಗಂತು ಇದು ನರಕವೇ ಆಗಿದೆ. ವಿದ್ಯಾನಗರಿ, ವಾಣಿಜ್ಯ ನಗರಿ, ಬೆಣ್ಣೆ ನಗರಿ, ಮಧ್ಯ ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರೋ ನಗರಿ ಎಂದು ಕರೆ ಸಿಕೊಳ್ಳುತ್ತಿದೆ ದಾವಣಗೆರೆ. ಅದ್ರಲ್ಲೂ ಈ ಜಿಲ್ಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಅದೇ ಕಾರಣಕ್ಕೆ ಮೋದಿ ಸರ್ಕಾರ ಸ್ಮಾರ್ಟ್ ಸಿಟಿ ಎಂದು ಘೋಷಣೆ ಮಾಡಿ ಸಾವಿರ ಕೋಟಿ ಅನುದಾನವನ್ನು ನೀಡಿದೆ.
ಸ್ಮಾರ್ಟ್ ಸಿಟಿ ಅನುದಾನದಲ್ಲಿ (Smart City Fund) 750 ಕೋಟಿ ಹಣವು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಖರ್ಚಾಗಿದೆ. ದಾವಣಗೆರೆ ಮಹಾನಗರಪಾಲಿಕೆಯಲ್ಲಿ 41 ವಾರ್ಡ್‌ಗಳಲ್ಲಿ ಅದರಲ್ಲಿ 30ನೇ ವಾರ್ಡ್ ಹೊಸ ಚಿಕ್ಕನಹಳ್ಳಿ ನಿವಾಸಿಗಳ ಬದುಕ ನರಕ ರೀತಿ ಆಗಿ ಹೋಗಿದೆ.
ಕನಿಷ್ಠ ಮೂಲಸೌಕರ್ಯಗಳ ಕೊರತೆ: ಹೊಸ ಚಿಕ್ಕನಹಳ್ಳಿ ಬಡಾವಣೆಯಲ್ಲಿ 1 ಎಕರೆ 20 ಗುಂಟೆ ಜಾಗದಲ್ಲಿ 76 ಕುಟುಂಬಗಳು ವಾಸ ಮಾಡುತ್ತಿವೆ. ಕಳೆದ 20 ವರ್ಷಗಳ ಹಿಂದೆ ಅವರಿಗೆ ಹಕ್ಕು ಪತ್ರ ನೀಡಿ ಮನೆ ಕಟ್ಟಿಕೊಂಡು ವಾಸ ಮಾಡಲು ದಾವಣಗೆರೆ ಮಹಾನಗರ ಪಾಲಿಕೆ ಅಧಿಕೃತ ಮಾನ್ಯತೆ ನೀಡಿದೆ. ಅದರಂತೆ ಅವರು ಆಧಾರ್ ಕಾರ್ಡ್, ವೋಟರ್ ಐಡಿ ರೇಷನ್ ಕಾರ್ಡ್ ಸೇರಿದಂತೆ ಎಲ್ಲಾ ಪತ್ರಗಳು ಅವರಿಗೆ ಸಿಕ್ಕಿದೆ. ಆದ್ರೆ ಕನಿಷ್ಠ ಮೂಲಸೌಕರ್ಯಗಳು ಈ ಕುಟುಂಬಗಳಿಗೆ ಸಿಕ್ಕಿಲ್ಲ.
ಶೌಚಾಲಯವೂ ಇಲ್ಲ: ಮೊದಲನೆಯದಾಗಿ 76 ಕುಟುಂಬಗಳು ವಾಸ ಮಾಡುವ ಪ್ರದೇಶದಲ್ಲಿ ಒಂದು ಮನೆಗೂ ಒಂದು ಶೌಚಾಲಯ ಇಲ್ಲ. ಹೋಗಲಿ ಸಾಮೂಹಿಕ ಶೌಚಾಲಾಯವಾದ್ರು ಇದೇ ಅಂದ್ರೆ ಅದು ಇಲ್ಲ. ಹಾಗಾದ್ರೆ ಇವರ ದಿನನಿತ್ಯದ ಕರ್ಮ ಮುಗಿಸುವುದು ಎಲ್ಲಿ ಅಂತಾ ಅಲ್ಲಿನ ಮಹಿಳೆಯರನ್ನು ಕೇಳಿದ್ರೆ ಎಂತಹ ವ್ಯವಸ್ಥೆಯಲ್ಲಿ ಇದ್ದೇವೆ ಎನಿಸುತ್ತದೆ. ಸರ್ ನಮಗೆ ಬಳ್ಳಾರಿ ಜೈಲು ಆದ್ರೆ ಅಲ್ಲಿ ಕನಿಷ್ಠ ಶೌಚಾಲವಾದ್ರು ಇರುತ್ತೇ, ಇಲ್ಲಿ ಏನು ಇಲ್ಲ. ಅಕ್ಕಪಕ್ಕದ ಜಮೀನಿನವರು ನಮಗೆ ಶೌಚಾಲಯ ಮಾಡುವುದಕ್ಕೆ ಬಿಡುವುದಿಲ್ಲ. ನಾವು ರಾತ್ರಿ ವೇಳೆ ಕದ್ದುಮುಚ್ಚಿ ಶೌಚಾಲಯಕ್ಕೆ ಹೋಗಬೇಕು ಅಂತಾರೆ.
BIG 3 Impact: 1 ವರ್ಷದಿಂದ ತುಕ್ಕು ಹಿಡಿದಿದ್ದ ತುಮಕೂರಿನ ಹೈಟೆಕ್ ಜಿಮ್ ಒಂದೇ ದಿನದಲ್ಲಿ ಉದ್ಘಾಟನೆ
ಸಂಪರ್ಕ ರಸ್ತೆಯೇ ಇಲ್ಲ: ಹೊಸ ಚಿಕ್ಕನಹಳ್ಳಿ ದಲಿತ ಕೇರಿಗೆ ಸಂಪರ್ಕ ರಸ್ತೆಯೇ ಇಲ್ಲ. ನಮಗೆ ಕನಿಷ್ಠ ಓಡಾಡುವುದಕ್ಕೆ ಸಂಪರ್ಕ ರಸ್ತೆ ಬೇಕೆಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ ನಿವಾಸಿಗಳು.ಇನ್ನು ವಾರ್ಡ್ ನಲ್ಲಿ ನೀರಿನ ಪೈಪ್ ಲೈನ್ ಇದ್ದರು ನೀರು ಬರುವುದು ಕೇವಲ ಮೂರು ನಲ್ಲಿಗಳಲ್ಲಿ ಮಾತ್ರ.
ಅಕ್ಕಪಕ್ಕದ ಜಮೀನಿನ ಬೋರ್‌ವೆಲ್‌ಗಳಲ್ಲಿ ಬರುವ ನೀರನ್ನು ಕುಡಿಯುವುದಕ್ಕೆ ಬಳಸಬೇಕು. ಕನಿಷ್ಟ ಮಟ್ಟದ ನೀರು ಇಲ್ಲ ಎಂದ ಮೇಲೆ ಇಲ್ಲಿನ ಚರಂಡಿ ವ್ಯವಸ್ಥೆ ಕೇಳುವುದೇ ಬೇಡ. ಸರ್ಕಾರದಿಂದ ನಿವೇಶನ ಕೊಟ್ಟಿರುವುದನ್ನು ಬಿಟ್ಟರೇ ಇಲ್ಲಿನ ನಿವಾಸಿಗಳಿಗೆ ಕನಿಷ್ಠ ಒಂದು ಆಶ್ರಯ ಮನೆ ಸಿಕ್ಕಿಲ್ಲ. ಇಂತಹ ಕನಿಷ್ಠ ಮೂಲ ಸೌಕರ್ಯ ಇಲ್ಲದ ವಾರ್ಡ್ ನಲ್ಲಿ ವಾಸ ಮಾಡು ತ್ತಿರುವುದೇ ಒಂದು ರೀತಿಯ ಶೋಚನೀಯವಾಗಿದೆ.
ಇಂತಹ ದುಸ್ಥಿತಿಯಲ್ಲಿ ವಾಸ ಮಾಡುತ್ತಿರುವ ಬಡಾವಣೆಯನ್ನು ಒಮ್ಮೆ ಸುತ್ತಿಕೊಂಡು ಬಂದ್ರೆಇದು ಮಹಾನಗರಪಾಲಿಕೆಯನ್ನು ಅಣಕಿಸುತ್ತದೆ. ದಾವಣಗೆರೆ ಮಹಾನಗರ ಪಾಲಿಕೆ ವಿದ್ಯಾನಗರ, ಸಿದ್ದವೀರಪ್ಪ ಬಡಾವಣೆ, ಎಂಸಿಸಿಎ, ಮತ್ತು ಬಿ ಬ್ಲಾಕ್‌ಗಳಲ್ಲಿ ಮನೆ ಮನೆಗೆ ಗ್ಯಾಸ್ ಸಂಪರ್ಕ, 24 ಗಂಟೆ ನೀರು ನೀರು ಪೂರೈಸುವ ಮನೆ ಮನೆಗು ಗಂಗೆ ಈ ರೀತಿಯ ಸೌಲಭ್ಯಗಳು ಬಂದಿವೆ.
ಆದ್ರೆ ಹೊಸ ಚಿಕ್ಕನಹಳ್ಳಿ ನಿವಾಸಿಗಳಿಗೆ ಕನಿಷ್ಠ ಒಂದು ಸಾಮೂಹಿಕ ಶೌಚಾಲಯ ಇಲ್ಲ ಅಂದ್ರೆ ದಾವಣಗೆರೆ ಮಹಾನಗರ ಪಾಲಿಕೆ ಏನು ಮಾಡುತ್ತಿದೆ ಎಂದು ಕೇಳಲೇಬೇಕಿದೆ. ಈ ನಿವಾಸಿಗಳು ಏಷ್ಯಾ ನೆಟ್ ಸುವರ್ಣನ್ಯೂಸ್ ಬಿಗ್ 3 ಕದ ತಟ್ಟಿದ್ದು ನೀವಾದ್ರು ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದಾರೆ.