BIG 3 Hero: ಹಸಿದವರ ಪಾಲಿನ ಅನ್ನದಾತ ಸ್ಯಾಮ್ಸನ್: ಮಾದರಿ ಪೊಲೀಸ್ ಠಾಣೆಯ PSI ಯತೀಶ್

By Manjunath NayakFirst Published Oct 1, 2022, 3:22 PM IST
Highlights

Asianet Suvarna News Big 3 Hero: ನಮ್ಮ ಇವತ್ತಿನ ಬಿಗ್3 ಹೀರೋಸ್ ಉತ್ತರಕನ್ನಡದ ಸ್ಯಾಮ್ಸನ್ ಜಾನ್ ಡಿಸೋಜಾ ಹಾಗೂ  ವಿಜಯಪುರದ PSI ಯತೀಶ್‌ ಕೆ.ಎನ್ ‌

ಬೆಂಗಳೂರು (ಅ. 01): ಇವತ್ತಿನ  ಕಾಲದಲ್ಲಿ ನಮ್ಮ ಹೊಟ್ಟೆ ನಾವು ತುಂಬಿಸಿಕೊಂಡ್ರೆ ಸಾಕು ಅನ್ನೋರೆ ಜಾಸ್ತಿ. ಅಂಥದ್ರಲ್ಲಿ ಅಲ್ಲೊಬ್ಬರು ಹಸಿದವರ ಪಾಲಿನ ಅನ್ನದಾತ. ರೋಗಿಗಳ ಪಾಲಿಗೆ ಹೃದಯವಂತ. ಭಿಕ್ಷುಕರು, ನಿರ್ಗತಿಕರ ಬಡವರ ಬಂಧು.  ಇವರ ಹೆಸರು ಸ್ಯಾಮ್ಸನ್ ಜಾನ್ ಡಿಸೋಜಾ. ಉತ್ತರಕನ್ನಡ ಜಿಲ್ಲೆಯ (Uttara Kannada) ಕಾರವಾರದ ನಿವಾಸಿ. ಇವರಿಗೆ ಬಡವರು ಅಂದ್ರೆ ಇನ್ನಿಲ್ಲದ ಪ್ರೀತಿ. ಜಿಲ್ಲಾಸ್ಪತ್ರೆಯ ಬಳಿ ನಿಂತು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವಂತಹ ಬಡವರು, ಅವರ ಕುಟುಂಬಸ್ಥರು, ಆ ಸ್ಪತ್ರೆಯ ಸಿಬ್ಬಂದಿಗೆ ಪ್ರತೀ ದಿನ ಮಧ್ಯಾಹ್ನ ಅಡಿಕೆ ಹಾಳೆಯಲ್ಲಿ ಅನ್ನ, ಸಾಂಬಾರ್ ಹಾಗೂ ಉಪ್ಪಿನ ಕಾಯಿಯನ್ನು ವಿತರಿಸುತ್ತಾ ಹಸಿದವರ ಪಾಲಿಗೆ ಅನ್ನದಾತರಾಗಿದ್ದಾರೆ. 

ಸ್ಯಾಮ್ಸನ್ ಅವರು ಈ ರೀತಿ ಸಮಾಜ ಸೇವೆ ಮಾಡೋಕೆ ಶುರು ಮಾಡಿದ್ದು 5 ವರ್ಷದ ಹಿಂದೆ. ಈವರೆಗೆ ಒಟ್ಟು 3ಲಕ್ಷದ 60 ಸಾವಿರ ಜನರಿಗೆ ಊಟ ನೀಡಿದ್ದಾರೆ. ಇವರ ಈ ಸೇವೆಗೆ 26 ಜನರು ಸ್ವಯಂ ಸೇವಕರು ಕೂಡಾ ಕೈ ಜೋಡಿಸುತ್ತಿದ್ದಾರೆ. ಮಧ್ಯಾಹ್ನ 12ರಿಂದ 1.30ರವರೆಗೆ ಆಸ್ಪತ್ರೆಯಲ್ಲಿ ಊಟ ವಿತರಣೆಯ ಬಳಿಕ 1.30ರಿಂದ 2.30ರವರೆಗೆ ಮಾರುಕಟ್ಟೆಯಲ್ಲಿ ಹಸಿವಿನಿಂದ ಕುಳಿತಿರುವ ಭಿಕ್ಷುಕರು, ಬಡವರು, ಅನಾಥರಿಗೆ ಆಹಾರ ವಿತರಣೆ ಮಾಡುತ್ತಾರೆ. ಹೆಚ್ಚು ಕಡಿಮೆ ದಿನಕ್ಕೆ 350-400 ಜನರಿಗೆ ಆಹಾರ ವಿತರಣೆ ಮಾಡುತ್ತಾರೆ. ಅದು ಕೂಡ ಬಿಸಿ-ಬಿಸಿ.ಅಲ್ಲದೇ, ರಸ್ತೆ ಬದಿಗಳಲ್ಲಿರುವ ಭಿಕ್ಷುಕರು, ನಿರ್ಗಗತಿಕರಿಗೆ ಪ್ಯಾಕೇಟ್ಗಳಲ್ಲಿ ಆಹಾರ ಒದಗಿಸುತ್ತಾರೆ. 

BIG 3 Hero: ಪೊಲೀಸ್ ಆಗುವ ಕನಸಿದೆಯೇ? ನಿಮ್ಮ ಕನಸು ನನಸಾಗಲು 'ಸುವರ್ಣ' ವೇದಿಕೆ!

ನಮಗೆ  ವಿದೇಶದಿಂದ,  ದೊಡ್ಡ  ಉದ್ಯಮಿಗಳಿಂದ  ಯಾವುದೇ ಫಂಡ್‌ಗಳು ಬರೋದಿಲ್ಲ. ಜನರು ನೀಡಿದ ದಾನದಿಂದಲೇ ಬಡವರ ಹೊಟ್ಟೆ ತುಂಬಿಸಲಾಗುತ್ತಿದೆ. ಸುಪ್ರೀಂಕೋರ್ಟ್ ಲಾಯರ್‌ಗಳು, ಉಪನ್ಯಾಸಕ ರು,ನಿವೃತ್ತ ಪ್ರಾಚಾರ್ಯರು,ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಹಾಗೂ ಇತರ ಎನ್‌ಜಿಓಗಳು ನಮಗೆ ಸಹಾಯ ಮಾಡುತ್ತಿರುವುದರಿಂದ ಈ ಸೇವೆ ಮುಂದುವರಿದಿದೆ ಎಂದು ಹೇಳ್ತಾರೆ ಅವರು ಸ್ಯಾಮ್ಸನ್.  ಒಟ್ಟಿನಲ್ಲಿ ಅನ್ನದಾನ ಶ್ರೇಷ್ಠದಾನ ಎನ್ನುವಂತೆ ಬಡವರ ಹೊಟ್ಟೆ ತುಂಬಿಸುವ ಮಹತ್ಕಾರ ನಡೆಸುತ್ತಿರುವ ಸ್ಯಾಮ್ಸನ್ ಎಲ್ಲರಿಗೂ ಮಾದರಿ. ಇವರಿಂದ ಇನ್ನಷ್ಟು ಜನರ ಹೊಟ್ಟೆಗಳು ತುಂಬಲಿ. 

ಮಾದರಿ ಪೊಲೀಸ್ ಠಾಣೆಯ PSI ಯತೀಶ್: ಜನರು ಪೊಲೀಸ್‌ ಠಾಣೆಗಳ ಮೆಟ್ಟಿಲು ಹತ್ತೊಕೆ ಭಯ ಬೀಳ್ತಾರೆ. ಪೊಲೀಸ್‌ ಠಾಣೆ ಅಂದ್ರೆ ಮಾರುದ್ದ ಓಡಿ ಹೋಗ್ತಾರೆ. ಆದ್ರೆ ವಿಜಯಪುರದಲ್ಲಿರೋ ಈ ಪೊಲೀಸ್‌ ಠಾಣೆ ಅಂದ್ರೆ ಮಾತ್ರ ಇಲ್ಲಿನ ಜನ ಸಖತ್ ಖುಷಿ ಪಡ್ತಾರೆ.  ಎಲ್ಲಿ ನೋಡಿದ್ರು ಅಪರಾಧ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿರೋ ಪೇಂಟಿಂಗ್‌ಗಳು. ಇತ್ತ ಪಕ್ಷಿಗಳಿಗಾಗಿ & ಸಸಿಗಳಿಗೆ ನೀರು ಹಾಕ್ತಿರೋ ಪಿಎಸ್‌ಐ. ಅರೇ PSI ಅವರು ಇಲ್ಲೇನು ಮಾಡ್ತಿದ್ದಾರೆ ಅಂತಾ ಅಂದುಕೊಂಡ್ರಾ? ಅಂದಹಾಗೆ ಇದು ಪಾರ್ಕ್‌ ಅಥವಾ ಇನ್ಯವುದೋ ಕಾನ್ವೇಂಟ್ ಅಲ್ಲ. ಇದು ವಿಜಯಪುರ ನಗರದಲ್ಲಿರೋ ಆದರ್ಶನಗರ ಮಾದರಿ ಪೊಲೀಸ್‌ ಠಾಣೆ. ಅಂದ ಹಾಗೆ ಈ ಪೊಲೀಸ್‌ ಠಾಣೆ ಪರಿಸರ ಸ್ನೇಹಿ, ಜನಸ್ನೇಹಿ ಸ್ಥಳವಾಗಿ ಕಂಗೊಳಿಸೋದಕ್ಕೆ ಕಾರಣವಾಗಿದ್ದು PSI ಯತೀಶ್‌ ಕೆ.ಎನ್. 

ತುಮಕೂರು ಮೂಲದ ಇವರು ಆದರ್ಶ ನಗರ ಠಾಣೆಗೆ ಬಂದ ಐದೇ ತಿಂಗಳಲ್ಲಿ ಪೊಲೀಸ್‌ ಠಾಣೆಯನ್ನ ಈ ಲೆವಲ್‌ಗೆ ಸುಧಾರಿಸಿದ್ದಾರೆ. ಠಾಣೆಗೆ ಬರುವ ಜನರಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಚಿತ್ರಗಳನ್ನ ಪೇಂಟ್‌ ಮಾಡಿಸಿದ್ದಾರೆ. ಆವರಣದಲ್ಲಿ ಸಸಿಗಳನ್ನ ನೆಟ್ಟು, ಗುಬ್ಬಚ್ಚಿಗಳು ಬರಲಿ ಎಂದು ಗೂಡುಗಳನ್ನು ಸಹ ತಂದು ಕಟ್ಟಿದ್ದಾರೆ. ಜೊತೆಗೆ ಅವುಗಳಿಗೆ ನೀರು - ಕಾಳಿನ ವ್ಯವಸ್ಥೆಯನ್ನು ಮಾಡಿದ್ದಾರೆ.

 

BIG 3 Hero: ಅಕ್ಕ-ತಮ್ಮನ ಸಸ್ಯ ವೈಜ್ಞಾನಿಕ ಸಂಶೋಧನಾತ್ಮಕ ಅಧ್ಯಯನ

ಪಿಎಸ್‌ಐ ಕಾರ್ಯಕ್ಕೆ ಅಪಾರ ಮೆಚ್ಚುಗೆ: ಇನ್ನು ಸ್ವಂತ ಖರ್ಚು ಹಾಗು ಸಿಬ್ಬಂದಿಗಳ ನೆರವಿನಿಂದ ಪಿಎಸ್‌ಐ ಯತೀಶ್‌ ಮಾಡಿಸಿರುವ ಅಪರಾಧ ಕೃತ್ಯಗಳ ಪೇಂಟಿಂಗ್‌ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಸರ್ವಾಜನಿಕರೊಬ್ಬರು ತಮ್ಮ ಬ್ಯಾಂಕ್‌ ಖಾತೆಯಿಂದ ಹಣ ಕಳೆದುಕೊಂಡು ಠಾಣೆಗೆ ಬಂದಿದ್ದರು. ಇಲ್ಲಿ ಸೈಬರ್‌ ಕ್ರೈಂ ಕುರಿತಾಗಿ ಬಿಡಿಸಲಾದ ಚಿತ್ರವನ್ನ ನೋಡಿ, ಅದ್ರಲ್ಲಿದ್ದ ಹೆಲ್ಪಲೈನ್‌ ನಂಬರ್‌ಗೆ ಕರೆ ಮಾಡಿ ಬ್ಯಾಂಕ್‌ ಖಾತೆಯಲ್ಲಿ ಹಣ ಮತ್ತೊಬ್ಬರ ಪಾಲಾಗದೆ ಉಳಿಸಿಕೊಂಡಿದ್ದಾರಂತೆ. ಹೀಗೆ PSI ಯತೀಶ್‌ ಅವರು ಮಾಡಿದ ಐಡಿಯಾ ವರ್ಕೌಟ್‌ ಆಗಿದ್ದು, ಇವರ ಈ ಕಾರ್ಯಕ್ಕೆ ಎಲ್ಲರು ಅಪಾರ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

ಪೊಲೀಸ್‌ ಠಾಣೆ ಅಂದ್ರೆ ಸಾಕು ಹೆದರುವ ಅದೆಷ್ಟೋ ಜನರಿಗೆ ಆದರ್ಶ ನಗರ ಠಾಣೆ ಒಂದು ಮಾದರಿ ಆಗಿದೆ. ತಮ್ಮ ಸಮಸ್ಯೆ, ದೂರುಗಳನ್ನ ನೀಡಲು ಠಾಣೆಗೆ ಬಂದವರಿಗೆ ಪೊಲೀಸರು ಸಖತ್ ರೆಸ್ಪಾನ್ಸ್ ಮಾಡ್ತಿದ್ದಾರಂತೆ. ಹೀಗೆ ಒಂದು ಪೊಲೀಸ್‌ ಠಾಣೆಯನ್ನ ಜನಸ್ನೇಹಿಯನ್ನಾಗಿಸಿ ಎಲ್ಲರಿಗೂ ಮಾದರಿ ಆಗಿದ್ದಾರೆ PSI ಸತೀಶ್‌. 

click me!