ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಬೆತ್ತದೇಟು ನೀಡಿ ದಂಡಿಸುವ ಪ್ರವೃತ್ತಿ ಕಡಿಮೆಯಾಗಿದ್ದರೂ, ಶಾಲೆಗೆ ಬರುವಾಗ ಮನೆಯಲ್ಲಿ ಹೋಮ್‌ವರ್ಕ್ ನೋಟ್ ಬುಕ್ ಬಿಟ್ಟು ಬಂದಿದ್ದಕ್ಕೆ ವಿದ್ಯಾರ್ಥಿಯೋರ್ವನಿಗೆ ಬೆನ್ನು, ಕೈ, ತೊಡೆ, ಕಾಲುಗಳಿಗೆ ಬಾಸುಂಡೆ ಅಷ್ಟೇ ಅಲ್ಲ ರಕ್ತ ಚಿಮ್ಮುವಂತೆ ಹೊಡೆಯಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೀದರ್ (ಜೂ.22): ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಬೆತ್ತದೇಟು ನೀಡಿ ದಂಡಿಸುವ ಪ್ರವೃತ್ತಿ ಕಡಿಮೆಯಾಗಿದ್ದರೂ, ಶಾಲೆಗೆ ಬರುವಾಗ ಮನೆಯಲ್ಲಿ ಹೋಮ್‌ವರ್ಕ್ ನೋಟ್ ಬುಕ್ ಬಿಟ್ಟು ಬಂದಿದ್ದಕ್ಕೆ ವಿದ್ಯಾರ್ಥಿಯೋರ್ವನಿಗೆ ಬೆನ್ನು, ಕೈ, ತೊಡೆ, ಕಾಲುಗಳಿಗೆ ಬಾಸುಂಡೆ ಅಷ್ಟೇ ಅಲ್ಲ ರಕ್ತ ಚಿಮ್ಮುವಂತೆ ಹೊಡೆಯಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರಲ್ಲಿಯೇ ಈ ಅಮಾನವೀಯತೆ ಮೆರೆದಿದೆ. ಭಾಲ್ಕಿ ತಾಲೂಕಿನ ನಿಟ್ಟೂರು (ಬಿ) ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗೆ ಹೊಡೆಯಾಲಾಗಿದೆ. (ಹೆಸರು ಗೌಪ್ಯವಾಗಿಡಲಾಗಿದೆ) ಗುರುವಾರ ಮಧ್ಯಾಹ್ನ ಶಾಲೆಯ ಕೊನೆಯ ತರಗತಿಯಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ.
ಕನ್ನಡ ಭಾಷೆ ಮನೆ ಪಾಠವನ್ನು ಮಾಡಿಕೊಂಡು ಬಂದಿಲ್ಲ, ಆ ನೋಟ್‌ಬುಕ್ ತಂದಿಲ್ಲ ಎಂದು ಕೋಪ್ರೋಧಿಕ್ತನಾಗಿ ಅಂದು ಶಾಲೆಯ ಪ್ರಭಾರಿ ಮುಖ್ಯಶಿಕ್ಷಕನಾಗಿದ್ದ ಜೈಶಂಕರ ಎಂಬ ಸಹ ಶಿಕ್ಷಕ ಇಂಥ ಅಮಾನವೀಯ ಕೃತ್ಯವೆಸಗಿದ್ದಾನೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಂದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದೆ. ಡಿಡಿಪಿಐ ಸೂಚನೆ ಮೇರೆಗೆ ಶಾಲೆಗೆ ಭೇಟಿ ನೀಡಿದ ಬಿಇಒ ಮಜರ್ ಹುಸೇನಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳ ಒಳಗಾಗಿ ಸಹ ಶಿಕ್ಷಕನ ಮೇಲೆ ಕ್ರಮ ಕೈಗೊಂಡು, ಘಟನೆಯ ಬಗ್ಗೆ ವಿವರ ನೀಡುವಂತೆ ಸೂಚಿಸಿದ್ದಾರೆ.
undefined
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕಂಡುಬಂದಂತೆ, ಅತಿಯಾದ ನೋವು, ತಡೆಯಲಾಗದಂತಹ ದುಃಖ, ಕಣ್ಣಲ್ಲಿ ನೀರು, ಇನ್ನೂ 8ನೇ ತರಗತಿ ಮುಗಿಯದ ಮುಗ್ಧ ಮನಸ್ಸಿನ ಹುಡುಗ, ಮೈತುಂಬ ರಕ್ತದ ಕಲೆಗಳುಳ್ಳ ಬಾಸುಂಡೆ ತೋರಿಸುತ್ತ ಮನೆಯಲ್ಲಿ ನೋಟ್‌ಬುಕ್ ಬಿಟ್ಟು ಬಂದಿದ್ದಕ್ಕೆ ಸರ್ ಹೊಡೆದಾರ ಎಂದು ಹೇಳುತ್ತಿರುವದನ್ನು ಕೇಳುಗರ ಕಣ್ಣಂಚಿನಲ್ಲಿಯೂ ನೀರು ತಡೆಯಲಾಗದಂತಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಎಸ್‌ಪಿ ಸೂಚನೆ: ಜೈಶಂಕರ್ ಎಂಬ ಶಿಕ್ಷಕನೇ ವಿದ್ಯಾರ್ಥಿಗೆ ರಕ್ತ, ಬಾಸುಂಡೆ ಬರುವಂತೆ ಹೊಡೆದಿರೋದು ಎಂಬುವದನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿರುವ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಧನ್ನೂರ ಠಾಣೆಯ ಪಿಎಸ್‌ಐಗೆ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಶಾಸಕ ಎ.ಎಸ್.ಪೊನ್ನಣ್ಣ ಪ್ರತಿಕೃತಿ ದಹನ: ಕೊಡವರ ಸಂಪ್ರದಾಯಕ್ಕೆ ಅಪಮಾನ ಎಂದು ಕಾಂಗ್ರೆಸ್ ಆಕ್ರೋಶ
ಈ ಘಟನೆ ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ಕಪ್ಪು ಚುಕ್ಕೆ. ಇಂತಹ ಘಟನೆಗಳು ಜಿಲ್ಲೆಯ ಇತರೆ ಶಾಲೆಗಳಲ್ಲಿಯೂ ನಡೆಯದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಸರ್ಕಾರದ ಸುತ್ತೋಲೆ ಇದ್ದರೂ ಈ ಕುರಿತಂತೆ ಎಲ್ಲ ಶಾಲಾ ಆಡಳಿತ ಮಂಡಳಿಗಳಿಗೆ ಮತ್ತೊಮ್ಮೆ ಸೂಚಿಸಿ ಇಲಾಖೆ ಪತ್ರ ಬರೆಯಬೇಕಿದೆ. ಮಕ್ಕಳ ಹಕ್ಕುಗಳ ಆಯೋಗದವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಶಾಲೆಗಳಲ್ಲಿ ಈ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಲಿ.