
ಬೀದರ್(ಸೆ.16): ಇಲ್ಲಿನ ಆದರ್ಶ ಕಾಲೋನಿಯಲ್ಲಿ ಆರು ವರ್ಷದ ಮಗು ಸಾನ್ವಿಯನ್ನು ಆಕೆಯ ಮಲತಾಯಿಯೇ ಕೊಲೆ ಮಾಡಿರುವ ಕರಾಳ ಕೃತ್ಯ ಕೇಳಿ ಇಡೀ ರಾಜ್ಯ ಆಕ್ರೋಶಗೊಂಡಿದೆ. ಆಗಸ್ಟ್ 27ರಂದು ಈ ಘಟನೆ ನಡೆದಿದ್ದು, ಮಹಾರಾಷ್ಟ್ರದ 20 ವರ್ಷದ ರಾಧಾ ಎಂಬ ಮಹಿಳೆ ತನ್ನ ಮಲಮಗಳು ಸಾನ್ವಿಯನ್ನು ತಾನು ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಿಂದ ತಳ್ಳಿ ಹತ್ಯೆ ಮಾಡಿದ್ದಳು. ಘಟನೆಯ ನಂತರ, ಮಗುವಿನ ಸಾವು ಆಕಸ್ಮಿಕ ಎಂದು ರಾಧಾ ಬಿಂಬಿಸಲು ಪ್ರಯತ್ನಿಸಿದ್ದಳು. ಆದರೆ, ಪಕ್ಕದ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ರಾಧಾ ಮಾಡಿದ ಕೃತ್ಯ ಸ್ಪಷ್ಟವಾಗಿ ಸೆರೆಯಾಗಿದ್ದು, ಆಕೆಯ ಕ್ರೂರತೆ ಬಯಲಿಗೆ ಬಂದಿದೆ. ಈ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಕೊಲೆ ಆರೋಪದ ಮೇಲೆ ರಾಧಾಳನ್ನು ಬಂಧಿಸಿದ್ದಾರೆ.
ಸೊಸೆಯ ಕೃತ್ಯ ಮೊದಲಿಗೆ ಗೊತ್ತಾಗಿದ್ದು ಸಾನ್ವಿಯ ಅಜ್ಜನಿಗೆ. ಈ ಬಗ್ಗೆ ಅವರು ಖಾಸಗಿ ಮಾಧ್ಯಮದೊಂದಿಗೆ ಕಣ್ಣೀರಿಡುತ್ತಲೇ ಮಾತನಾಡಿದ್ದು, ನನ್ನ ಮಗಳನ್ನು ಕೊಂದ ಆಕೆಯ ಜೀವವೂ ಹೋಗಬೇಕು. ಆಗ ಮಾತ್ರವೇ ನನಗೆ ಸಮಾಧಾನ ಎಂದು ಹೇಳಿದ್ದಾರೆ.
'ಈ ಟೆರಸ್‌ನಿಂದ ಸೊಸೆ ಬೀಳಿಸಿದ್ದಾಳೆ. ಇಲ್ಲಿ ಚೇರ್ ಇಟ್ಟು, ಚೇರ್ ಮೇಲೆ ಒಂದು ಬಕೆಟ್ ಇಟ್ಟು ನಾಟಕ ಮಾಡಿ ಕೆಳಗಡೆ ಬೀಳಿಸಿದ್ದಾಳೆ. ಈ ಘಟನೆ ಆಗಿದ್ದು 27ನೇ ತಾರೀಖು ಗಣೇಶ ಚತುರ್ಥಿ ದಿನ. ನಾನು ಆಗ ಅಂಗಡಿಯಲ್ಲಿದ್ದೆ. ಕೆಳಗಿನಿಂದ ಬಂದು ನನಗೆ ವಿಷಯ ತಿಳಿಸಿದ್ರು. ಹೇಳಿದ್ಮೇಲೆ ನಾನು ಓಡೋಡಿ ಬಂದೆ. ಓಡಿಬಂದು ಆಕೆಯನ್ನು ನೋಡಿದಾಗ, ಆಕೆಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದೆ' ಎಂದು ಹೇಳಿದ್ಆರೆ.
ನಿಮಗೆ ಸೊಸೆಯ ಮೇಲೆ ಯಾವಾಗಲಾದರೂ ಸಂಶಯ ಬರುತ್ತಿತ್ತಾ ಎನ್ನುವ ಪ್ರಶ್ನೆಗೆ, 'ವ್ಯವಹಾರದ ಮೇಲೆ ಮಾತನಾಡುವಾಗ ನನಗೆ ಸಂಶಯ ಬರುತ್ತಿತ್ತು. ಆದ್ರೆ ಮಗು ಮೇಲೆಲ್ಲಾ ಯಾರು ಹೀಗೆ ಮಾಡೋಕೆ ಸಾಧ್ಯ ಅಂತಾ ಆರಂಭದಲ್ಲಿ ಸಂಶಯ ಪಡೋಕೆ ಹೋಗಿರಲಿಲ್ಲ. ಆದರೆ, ವಿಡಿಯೋ ಕ್ಲಿಪ್‌ಗಳು ಸಿಕ್ಕ ನಂತರ ನಾನು ತೀರ್ಮಾನ ಮಾಡಿದೆ' ಎಂದಿದ್ದಾರೆ.
ಘಟನೆ ನಡೆದ ದಿನ ನಾನು ಕುಸಿದು ಹೋಗಿಬಿಟ್ಟಿದ್ದೆ ಏನೂ ಮಾಡಬೇಕು ಅಂತಾನೇ ಗೊತ್ತಾಗಿರಲಿಲ್ಲ. ನನಗೆ ತಾಳೋಕೆ ಆಗಿರಲಿಲ್ಲ. ಮನೆಯಲ್ಲಿ ಮಗುವಿಗೆ ಹಾಗೂ ಹೆಂಡ್ತಿಗೆ ಕೂಡ ಹೇಳಿರಲಿಲ್ಲ. ಆದ್ರೆ ನಿರ್ಧಾರ ತಗೋಬೇಕು ಅಂತಾದ ಮೇಲೆ ಹೇಳಲೇಬೇಕಲ್ಲ. ಅದರ ಸಲುವಾಗಿ ಅವರಿಗೆ ತಿಳಿಸಿದೆ ಎಂದು ಹೇಳಿದ್ದಾರೆ.
'ಎರಡು ವರ್ಷಗಳ ಹಿಂದೆ ರಾಧಾ ಮದುವೆಯಾಗಿ ಈ ಮನೆಗೆ ಬಂದಿದ್ದಳು. ಈಗ 18 ತಿಂಗಳ ಮಗು ಅಂದ್ರೆ ಮೂರು ವರ್ಷ ಸುಮಾರು ಅಂತಾ ಹೇಳಬಹುದು. ನನ್ನ ಮಗನಿಗೆ ಮೊದಲು ಒಂದು ಮದುವೆ ಆಗಿತ್ತು. ಬಿದ್ದಿರೋದು ಮೊದಲನೆ ಸೊಸೆ ಮಗಳು. 2ನೇ ಸೊಸೆಗೆ ಒಂದು ಗಂಡು, ಹೆಣ್ಣು. ಅವಳಿ ಜವಳಿ ಮಕ್ಕಳು. ಇಲ್ಲಿ ಅಕ್ಕಪಕ್ಕದವರು ಬಂದು ಹೇಳಿದಾಗ ಮಗು ಬಿದ್ದಿದ್ದು ಗೊತ್ತಾಗಿತ್ತು. ಆವತ್ತಿನಿಂದ ಇವತ್ತಿನವರೆಗೂ ನನಗೆ ಅಂಗಡಿ ತೆಗೆಯೋಕೆ ಮನಸ್ಸಾಗುತ್ತಿಲ್ಲ. ಸಮಾಧಾನವೇ ಇಲ್ಲ. ಹಾಗಿದ್ದಾಗ ಅಂಗಡಿ ತೆರೆದು ಏನು ಮಾಡಲಿ ನಾನು? ಇಂಥ ದುರ್ಘಟನೆ ಆಗೋದು ಬೇಕಾಗಿರಲಿಲ್ಲ' ಎಂದು ಸಾನ್ವಿಯ ಅಜ್ಜ ಮಾತನಾಡಿದ್ದಾರೆ.
ಘಟನೆ ನಡೆದ ಮೂರು-ನಾಲ್ಕು ದಿನದಲ್ಲೇ ಸೊಸೆಯೇ ಬೀಳಿಸಿದ್ದು ಗೊತ್ತಾಗಿತ್ತು. ಆದರೆ, ಅಕ್ಕಪಕ್ಕದ ಮನೆಯವರು ನಾವ್ಯಾಕೆ ಅದನ್ನು ಹೇಳೋಣ ಅನ್ನುತ್ತಿದ್ದರು. ಎಲ್ಲರಿಗೂ ರಿಕ್ವೆಸ್ಟ್ ಮಾಡಿದ ಬಳಿಕ ಇದರ ಬಗ್ಗೆ ಸ್ವಲ್ಪ ಕ್ಲೂ ಸಿಕ್ಕಿತು. ಇದರ ಬೆನ್ನಲ್ಲಿಯೇ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ದಾಖಲಿಸಿದೆ. ಮಗು ಅಂದ್ರೆ ನಮಗೆ ಜೀವಕ್ಕಿಂತ ಹೆಚ್ಚು. ಸೊಸೆ ಒಂದು ಜೀವ ತಕ್ಕೊಂಡಿದ್ದಾಳೆ. ಆದರೆ, ಈಗ ನಾವು ಐದು ಜೀವ ಉಳಿಯೋದು ಹೇಗೆ? ಒಂದು ದಿನವೂ ಸಮಾಧಾನ ಇಲ್ಲ ಮನಸ್ಸಿಗೆ. ನನ್ನ ಮಗಳು ಹೋಗಿದ್ದಾಳೆ ಎಂದರೆ, ಆಕೆಯ ಜೀವ ಕೂಡ ಹೋಗಬೇಕು. ಅಂತಾ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.