ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್)ದ ನೂತನ ಅಧ್ಯಕ್ಷರಾಗಿ ವಿಜಯನಗರ ಜಿಲ್ಲೆಯ ಮಾಜಿ ಶಾಸಕರು ಹಾಗೂ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್. ಭೀಮಾನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ (ಜೂ.22) : ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್)ದ ನೂತನ ಅಧ್ಯಕ್ಷರಾಗಿ ವಿಜಯನಗರ ಜಿಲ್ಲೆಯ ಮಾಜಿ ಶಾಸಕರು ಹಾಗೂ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್. ಭೀಮಾನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ.
undefined
ಮೂಲತಃ ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಲ್ಲಹಳ್ಳಿಯವರಾದ ಎಸ್. ಭೀಮಾನಾಯ್ಕರ ಕುಟುಂಬ ಮೂಲತಃ ಕೃಷಿಕ ಕುಟುಂಬವಾಗಿದೆ. ಹೈನುಗಾರಿಕೆ ಬಗ್ಗೆ ಆಸಕ್ತಿ ಹೊಂದಿದ್ದ ಭೀಮಾನಾಯ್ಕ ಅವರು ಕಳೆದ ಮೂರುವರೆ ವರ್ಷಗಳಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.
ನಂದಿನಿ ಹಾಲಿನ ದರ 5 ರೂ. ಹೆಚ್ಚಳ: ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧಾರ
2013 ಹಾಗೂ 2018ರಲ್ಲಿ ಹಗರಿಬೊಮ್ಮನಹಳ್ಳಿ ಮೀಸಲು ಕ್ಷೇತ್ರದ ಶಾಸಕರಾಗಿದ್ದ ಎಸ್. ಭೀಮಾನಾಯ್ಕ ಅವರು ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಭೀಮಾನಾಯ್ಕ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಕೆ. ನೇಮರಾಜ್ ನಾಯ್ಕರ ವಿರುದ್ಧ ಪರಾಭವಗೊಂಡಿದ್ದರು.
ಅವಿರೋಧ ಆಯ್ಕೆ:
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು, ಕಳೆದ ಬಾರಿಯೇ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಬಾಲಚಂದ್ರ ಜಾರಕಿಹೊಳಿಯವರು ಅಧ್ಯಕ್ಷರಾಗುತ್ತಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸದೇ ಹಿಂದೆ ಸರಿದಿದ್ದರು. ವಿಧಾನಸಭಾ ಚುನಾವಣೆ ಮುಗಿದ ಬಳಿಕ ಕೆಎಂಎಫ್ ಗಾದಿಗಾಗಿ ಬೆಂಗಳೂರಿನಲ್ಲೇ ಉಳಿದಿದ್ದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಕೆಎಂಎಫ್‌ನ 14 ಒಕ್ಕೂಟಗಳ ಅಧ್ಯಕ್ಷರ ಮನ ಗೆದ್ದು ಅವಿರೋಧ ಆಯ್ಕೆಯಾಗಿದ್ದಾರೆ.
ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಪುತ್ರ ಎಂ.ಪಿ. ರವೀಂದ್ರ ಕೆಎಂಎಫ್ ಗಾದಿಗೆ ಪ್ರಯತ್ನಿಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಕೈತಪ್ಪಿತ್ತು. ಈಗ ಅವರ ಸ್ನೇಹಿತರೂ ಆಗಿರುವ ಭೀಮಾನಾಯ್ಕ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಬಳ್ಳಾರಿಯ ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದರು.
ರಾಬಕೊವಿಯಲ್ಲಿ ಅಭಿವೃದ್ಧಿ:
ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಎಸ್. ಭೀಮಾನಾಯ್ಕ ಅವರು ಉತ್ತಮ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ರೈತರಿಗೆ ನೀಡಲಾಗುತ್ತಿದ್ದ .4 ಪ್ರೋತ್ಸಾಹಧನ ಕಡಿತ ಮಾಡದೇ ಮುಂದುವರಿಸಿದ್ದರು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಮಹಿಳಾ ಸಂಘಗಳ ರಚನೆಗೆ ಆದ್ಯತೆ ನೀಡಿದರು. ರೈತರ ಹಿತವನ್ನು ಕಾಪಾಡುವ ಮೂಲಕ ರಾಬಕೊವಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ಉತ್ತಮ ಲಾಭ ಗಳಿಸಿದೆ.
ಕೆಎಂಎಫ್ ಅಧ್ಯಕ್ಷರಾಗಿ ಶಾಸಕ ಭೀಮಾನಾಯ್ಕ್ ಅವಿರೋಧ ಆಯ್ಕೆ
ರಾಜ್ಯದಲ್ಲಿ ಹಾಲು ಉತ್ಪಾದಕರ ಹಿತಾಸಕ್ತಿ ಮತ್ತು ಹಾಲು ಉತ್ಪಾದಕ ಮಹಾಮಂಡಳದ ಗ್ರಾಹಕರಿಗೆ ತೊಂದರೆಯಾಗದಂತೆ ಸಮನ್ವಯ ಸಾಧಿಸಲಾಗುವುದು. ಜತೆಗೆ ರೈತರ ಹಿತ ಕಾಪಾಡಲಾಗುವುದು.
ಎಸ್. ಭೀಮಾನಾಯ್ಕ, ಕೆಎಂಎಫ್ ನೂತನ ಅಧ್ಯಕ್ಷರು