ಭಾನುವಾರ ಬೆಳಗ್ಗೆ 6.30ಕ್ಕೆ ಸರಿಯಾಗಿ ತಾಲೂಕಿನ ಗಡಿ ಗ್ರಾಮ ಬಾಣಸಂದ್ರದಲ್ಲಿ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆ ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಮೂಲಕ ಜಾನಪದ ಕಲಾ ತಂಡಗಳು ಭಾಗವಹಿಸುವುದರೊಂದಿಗೆ ಪಾದಯಾತ್ರೆಗೆ ಸಾಂಸ್ಕೃತಿಕ ಸೊಗಡನ್ನು ನೀಡಿತು.
ತಿಪಟೂರು (ಅ.10) : ಭಾನುವಾರ ಬೆಳಗ್ಗೆ 6.30ಕ್ಕೆ ಸರಿಯಾಗಿ ತಾಲೂಕಿನ ಗಡಿ ಗ್ರಾಮ ಬಾಣಸಂದ್ರದಲ್ಲಿ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆ ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ಮೂಲಕ ಜಾನಪದ ಕಲಾ ತಂಡಗಳು ಭಾಗವಹಿಸುವುದರೊಂದಿಗೆ ಪಾದಯಾತ್ರೆಗೆ ಸಾಂಸ್ಕೃತಿಕ ಸೊಗಡನ್ನು ನೀಡಿತು.
ತಾಲೂಕಿನ ಕೆ.ಬಿ.ಕ್ರಾಸ್ ಮೂಲಕ ಹಾಯ್ದು ಚಿಕ್ಕ ನಾಯಕನಹಳ್ಳಿ ತಾಲೂಕು ಪ್ರವೇಶಿಸಿದ ಪಾದ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ (Tahul Gandhi) ರಾಜ್ಯ ಕಾಂಗ್ರೆಸ್ (Congress) ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸಾಥ್ ನೀಡಿದರು. ತಾಲೂಕು ಕಾಂಗ್ರೆಸ್ ಮುಖಂಡರಾದ ಮಾಜಿ ಶಾಸಕ ಕೆ.ಷಡಕ್ಷರಿ, ಮುಖಂಡ ಲೋಕೇಶ್ವರ, ಕೆ.ಟಿ. ಶಾಂತಕುಮಾರ್, ಟೂಡಾಶಶಿಧರ್, ಕೆಎಂಎಫ್ ನಿರ್ದೇಶಕ ಮಾದೀಹಳ್ಳಿ ಪ್ರಕಾಶ್ ಸೇರಿದಂತೆ ಕೆಲ ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ ತಾಲೂಕಿನಿಂದ ಸ್ಥಳೀಯ ಕಾಂಗ್ರೆಸ್ ನಾಯಕರು ಸಾವಿರಾರು ಕಾರ್ಯಕರ್ತರನ್ನು ಕರೆದುಕೊಂಡು ಹೋಗುವುದಾಗಿ ಮಾಧ್ಯಮದವರಿಗೆ ಈ ಮುಂಚೆ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರೂ ಸಹ ಇಂದಿನ ಯಾತ್ರೆಗೆ ಹೆಚ್ಚು ಜನರನ್ನು ಸೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಕಂಡು ಬಂದಿತು. ತಾಲೂಕಿನ ಕಾಂಗ್ರೆಸ್ ನಾಯಕರು ಐಕ್ಯತಾ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜೊತೆ ಹೆಜ್ಜೆ ಹಾಕಲು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಮಾಜಿ ಶಾಸಕ ಕೆ. ಷಡಕ್ಷರಿಯವರು ರಾಹುಲ್ ಗಾಂಧೀಯವರ ಜೊತೆ ಹೆಜ್ಜೆ ಹಾಕಲು ಹೋದಾಗ ಸೆಕ್ಯುರಿಟಿಯವರ ಕಾರಣದಿಂದ ಸೇರಿಕೊಳ್ಳಲಾಗಿಲ್ಲ. ನಂತರ ಇದನ್ನು ಗಮನಿಸಿದ ರಾಜ್ಯ ನಾಯಕರು ಇವರಿಗೆ ಕರೆ ಮಾಡಿ ಕರೆಸಿಕೊಂಡು ರಾಹುಲ್ ಗಾಂಧಿಯವರನ್ನ ಭೇಟಿ ಮಾಡಿಸಿದ್ದಾರೆ.
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಗುಬ್ಬಿ ತಾಲೂಕಿನ ಪತ್ರೆ ಮತಿಘಟ್ಟದ ಸಂತೋಷ್‌ಕುಮಾರ್ ಕಲಾತಂಡದಿಂದ ವೀರಭದ್ರ ಕುಣಿತ ಪ್ರಮುಖ ಆಕರ್ಷಣೆಯಾಗಿತ್ತು. ಹುಲಿವೇಷ, ಡೊಳ್ಳು ಕುಣಿತ, ತಮಟೆ, ನಗಾರಿ, ಕೇರಳದ ಚಿಟ್ಟಿವಾಧ್ಯ ಹಾಗೂ ಇನ್ನೂ ಅನೇಕ ಕಲಾ ತಂಡಗಳು ಪಾದಯಾತ್ರೆಯಲ್ಲಿ ತಮ್ಮ ಪ್ರದರ್ಶನ ನೀಡಿದವು.
ಕಿಬ್ಬನಹಳ್ಳಿ ಕ್ರಾಸ್‌ನಿಂದ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಯಾತ್ರೆ ಕೆಲವೇ ನಿಮಿಷಗಳಲ್ಲಿ ನಿರ್ಗಮಿಸಿದ ನಂತರ ಮಾರ್ಗ ಮಧ್ಯೆ ಅಲ್ಲಲ್ಲಿ ರಾಹುಲ್ ಗಾಂಧಿಯವರು ಕೃಷಿಕರ ಜೊತೆ ಸಂವಾದ, ಕೊಬ್ಬರಿ ವಿಷಯಕ್ಕೆ ಸಂಬಂಧಪಟ್ಟಂತೆ ರೈತರೊಂದಿಗೆ ಮಾತನಾಡಿದರು. ಸಾಮಾನ್ಯರಲ್ಲಿ ಸಾಮಾನ್ಯವಾಗಿ ಪಾದಯಾತ್ರೆಯಲ್ಲಿ ಸಂಚರಿಸಿದ್ದು ವಿಶೇಷವಾಗಿತ್ತು. ದಾರಿಯುದ್ದಕ್ಕೂ ಎಲ್ಲ ಗ್ರಾಮದ ಗ್ರಾಮಸ್ಥರು ಮುಖ್ಯ ರಸ್ತೆಗೆ ಬಂದು ನಿಂತು ಪಾದಯಾತ್ರೆಯನ್ನು ವೀಕ್ಷಿಸಿದರು.
ಪಾದಯಾತ್ರೆಯ ದಾರಿಯುದ್ದಕ್ಕೂ ಸ್ಟಾಲ್‌ಗಳನ್ನು ಮಾಡಿ ಪಾದಯಾತ್ರೆ ಮಾಡುವ ಕಾರ್ಯಕರ್ತರಿಗೆ, ಸೇಬು, ಬಾಳೆಹಣ್ಣು, ಬಿಸ್ಕತ್, ಕಾರಪುರಿ, ಮಜ್ಜಿಗೆ ಹಾಗೂ ನೀರಿನ ಬಾಟಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮುಖಂಡ ಲೋಕೇಶ್ವರ ಕಾರ್ಯಕರ್ತರಿಗೆ ತಿಂಡಿ ವ್ಯವಸ್ಥೆ ಮಾಡಿದ್ದರು.
ಸಾಂಸ್ಕೃತಿಕ ಕಲಾಮೇಳದೊಂದಿಗೆ ವಿಜೃಂಭಿಸಿದ ಭಾರತ್ ಜೋಡೋ
ಸಾಂಸ್ಕೃತಿಕ ಕಲಾಮೇಳದೊಂದಿಗೆ ವಿಜೃಂಭಿಸಿದ ಭಾರತ್ ಜೋಡೋ
ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ, ಸಿದ್ದು, ಡಿಕೆಶಿ ಹಾಗೂ ಪರಮೇಶ್ವರ್
ಅಪ್ರಯೋಜಕ ಎನ್ನಲು ಕೋಟಿ ಹಣ ಖರ್ಚು
‘ನನ್ನನ್ನು ಅಪ್ರಯೋಜಕ ಎಂದು ಬಿಂಬಿಸಲು ಬಿಜೆಪಿ ಕೋಟಿ, ಕೋಟಿ ಹಣ ಖರ್ಚು ಮಾಡುತ್ತಿದೆ’ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು ಪಾದಯಾತ್ರೆ ಮೂಲಕ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದಾಗಿ ಪ್ರತಿಪಾದಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ನಿಮಿತ್ತ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ಬಿಜೆಪಿಯ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ವಿರೋಧಿಸಿ ಯಾತ್ರೆಯನ್ನು ಮಾಡಲಾಗುತ್ತಿದೆಯೇ ಹೊರತು, 2024ರ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯಾತ್ರೆ ನಡೆಸುತ್ತಿಲ್ಲ. ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ. ಕೋಮುವಾದವನ್ನು ಬೆಂಬಲಿಸುವುದೂ ಇಲ್ಲ. ದೇಶದ ಎಲ್ಲ ವರ್ಗದ ಜನರನ್ನು ಒಟ್ಟಾಗಿ ಕರೆದೊಯ್ಯುವ ಪಕ್ಷ ನಮ್ಮದು ಎಂದರು.
"ಯಾವ ಸಿಎಂ ಕೂಡ ಬೇಡ ಅನ್ನಲಾರ"; ರಾಜಸ್ಥಾನದಲ್ಲಿ ಅದಾನಿ ಹೂಡಿಕೆ ಬಗ್ಗೆ ರಾಹುಲ್ ಪ್ರತಿಕ್ರಿಯೆ
ಇದೇ ವೇಳೆ, ಆರ್‌ಎಸ್‌ಎಸ್ ವಿರುದ್ಧವೂ ಹರಿಹಾಯ್ದ ರಾಹುಲ್, ಆರ್‌ಎಸ್‌ಎಸ್‌ನವರು ಬ್ರಿಟಿಷರಿಗೆ ಸಹಾಯ ಮಾಡುತ್ತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಇಲ್ಲವೇ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷ ಬ್ರಿಟೀಷರ ವಿರುದ್ಧ ಹೋರಾಡಿತ್ತು. ಇದೇ ಕಾಂಗ್ರೆಸ್ ಮತ್ತು ಆರ್‌ಎಸ್‌ಎಸ್‌ಗೂ ಇರುವ ವ್ಯತ್ಯಾಸ ಎಂದರು.
ಪಿಎಫ್‌ಐ ನಿಷೇಧ ಸ್ವಾಗತಾರ್ಹ:
ದೇಶದಲ್ಲಿ 5 ವರ್ಷ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿದ ರಾಹುಲ್, ದ್ವೇಷ ಸಾಧಿಸುವ ವ್ಯಕ್ತಿ ಮತ್ತು ಸಂಘಟನೆಯನ್ನು ನಾವು ಎಂದಿಗೂ ಬೆಂಬಲಿಸುವುದಿಲ್ಲ ಎಂದರು. ಇದೇ ವೇಳೆ, ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ನಾವು ಹಸ್ತಕ್ಷೇಪ ನಡೆಸುವುದಿಲ್ಲ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದವರು ಗಾಂಧಿ ಕುಟುಂಬದ ಕೈಗೊಂಬೆಯಾಗಿ ಇರುವುದಿಲ್ಲ. ಅವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.