ಬರದ ಜಿಲ್ಲೆಗೆ ಹರಿದು ಬಂದಳು ಭದ್ರೆ : 25 ವರ್ಷಗಳ ಹೋರಾಟಕ್ಕೆ ಸಿಕ್ಕ ಯಶಸ್ಸು

By Kannadaprabha NewsFirst Published Oct 4, 2019, 11:09 AM IST
Highlights

ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಈ ಮೂಲಕ ಬರದ ನಾಡಿಗೆ ಭದ್ರೆ ಹರಿಸಬೇಕೆಂಬ ಚಿತ್ರದುರ್ಗ ಜಿಲ್ಲೆಯ ಜನರ 25 ವರ್ಷದ ಕನಸು ನನಸಾದಂತಾಗಿದೆ.
 

ಚಿತ್ರದುರ್ಗ [ಅ.04]: ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಬೆಟ್ಟದ ತಾವರೆಕೆರೆ ಬಳಿಯ ಪಂಪ್‌ಹೌಸ್‌ನಲ್ಲಿ ಗುರುವಾರ ಮಧ್ಯಾಹ್ನ ನೀರನ್ನು ಲಿಫ್ಟ್‌ ಮಾಡಿ ಯಶಸ್ವಿಯಾಗಿ ನಾಲೆಗೆ ಹರಿಸಲಾಗಿದೆ. ಈ ನೀರು ಗುರುವಾರ ರಾತ್ರಿ ಹಿರಿಯೂರಿನ ವಾಣಿವಿಲಾಸ ಸಾಗರ ಡ್ಯಾಂ ಸೇರಿದ್ದು, ಈ ಮೂಲಕ ಬರದ ನಾಡಿಗೆ ಭದ್ರೆ ಹರಿಸಬೇಕೆಂಬ ಚಿತ್ರದುರ್ಗ ಜಿಲ್ಲೆಯ ಜನರ 25 ವರ್ಷದ ಕನಸು ನನಸಾದಂತಾಗಿದೆ.

ಮಲೆನಾಡಿನ ಭದ್ರಾ ಡ್ಯಾಂನಿಂದ ಒಟ್ಟು 2 ಕಡೆ 51 ಮೀಟರ್‌ ಎತ್ತರಕ್ಕೆ ನೀರು ಲಿಫ್ಟ್‌ ಮಾಡಿ ಬಯಲು ಸೀಮೆಗೆ ಹರಿಸುವ ಮಹತ್ವದ ಯೋಜನೆ ಇದಾಗಿದೆ. ಭದ್ರಾ ಜಲಾಶಯದಿಂದ 11 ಕಿ.ಮೀ.ದೂರದ ಶಾಂತಿಪುರದ ಬಳಿ ಮೊದಲ ಲಿಫ್ಟ್‌ ಕಾರ್ಯನಿರ್ವಹಿಸುತ್ತದೆ. ಅಲ್ಲಿ 18 ಸಾವಿರ ಅಶ್ವ ಶಕ್ತಿಯ 5 ಮೋಟಾರ್‌ಗಳ ಮೂಲಕ 51 ಮೀಟರ್‌ ಎತ್ತರಕ್ಕೆ ನೀರನ್ನು ಎತ್ತಿ ನಾಲೆಗೆ ಬಿಡಲಾಗುತ್ತದೆ. ಆ ನೀರು 23 ಕಿ.ಮೀ. ದೂರದ ಅಜ್ಜಂಪುರ ಸಮೀಪದ ಬೆಟ್ಟದ ತಾವರಕೆರೆ ಸಮೀಪದ ಪಂಪ್‌ಹೌಸ್‌ಗೆ ಬಂದು ಸೇರಿದ ನಂತರ ಅಲ್ಲಿಂದ ಮತ್ತೆ 51 ಮೀಟರ್‌ ಮೇಲಕ್ಕೆತ್ತಿ ಕಾಲುವೆಗೆ ಹಾಯಿಸಲಾಗುತ್ತದೆ. ಮೊದಲ ಹಂತದಲ್ಲಿ ಭದ್ರಾ ಡ್ಯಾಂನಿಂದ ಹಿರಿಯೂರು ತಾಲೂಕಿನ ವಿವಿ ಸಾಗರಕ್ಕೆ ಒಟ್ಟು 130 ಕಿ.ಮೀ. ನೀರು ಹರಿಯುತ್ತದೆ.

ಯೋಜನೆ ಭಾಗವಾಗಿ ಗುರುವಾರ ಮಧ್ಯಾಹ್ನ 1ರ ಸುಮಾರಿಗೆ ಬೆಟ್ಟದ ತಾವರೆಕೆರೆ ಪಂಪ್‌ಹೌಸ್‌ನಲ್ಲಿ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮೋಟಾರ್‌ ಚಾಲನೆ ಆಗುತ್ತಿದ್ದಂತೆ 51 ಮೀಟರ್‌ ಎತ್ತರಕ್ಕೆ ಚಿಮ್ಮಿದ ನೀರು ನಾಲೆಗೆ ಧುಮುಕಿತು. ಇದಾದ ಬಳಿಕ 7 ಕಿ.ಮೀ. ದೂರದ ಸುರಂಗ ಮಾರ್ಗದ ಒಳ ಹೊಕ್ಕ ನೀರು ರೈಲ್ವೆ ಹಳಿ ಕೆಳಭಾಗದಲ್ಲಿ ಹರಿದು ವೇದಾವತಿ ನದಿ ಮೂಲಕ ರಾತ್ರಿ ವಿವಿ ಸಾಗರ ಸೇರಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭದ್ರೆ ನೀರೆತ್ತಲು 2 ಪಂಪ್‌ ಹೌಸ್‌ಗಳಲ್ಲಿ 18 ಸಾವಿರ ಅಶ್ವಶಕ್ತಿಯ ತಲಾ 5 ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಶಾಂತಿಪುರದ ಪಂಪ್‌ಹೌಸ್‌ನಿಂದ ಮೊದಲು 5 ಮೋಟಾರ್‌ಗಳಲ್ಲಿ ನೀರು ಮೇಲಕ್ಕೆತ್ತಿ ನಾಲೆಗೆ ಬಿಡಲಾಯಿತು. ನಾಲೆ ತುಂಬಿದ ಬಳಿಕ 1ಪಂಪ್‌ ಅನ್ನಷ್ಟೇ ಚಾಲನೆಯಲ್ಲಿಡಲಾಯಿತು. ಬೆಟ್ಟದ ತಾವರೆಕೆರೆ ಬಳಿ ಕೇವಲ 1 ಮೋಟಾರ್‌ ಪಂಪ್‌ ಮೂಲಕ ಲಿಫ್ಟ್‌ ಮಾಡಿ ನಾಲೆಗೆ ನೀರು ಬಿಡಲಾಯಿತು. ಅಜ್ಜಂಪುರ ಬಳಿ ರೈಲ್ವೆ ಹಳಿ ಕೆಳಭಾಗದಲ್ಲಿ 7 ಮೀಟರ್‌ ಎತ್ತರದ ಸ್ಲ್ಯಾಬ್ ಕಾಲುವೆ ನಿರ್ಮಾಣ(ರೈಲ್ವೆ ಸಂಚಾರ ಸ್ಥಗಿತಗೊಳಿಸದೆ ಕೈಗೊಳ್ಳುವ ಕಾಮಗಾರಿ ಇದು) ಮಾಡಬೇಕಾಗಿದ್ದು, ಕಲ್ಲು ಸಿಕ್ಕಿದ್ದರಿಂದ ಕಾಮಗಾರಿ ಅಪೂರ್ಣಗೊಂಡಿತ್ತು. ಹಾಗಾಗಿ, ಕೇವಲ ಎರಡೂವರೆ ಮೀಟರ್‌ ವ್ಯಾಸದ 2 ಕೊಳವೆಗಳನ್ನು ಅಳವಡಿಸಿ ಮೊದಲ ಹಂತದಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಹೀಗಾಗಿ, 5 ಪಂಪ್‌ಗಳಲ್ಲಿ ನೀರೆತ್ತಿದರೆ, ಒತ್ತಡ ಹೆಚ್ಚಾಗಿ ಹಳಿಗಳಿಗೆ ಧಕ್ಕೆಯಾಗುವ ಆತಂಕದಿಂದ ಕೇವಲ 1 ಪಂಪ್‌ ಮೂಲಕ ನೀರು ಲಿಫ್ಟ್‌ ಮಾಡಲಾಯಿತು.

ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ಹಾಗೂ ಭದ್ರಾ ಡ್ಯಾಂನಿಂದ ಒಟ್ಟು 29.9 ಟಿಎಂಸಿ ನೀರು ಹಂಚಿಕೆಯಾಗಿದೆ. ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿನ 2,25,515 ಹೆಕ್ಟರ್‌(5,57,022 ಎಕರೆ) ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಅಲ್ಲದೆ, 4 ಜಿಲ್ಲೆಗಳಲ್ಲಿ 367 ಕೆರೆ ತುಂಬಿಸಲಾಗುತ್ತದೆ. 2008, ಅ.8ರಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಯೋಜನೆಗಾಗಿ .5985 ಕೋಟಿ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

"

click me!