BEO ಕಚೇರಿ ಅಧೀಕ್ಷಕ ಮಂಜುನಾಥ್ ಆತ್ಮ*ತ್ಯೆ ಶಂಕೆ; ಡೆತ್ ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರು!

Published : Aug 24, 2026, 09:31 PM IST
BEO Manju!

ಸಾರಾಂಶ

ಗಂಗಾವತಿ ಬಿಇಓ ಕಚೇರಿ ಅಧೀಕ್ಷಕ ಮಂಜುನಾಥ್, ತುಂಗಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್‌ನಲ್ಲಿ, ಕೆಲಸದ ಒತ್ತಡ ಹಾಗೂ ಮಾನಸಿಕ ಕಿರುಕುಳ ನೀಡಿದ ಮೂವರು ಮೇಲಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಚೇರಿಯಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಹೆಚ್.ಜಿ. (53) ಅವರು ತುಂಗಭದ್ರಾ ಎಡದಂಡೆ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ಇದೇ ಕಚೇರಿಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ವಿಕಲಚೇತನ ಅಧಿಕಾರಿಯೊಬ್ಬರು ಈ ನಿರ್ಧಾರಕ್ಕೆ ಬಂದಿರುವುದು ಇಡೀ ಇಲಾಖೆಯನ್ನು ಆಘಾತಕ್ಕೆ ಈಡುಮಾಡಿದೆ.

ಸ್ಥಳದಲ್ಲಿ ತ್ರಿಚಕ್ರ ವಾಹನ ಹಾಗೂ ಡೆತ್ ನೋಟ್ ಪತ್ತೆ!

ಸೋಮವಾರ ಬೆಳಿಗ್ಗೆ ವಡ್ಡರಹಟ್ಟಿ ಹಾಗೂ ಆರಾಳ್ ಗ್ರಾಮದ ಮಧ್ಯೆ ಹಾದುಹೋಗುವ ತುಂಗಭದ್ರಾ ಎಡದಂಡೆ ಕಾಲುವೆಯ ದಂಡೆಯ ಮೇಲೆ ಮಂಜುನಾಥ್ ಅವರ ತ್ರಿಚಕ್ರ ವಾಹನ (ದಿವ್ಯಾಂಗರ ಸ್ಕೂಟರ್) ಹಾಗೂ ಚಪ್ಪಲಿಗಳು ಪತ್ತೆಯಾಗಿವೆ. ಅನುಮಾನಗೊಂಡ ಸಾರ್ವಜನಿಕರು ಮತ್ತು ಪೊಲೀಸರು ಪರಿಶೀಲಿಸಿದಾಗ, ಮಂಜುನಾಥ್ ಅವರು ಬರೆದಿಟ್ಟಿದ್ದರೆನ್ನಲಾದ ಡೆತ್ ನೋಟ್ ಸಹ ದೊರೆತಿದೆ. ಈ ಡೆತ್ ನೋಟ್ ಸಿಕ್ಕ ಬೆನ್ನಲ್ಲೇ ಅವರು ಕಾಲುವೆಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಡೆತ್ ನೋಟ್‌ನಲ್ಲಿ ಪ್ರಭಾವಿ ಅಧಿಕಾರಿಗಳ ಹೆಸರು!

ವಿಕಲಚೇತನ ಮಂಜುನಾಥ್ ಅವರು ಬರೆದಿಟ್ಟಿರುವ ಡೆತ್ ನೋಟ್‌ನಲ್ಲಿ ಕಚೇರಿಯ ವರಿಷ್ಠರು ಹಾಗೂ ಸಹೋದ್ಯೋಗಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಬಿಇಓ (ಕ್ಷೇತ್ರ ಶಿಕ್ಷಣಾಧಿಕಾರಿ) ನಟೇಶ್ ಹೆಚ್.ಬಿ., ಮತ್ತೊಬ್ಬ ಅಧಿಕಾರಿ ಶಿವಪ್ರಸಾದ್ ಸ್ವಾಮಿ ಹಾಗೂ ಅಧೀಕ್ಷಕಿ ರೇಣುಕಾ ವೈ. ಗೌಡರ್ ಅವರು ತಮಗೆ ನಿರಂತರವಾಗಿ ನೀಡುತ್ತಿದ್ದ ಅಧಿಕ ಕೆಲಸದ ಒತ್ತಡ ಮತ್ತು ಮಾನಸಿಕ ಕಿರುಕುಳವೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳ ಮಾನಸಿಕ ಹಿಂಸೆಯನ್ನು ತಡೆಯಲಾಗದೆ, ಬೇರೆ ದಾರಿ ಕಾಣದೆ ಆರಾಳ್ ಗ್ರಾಮದ ಬಳಿಯ ಕಾಲುವೆಗೆ ಹಾರಿ ಪ್ರಾಣ ತತ್ಯಾಗ ಮಾಡುತ್ತಿರುವುದಾಗಿ ಮಂಜುನಾಥ್ ಡೆತ್ ನೋಟ್‌ನಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

ಅಗ್ನಿಶಾಮಕ ದಳದಿಂದ ತೀವ್ರ ಶೋಧ!

ವಿಷಯ ತಿಳಿದ ತಕ್ಷಣವೇ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಮಂಜುನಾಥ್ ಅವರ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳೀಯ ಈಜುಗಾರರ ನೆರವಿನಿಂದ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.

ಪೊಲೀಸ್ ದೂರು ಮತ್ತು ತನಿಖೆ!

ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಡೆತ್ ನೋಟ್ ಅನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಕಚೇರಿಯ ಒಳಗಿನ ಆಂತರಿಕ ಕಿರುಕುಳ ಮತ್ತು ಕರ್ತವ್ಯದ ಒತ್ತಡದ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ವರ್ಷಗಳಿಂದ ವಿಕಲಚೇತನರಾಗಿದ್ದರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗೆ ಕಚೇರಿಯಲ್ಲಿ ಸೂಕ್ತ ಬೆಂಬಲ ಸಿಗದೆ, ಕಿರುಕುಳ ಅನುಭವಿಸಿ ಈ ರೀತಿ ಪ್ರಾಣ ಕಳೆದುಕೊಳ್ಳುವಂತಾಗಿದ್ದು ಸಾರ್ವಜನಿಕರ ಹಾಗೂ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

PREV
Read more Articles on
click me!

Recommended Stories

ಬೆಂಗಳೂರಲ್ಲಿ ಆ.28ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ; ನಿಮ್ಮ ಏರಿಯಾ ಇಲ್ಲಿದೆಯಾ ಚೆಕ್ ಮಾಡಿ!
ದಾವಣಗೆರೆ ಶಾಸಕ ಸಮರ್ಥ ಶಾಮನೂರು ಕಾರು ಭೀಕರ ಅಪಘಾತ; ಓವರ್‌ಟೇಕ್ ಮಾಡುವಾಗ ಅನಾಹುತ