
ಬೆಂಗಳೂರು (ಆ.17): ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ನಂತರ ದೀರ್ಘ ರಜೆಯ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳಿದ್ದ ಪ್ರಯಾಣಿಕರು, ಕೆಲಸ-ಕಾರ್ಯಗಳ ನಿಮಿತ್ತ ಸೋಮವಾರ ಬೆಂಗಳೂರು ನಗರಕ್ಕೆ ವಾಪಾಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿರುವುದರಿಂದ, ಆಗಸ್ಟ್ 18, 2025ರ ಸೋಮವಾರದಂದು ನಮ್ಮ ಮೆಟ್ರೋ ಹಳದಿ ಮಾರ್ಗದ (ಆರ್.ವಿ. ರಸ್ತೆ-ಬೊಮ್ಮಸಂದ್ರ) ಸೇವೆಗಳು ಎಂದಿಗಿಂತ ಬೇಗ ಅಂದರೆ ಮುಂಜಾನೆ 5 ಗಂಟೆಯಿಂದಲೇ ಪ್ರಾರಂಭವಾಗಲಿವೆ.
ಮೊದಲ ಮೆಟ್ರೋ ರೈಲು ಸೇವೆಗಳು ಆರ್.ವಿ. ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಬೆಳಿಗ್ಗೆ 5:00 ಗಂಟೆಗೆ ಹೊರಡಲಿವೆ. ಈ ವಿಶೇಷ ವ್ಯವಸ್ಥೆ ಕೇವಲ ಆಗಸ್ಟ್ 18, 2025ರ ಸೋಮವಾರಕ್ಕೆ ಮಾತ್ರ ಅನ್ವಯವಾಗಲಿದೆ. ಪ್ರಯಾಣಿಕರು ಈ ಮುಂಜಾನೆಯ ಸೇವೆಯ ಲಾಭ ಪಡೆದುಕೊಳ್ಳುವಂತೆ ನಮ್ಮ ಮೆಟ್ರೋ ಕೋರಿದೆ. ಇನ್ನು ಮಂಗಳವಾರದಿಂದ (ಆಗಸ್ಟ್ 19) ಹಳದಿ ಮಾರ್ಗದ ಮೆಟ್ರೋ ಸೇವೆಗಳು ಎಂದಿನಂತೆ ಬೆಳಿಗ್ಗೆ 6:30ರಿಂದ ಪ್ರಾರಂಭವಾಗಲಿವೆ.
ಇದಲ್ಲದೆ, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದ ಮೆಟ್ರೋ ಸೇವೆಗಳು ಸೋಮವಾರದಂದು ಎಂದಿನಂತೆ ಬೆಳಿಗ್ಗೆ 4:15ರಿಂದಲೇ ಕಾರ್ಯನಿರ್ವಹಿಸಲಿವೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಅದರಂತೆ ವಾರಾಂತ್ಯದ ಮೊದಲ ದಿನ ಬೆಳಗ್ಗೆ 4.15ರಿಂದಲೇ ನಾಲ್ಕೂ ದಿಕ್ಕುಗಳಲ್ಲಿನ ಕೊನೆಯ ಮೆಟ್ರೋ ನಿಲ್ದಾಣಗಳಿಂದ ಮೆಟ್ರೋ ರೈಲು ಸಂಚಾರ ಪ್ರಯಾಣಿಕರ ಸೇವೆಗೆ ಮುಕ್ತವಾಗಿರುತ್ತವೆ.