ಭಾರಿ ಮಳೆ ಹಾಗೂ ಸಿಡಿಲಿನ ಹೊಡೆತದಿಂದ ಹಾರೋಹಳ್ಳಿ ಮತ್ತು ಟಿ.ಕೆ ಹಳ್ಳಿ ಪಂಪಿಂಗ್ ಸ್ಟೇಷನ್‌ಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ವಿದ್ಯುತ್ ಸಂಪರ್ಕ ಮರುಸ್ಥಾಪನೆಯಾಗುವವರೆಗೂ ನೀರು ಸರಬರಾಜಿನಲ್ಲಿ ವ್ಯತ್ಯಯ ಮುಂದುವರಿಯಲಿದೆ.
ಬೆಂಗಳೂರು (ಅ.03): ಭಾರಿ ಮಳೆ ಹಾಗೂ ಸಿಡಿಲಿನ ಹೊಡೆತದಿಂದ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿ ವ್ಯಾಪ್ತಿಯಲ್ಲಿನ ಕೆಪಿಟಿಸಿಎಲ್ ಟ್ರಾನ್ಸಫಾರ್ಮರ್ ಗಳಲ್ಲಿ ತಾಂತ್ರಿಕ ಸಮಸ್ಯೆ - ವಿದ್ಯುತ್ ಸಂಪರ್ಕ ಕಡಿತವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಆಗುವವರೆಗೂ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಸುರಿದ ಭಾರಿ ಹಾಗೂ ಗುಡುಗು ಸಹಿತ ಮಳೆಯ ವೇಳೆ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಪ್ರಮುಖ ಪಂಪಿಂಗ್ ಸ್ಟೇಷನ್ ಗಳಿಗೆ ವಿದ್ಯುತ್ ಸರಬರಾಜು ಮಾಡುವ ಲೈನ್ ಗಳಿಗೆ ಹಾನಿಯಾಗಿದೆ. ಅಂದರೆ, ಸುಮಾರು ರಾತ್ರಿ 11 ಗಂಟೆಯಿಂದ ಪ್ರಮುಖ ಪಂಪಿಂಗ್ ಸ್ಟೇಷನ್ ಗಳಾದ ಟಿ.ಕೆ ಹಳ್ಳಿ ಹಾಗೂ ಹಾರೋಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ವಿದ್ಯುತ್ ಸಂಪರ್ಕ ಇಲ್ಲದೆ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಪಂಪಿಂಗ್ ಸ್ಟೇಷನ್ ಗಳು ಸ್ಥಗಿತವಾಗಿವೆ.
ಇದನ್ನೂ ಓದಿ: ಬಿಎಂಟಿಸಿ ಬಸ್‌ನಲ್ಲಿ ಮುಂದೆ ಹೋಗಿ ಎಂದ ಕಂಡಕ್ಟರ್‌ಗೆ ಚಾಕು ಚುಚ್ಚಿದ ಪ್ರಯಾಣಿಕ!
ಕೆಪಿಟಿಸಿಎಲ್ ಕಡೆಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಯವರೆಗೂ ಬೆಂಗಳೂರು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕೆಪಿಟಿಸಿಎಲ್ ವತಿಯಿಂದ ರಿಪೇರಿ ಕೈಗೊಂಡ ನಂತರ ನೀರು ಸರಬರಾಜು ಯಾಥಾಸ್ಥಿತಿಗೆ ಬರಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಯದ ಸ್ಪಷ್ಟತೆ ನೀಡದ ಜಲಮಂಡಳಿ: ಬೆಂಗಳೂರಿನ ವ್ಯಾಪ್ತಿಯ ಎಲ್ಲ ಕಾವೇರಿ ನೀರು ಸರಬರಾಜು ವ್ಯಾಪ್ತಿಗೊಳಪಡುವ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಜಲಮಂಡಳಿಯ ಗ್ರಾಹಕರು ಈ ಪರಿಸ್ಥಿತಿಯಲ್ಲಿ ಈಗಿರುವ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಕೆ ಮಾಡಬೇಕು. ವಿದ್ಯುತ್ ಪರಿವರ್ತಕಗಳು ದುರಸ್ತಿಯಾದ ಬೆನ್ನಲ್ಲಿಯೇ ಎಂದಿನನಂತೆ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಆದರೆ, ಈ ದುರಸ್ತಿ ಕಾರ್ಯ ಮಧ್ಯಾಹ್ನದವರಗೆ ಅಥವಾ ಸಂಜೆವರೆಗೂ ಆಗಬಹುದು. ಈ ಬಗ್ಗೆ ಜಲಮಂಡಳಿಯಿಂದ ಯಾವುದೇ ಸ್ಪಷ್ಟತೆಯನ್ನೂ ನೀಡಿಲ್ಲ.