ಬೆಂಗಳೂರು ನಗರ ಜಿಲ್ಲೆ ಗ್ರಾ.ಪಂ.ಗಳು ಜಿಬಿಎಗೆ ಸೇರ್ಪಡೆ; ಚುನಾವಣೆ ನಡೆಸದಂತೆ ತಡೆ ನೀಡಿದ ಸರ್ಕಾರ!

Published : Oct 07, 2026, 11:17 AM IST
Bengaluru urban district Panchayat eelections

ಸಾರಾಂಶ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಸದ್ಯಕ್ಕೆ ನಡೆಸದಂತೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಸೇರ್ಪಡೆ ಮಾಡುವ ಚಿಂತನೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಚುನಾವಣಾ ಆಕಾಂಕ್ಷಿಗಳಿಗೆ ತಾತ್ಕಾಲಿಕ ಹಿನ್ನಡೆಯಾಗಿದೆ.

ಬೆಂಗಳೂರು (ಅ.07): ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಗ್ರಾಮ ಪಂಚಾಯಿತಿಗಳಿಗೆ ಸದ್ಯಕ್ಕೆ ಯಾವುದೇ ಚುನಾವಣೆ ನಡೆಸದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ದೇಶನ ನೀಡಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ACS) ತುಷಾರ್ ಗಿರಿನಾಥ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಕಾರ್ಯದರ್ಶಿಗೆ ಅಧಿಕೃತ ಪತ್ರ ಬರೆದು ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ.

ಮುಂಬರುವ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಸಲು ಪಂಚಾಯತ್ ರಾಜ್ ಇಲಾಖೆ ಭರ್ಜರಿ ಸಿದ್ಧತೆ ನಡೆಸಿತ್ತು. ಅಷ್ಟೇ ಅಲ್ಲದೆ, ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ, ಚುನಾವಣೆ ದಿನಾಂಕ ಘೋಷಣೆಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಶಿಫಾರಸು ಮಾಡಲು ಇಲಾಖೆ ಮುಂದಾಗಿತ್ತು. ಆದರೆ, ಸೆಪ್ಟೆಂಬರ್ 30, 2026ರಂದು ಪತ್ರ ಬರೆದಿರುವ ತುಷಾರ್ ಗಿರಿನಾಥ್, ಚುನಾವಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ಆರಂಭಿಸದಂತೆ ಸ್ಪಷ್ಟವಾಗಿ ತಾಕೀತು ಮಾಡಿದ್ದಾರೆ.

ಚುನಾವಣೆ ತಡೆಗೆ ಅಸಲಿ ಕಾರಣವೇನು?

ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿರುವ ಹಲವು ಗ್ರಾಮ ಪಂಚಾಯಿತಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ (ನಗರಸಭೆ, ಪುರಸಭೆ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರ/ಬಿಬಿಎಂಪಿ) ವ್ಯಾಪ್ತಿಗೆ ಸೇರ್ಪಡೆ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಿದರೆ, ಮುಂದೆ ಆ ಪ್ರದೇಶಗಳು ನಗರ ಸಂಸ್ಥೆಗಳ ವ್ಯಾಪ್ತಿಗೆ ಸೇರಿದಾಗ ಚುನಾಯಿತ ಜನಪ್ರತಿನಿಧಿಗಳ ಅಧಿಕಾರಾವಧಿ ಅರ್ಧಕ್ಕೇ ಮೊಟಕುಗೊಳ್ಳಲಿದೆ. ಇದರಿಂದ ಅನಗತ್ಯ ಗೊಂದಲ ಹಾಗೂ ಕಾನೂನು ತೊಡಕುಗಳು ಉಂಟಾಗುವುದನ್ನು ತಪ್ಪಿಸಲು ಸರ್ಕಾರ ಈ ಮುನ್ನೆಚ್ಚರಿಕೆ ಹೆಜ್ಜೆ ಇಟ್ಟಿದೆ.

ಸರ್ಕಾರದ ಈ ಆದೇಶದಿಂದಾಗಿ ಬೆಂಗಳೂರು ಹೊರವಲಯದ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದ ಆಕಾಂಕ್ಷಿಗಳಿಗೆ ತಾತ್ಕಾಲಿಕ ಹಿನ್ನಡೆಯಾಗಿದ್ದು, ಪಂಚಾಯಿತಿಗಳ ನಗರೀಕರಣ ಪ್ರಕ್ರಿಯೆ ಮತ್ತಷ್ಟು ಚುರುಕುಗೊಂಡಿದೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಟೆಂಡರ್ ರದ್ದಾದ 9 ಫ್ಲೈಓವರ್‌ಗಳ ಪಟ್ಟಿ ಇಲ್ಲಿದೆ! ನಿಮ್ಮ ಏರಿಯಾದಲ್ಲಿ ಯಾವ ಮೇಲ್ಸೇತುವೆ ಬರ್ತಿದೆ?
ಅಂತರ್ಜಾತಿ ವಿವಾಹವಾಗಿ 3 ವರ್ಷವಾದರೂ ಸಿಕ್ಕಿಲ್ಲ ಪ್ರೋತ್ಸಾಹಧನ; ಸಮಾಜ ಕಲ್ಯಾಣ ಇಲಾಖೆಯ ಚಕ್ರವ್ಯೂಹ