
ಬೆಂಗಳೂರು: ಬೆಂಗಳೂರಿನ ಸುಗಮ ಸಂಚಾರಕ್ಕೆ ಅತ್ಯಂತ ಮಹತ್ವಕಾಂಕ್ಷಿಯಾದ 'ಹೆಬ್ಬಾಳ - ಸೆಂಟ್ರಲ್ ಸಿಲ್ಕ್ ಬೋರ್ಡ್' ಅವಳಿ ಸುರಂಗ ರಸ್ತೆ ಯೋಜನೆಗೆ ಎದುರಾಗಿರುವ ಭೂ ಸವಾಲನ್ನು ಬಗೆಹರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಖಾಡಕ್ಕಿಳಿದಿದ್ದಾರೆ. ಸೆಪ್ಟೆಂಬರ್ 28ರಂದು ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಅವರು, ಯೋಜನೆಗೆ ಅಗತ್ಯವಿರುವ ರಕ್ಷಣಾ ಇಲಾಖೆಯ ಭೂಮಿಯನ್ನು ಶೀಘ್ರ ಹಸ್ತಾಂತರಿಸುವಂತೆ ಹಾಗೂ ವಿಧಿಸಲಾಗಿರುವ ಭಾರಿ ಪರವಾನಗಿ ಶುಲ್ಕವನ್ನು ಕಡಿತಗೊಳಿಸುವಂತೆ ಮನವಿ ಸಲ್ಲಿಸಿದರು.
ಪ್ರಸ್ತಾವಿತ 16.75 ಕಿ.ಮೀ ಉದ್ದದ ಸುರಂಗ ರಸ್ತೆ ಯೋಜನೆಯ ಹೆಬ್ಬಾಳ ಭಾಗದ ಮುಖ್ಯ ರ‍್ಯಾಂಪ್ ನಿರ್ಮಾಣಕ್ಕಾಗಿ 2 ಎಕರೆ ರಕ್ಷಣಾ ಭೂಮಿಯ ಅಗತ್ಯವಿದೆ. ಈ ಭೂಮಿಯು ಈ ಹಿಂದೆ ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ಮ್‌ನ ಭಾಗವಾಗಿತ್ತು.
ಮೇಖ್ರಿ ವೃತ್ತದ ಬಳಿಯ ಪಿಆರ್‌ಟಿಸಿ ಮತ್ತು ಡಿಜಿಕ್ಯೂಎ ವ್ಯಾಪ್ತಿಯ ಭೂಮಿಯ ಅಡಿಯಲ್ಲಿ ಸುರಂಗ ಹಾದುಹೋಗಲು ರಕ್ಷಣಾ ಇಲಾಖೆಯು ಭೂಮೌಲ್ಯದ ಶೇ. 33 ರಷ್ಟು, ಅಂದರೆ ₹61 ಕೋಟಿ ಪರವಾನಗಿ ಶುಲ್ಕ ಪಾವತಿಸುವಂತೆ ಜುಲೈ 29, 2026 ರಂದು ಆದೇಶಿಸಿತ್ತು.
ಈ ಶುಲ್ಕವು ಅತ್ಯಂತ ವಿಪರೀತವಾಗಿದ್ದು, ಭೂಗತ ಸುರಂಗದಿಂದ ಮೇಲ್ಮೈ ಭೂಮಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ಪರವಾನಗಿ ಶುಲ್ಕವನ್ನು ಭೂಮೌಲ್ಯದ ಶೇ. 2ಕ್ಕೆ ಇಳಿಸಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ.
ಸಮಾನ ಮೌಲ್ಯದ ಭೂಮಿ (Equal Value Land) ಅಥವಾ ಸಮಾನ ಮೌಲ್ಯದ ಮೂಲಸೌಕರ್ಯ (Equal Value Infrastructure) ನೀತಿಯಡಿ ಭೂಮಿ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸಿಎಂಮನವಿ ಮಾಡಿದ್ದಾರೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ನಡುವಿನ ಈ ಬೃಹತ್ ಸುರಂಗ ರಸ್ತೆ ಯೋಜನೆಗೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಅತ್ಯಂತ ಕಡಿಮೆ ಬಿಡ್‌ದಾರರಾಗಿ (L1) ಹೊರಹೊಮ್ಮಿದೆ. ರಾಜ್ಯ ಸರ್ಕಾರದ ಅಂದಾಜು ವೆಚ್ಚ ₹17,698 ಕೋಟಿ. ಅದಾನಿ ಸಂಸ್ಥೆಯ ಬಿಡ್ ಮೊತ್ತ ₹22,267 ಕೋಟಿ ಸರ್ಕಾರದ ಅಂದಾಜಿಗಿಂತ ಸುಮಾರು ₹4,600 ಕೋಟಿ ಹೆಚ್ಚು ಈ ಹಿನ್ನಲೆಯಲ್ಲಿ ಒಪ್ಪಂದದ ಅಂತಿಮ ಪ್ರಕ್ರಿಯೆ ಇನ್ನೂ ಹಂತದಲ್ಲಿದೆ.
ರಾಜನಾಥ್ ಸಿಂಗ್ ಅವರೊಂದಿಗಿನ ಭೇಟಿಯ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನಗರದ ಇತರ ಪ್ರಮುಖ ರಸ್ತೆ ಹಾಗೂ ಮೂಲಸೌಕರ್ಯ ಯೋಜನೆಗಳಿಗೂ ರಕ್ಷಣಾ ಭೂಮಿ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು:
ವಿಮಾನ ನಿಲ್ದಾಣ ರಸ್ತೆ - ಸನ್ನಿ ಬ್ರೂಕ್/ಸರೋವರ ಲೇಔಟ್ ಲಿಂಕ್ ರಸ್ತೆ: ಸಂಪರ್ಕ ಸುಧಾರಿಸಲು 18 ಮೀಟರ್ ಅಗಲದ ಲಿಂಕ್ ರಸ್ತೆಗೆ 7 ಎಕರೆ ರಕ್ಷಣಾ ಭೂಮಿ ಅಗತ್ಯವಿದೆ.
ಮೇಖ್ರಿ ವೃತ್ತದ ರಸ್ತೆ ಅಗಲೀಕರಣ: ಬಳ್ಳಾರಿ ರಸ್ತೆಯ ಮೇಖ್ರಿ ವೃತ್ತದ ಬಳಿ ಇರುವ ದ್ವಿಪಥ (2-Lane) ರಸ್ತೆಯನ್ನು ತ್ರಿಪಥ (3-Lane) ರಸ್ತೆಯಾಗಿ ಅಗಲೀಕರಣಗೊಳಿಸಿ, ವಿಮಾನ ನಿಲ್ದಾಣ ಮಾರ್ಗದ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (GBA) 0.7 ಎಕರೆ ರಕ್ಷಣಾ ಭೂಮಿಯ ಅಗತ್ಯವಿದೆ.
ಇತರ ಅಭಿವೃದ್ಧಿ ಯೋಜನೆಗಳು: ಇಬ್ಬಲೂರು ಫೈರಿಂಗ್ ರೇಂಜ್ ಬಳಿಯ 730 ಎಕರೆ ಜಾಗದಲ್ಲಿ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿ, ಅಧಿಸೂಚಿತ ಕೊಳೆಗೇರಿಗಳ ಪುನರಾಭಿವೃದ್ಧಿ ಹಾಗೂ ಎಚ್‌ಎಎಲ್ (HAL) ಮತ್ತು ಯಲಹಂಕ ವಾಯುಪಡೆ ನಿಲ್ದಾಣದ ಸುತ್ತಲಿನ ಕಟ್ಟಡ ಎತ್ತರ ನಿರ್ಬಂಧಗಳನ್ನು (Height Restrictions) ಸಡಿಲಗೊಳಿಸುವ ಕುರಿತೂ ಚರ್ಚಿಸಲಾಯಿತು.