
ಉಡುಪಿ: ಕಂಬಳ ಕಣದ ದಂತಕತೆ ಚಾಂಪಿಯನ್ ಕೋಣ ನಂದಳಿಕೆ ಪಾಂಡು (26) ತೀವ್ರ ಅನಾರೋಗ್ಯದಿಂದ ಮೃತಪಟ್ಟಿದೆ. ಆ ಮೂಲಕ ಕರಾವಳಿಯ ಜಾನಪದ ಕ್ರೀಡಾ ಜಗತ್ತು ತನ್ನ ಜನಪ್ರಿಯ ಹಾಗೂ ಪ್ರೀತಿಯ ತಾರೆಯನ್ನು ಕಳೆದುಕೊಂಡಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆಯ ಕೋಣ ಇದಾಗಿತ್ತು. ಯಜಮಾನ ಶ್ರೀಕಾಂತ ಭಟ್ ಮುತುವರ್ಜಿಯಲ್ಲಿ ನಂದಳಿಕೆ ಪಾಂಡು ಅಪಾರ ಹೆಸರು ಮಾಡಿತ್ತು. ಕಂಬಳ ಕಣಕ್ಕಿಳಿದರೆಂದರೆ ಸಾಕಿತ್ತು, ಎದುರಾಳಿ ಸ್ಪರ್ಧಿಗಳಿಗೆ ನಿರಾಸೆ ಗ್ಯಾರಂಟಿ ಆಗಿತ್ತು. ತನ್ನ ಅಪ್ರತಿಮ ವೇಗ ಮತ್ತು ಸ್ಪರ್ಧಾ ಕಣದಲ್ಲಿ ತೋರುತ್ತಿದ್ದ ಪ್ರದರ್ಶನದಿಂದಲೇ ಜನರಿಪ್ರಿಯತೆ ಪಡೆದುಕೊಂಡಿತ್ತು. ಇದು ತನ್ನ ಜೀವಿತಾವಧಿಯಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಪದಕಗಳನ್ನು ಬಾಚಿಕೊಂಡ ಏಕೈಕ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಹೆಚ್ಚಾಗಿ ಕಂಬಳದ ಕೋಣಗಳು ಕೇವಲ ಎಡ ಅಥವಾ ಬಲ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಆದರೆ ನಂದಳಿಕೆ ಪಾಂಡು ಹಾಗಿರಲಿಲ್ಲ. ಎರಡೂ ಬದಿಗಳಿಂದಲೂ (ಎಡ ಮತ್ತು ಬಲ) ಅದ್ಭುತವಾಗಿ ಓಡುವ ವಿಶಿಷ್ಟ ಸಾಮರ್ಥ್ಯ ಹೊಂದಿತ್ತು. ಇನ್ನು ಇದರ ಜೊತೆಗಾ ಕುಟ್ಟಿ ಜೊತೆ ಸೇರಿ ಅನೇಕ ದಾಖಲೆಗಳನ್ನು ಬರೆದಿತ್ತು. ಈ ಜೋಡಿ ಕರೆಗಿಳಿದರೆ ಗೆಲುವು ನಿಶ್ಚಿತ ಎಂಬ ಮಾತಿತ್ತು. ಕರಾವಳಿ ಮಾತ್ರವಲ್ಲದೇ ಇಡೀ ರಾಜ್ಯದ ಕಂಬಳ ಪ್ರೇಮಿಗಳ ಹೃದಯ ಗೆದ್ದಿದ್ದ ಪಾಂಡುವಿಗೆ ಸಾವಿರಾರು ಅಭಿಮಾನಿಗಳಿದ್ದರು. ಇನ್ನು, ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಐತಿಹಾಸಿಕ ಕಂಬಳ ಕೂಟದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಪಾಂಡುವಿಗೆ ವಿಶೇಷ ಸನ್ಮಾನ ಸಿಕ್ಕಿತ್ತು.
ತನ್ನ 26ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ನಂದಳಿಕೆ ಪಾಂಡುಗಾಗಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅದರ ಮಾಲೀಕರು, ಕಂಬಳ ಆಯೋಜಕರು, ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕುಟುಂಬದ ಸದಸ್ಯನಂತೆಯೇ ಗೌರವಪೂರ್ವಕವಾಗಿ ನಡೆದ ಪಾಂಡುವಿನ ಅಂತ್ಯಸಂಸ್ಕಾರದಲ್ಲಿ ನೆರೆದಿದ್ದ ಅಭಿಮಾನಿಗಳು ಕಣ್ಣೀರಿಟ್ಟು ವಿದಾಯ ಹೇಳಿದರು. ನಂದಳಿಕೆ ಪಾಂಡುವಿನ ಅಗಲಿಕೆ ತುಳುನಾಡಿನ ಕಂಬಳ ರಂಗಕ್ಕೆ ತುಂಬಲಾರದ ನಷ್ಟ ಆಗಿದೆ.
18 ವರ್ಷಗಳ ಕಾಲ ಕಂಬಳ ಕರೆಯನ್ನು ಆಳಿದ ಪಾಂಡು ಈಗ ಶಾಶ್ವತವಾಗಿ ಕಣ್ಣು ಮುಚ್ಚಿದ್ದಾನೆ. ಇನ್ನು, ಅದರ ಯಜಮಾನ ಶ್ರೀಕಾಂತ್ ಭಟ್ ಹಾಗೂ ಅವರ ಕುಟುಂಬ ತುಂಬಾ ದುಃಖ ವ್ಯಕ್ತಪಡಿಸಿದರು. ಪಾಂಡು ನೀನು ನನಗಾಗಿ ತುಂಬಾ ಸಾಧನೆ ಮಾಡಿದ್ದೀಯಾ. ಓಟದ ವೇಳೆ ಒಂದೆರಡು ಏಟು ಹೊಡೆದಿದ್ದರೆ ನನ್ನನ್ನು ಕ್ಷಮಿಸಿಬಿಡು. ಮುಂದಿನ ಜನ್ಮದಲ್ಲಿ ನೀನು ಮತ್ತೆ ಕೋಣವಾಗಿ ಹುಟ್ಟಿದರೆ ನನ್ನ ಕೊಟ್ಟಿಗೆಯಲ್ಲೇ ಹುಟ್ಟಿ ಬಾ ಎನ್ನುತ್ತ.. ಭಾರತ ಮನಸ್ಸಿನಿಂದ ಬೊಗಸೆಯಲ್ಲಿದ್ದ ಮಣ್ಣನನ್ನು ಹಾಕಿದರು. ಪಾಂಡು ಅಂತ್ಯಕ್ರಿಯೆಗೆ ಸುತ್ತಮುತ್ತದ ಗ್ರಾಮದವರು, ಅಭಿಮಾನಿಗಳು, ಕಂಬಳ ಆಯೋಜಕರು ಆಗಮಿಸಿದ್ದರು.
ಇನ್ನು ಅಂತ್ಯಕ್ರಿಯೆಗೂ ಮುನ್ನ ಪಾಂಡುವಿನ ಮೃತದೇಹಕ್ಕೆ ಸ್ನಾನ ಮಾಡಿಸಿ ಬಟ್ಟೆಗಳಿಂದ ಹೊದಿಸಿ ಹೂಗಳನ್ನ ಹಾಕಿ ಕಹಳೆ ಊದಲಾಯಿತು. ಪಾಂಡುವನ್ನು ನೋಡಿಕೊಳ್ಳುತ್ತಿದ್ದ ಪರಿಚಾಕರು ಕೊನೆಯ ಬಾರಿಗೆ ಎಣ್ಣೆ ಹಚ್ಚಿದರು. ಪಾಂಡು ಗೆದ್ದ 201 ಪದಕಗಳ ಸೂಚಕವಾಗಿ 201 ಹೂಗಳನ್ನ ಆತನ ದೇಹ ಮೇಲೆ ಇಡಲಾಗಿತ್ತು.