
ಬೆಂಗಳೂರು: ಮೆಜೆಸ್ಟಿಕ್ ಬಳಿಯ ಓಕಳಿಪುರ ಅಷ್ಟಪಥ ಕಾರಿಡಾರ್‌ನ ರೈಲ್ವೆ ಸೇತುವೆ ಕೆಳಭಾಗದಲ್ಲಿ ಬಾಕಿ ಇರುವ ಕಾಮಗಾರಿಗಳನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಖಡಕ್ ಸೂಚಿಸಿದ್ದಾರೆ.
ಕೇಂದ್ರ ಹಾಗೂ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸೇತುವೆ ಕೆಳಭಾಗದಲ್ಲಿ ರೈಲ್ವೆ ಇಲಾಖೆಯಿಂದ ಈಗಾಗಲೇ 2 ಬಾಕ್ಸ್ ಪುಶಿಂಗ್ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ, ಮೆಜೆಸ್ಟಿಕ್‌ನಿಂದ ರಾಜಾಜಿನಗರದ ಕಡೆಗೆ ತೆರಳುವ ಮಾರ್ಗದ 1 ಬಾಕ್ಸ್ ಭಾಗದಲ್ಲಿ ವಾಹನಗಳ ಸಂಚಾರಕ್ಕಾಗಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯವನ್ನು 25 ದಿನಗಳಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅದೇ ಸ್ಥಳದಲ್ಲಿ ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದ ಕಡೆಗೆ ತೆರಳುವ ಬಾಕ್ಸ್ ಮಾರ್ಗದ ಸಂಪರ್ಕ ರಸ್ತೆ ನಿರ್ಮಾಣ, ಮಳೆನೀರು ಹರಿದು ಹೋಗಲು 1,200 ಮಿ.ಮೀ. ವ್ಯಾಸದ ನೀರುಗಾಲುವೆ ನಿರ್ಮಾಣ, ಸುಮಾರು 63 ಮೀ.ಉದ್ದದ ರಿಟೇನಿಂಗ್ ವಾಲ್ ಹಾಗೂ ಪಾದಚಾರಿ ಮಾರ್ಗದ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇದೇ ಸ್ಥಳದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ನವರಂಗ್‌ನಿಂದ ಸ್ಟಾರ್ ಬಜಾರ್ ಸಿಗ್ನಲ್‌ವರೆಗೆ 1.8 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿಯ ಒಂದು ಬದಿಯ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ. ನಂತರ ಮತ್ತೊಂದು ಬದಿಯ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚಿತ್ರಾಪುರ ಕ್ರಾಸ್‌ನಿಂದ 18ನೇ ಅಡ್ಡರಸ್ತೆಯವರೆಗೆ 425 ಮೀ.ಉದ್ದದ ವೈಟ್ ಟಾಪಿಂಗ್ ಅನ್ನು ಸಮರ್ಪಕ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮೆಜೆಸ್ಟಿಕ್ ಸಮೀಪದ ಓಕಳಿಪುರ ಜಂಕ್ಷನ್ ನಲ್ಲಿ ಕಳೆದ 2013-14ರಲ್ಲಿ ಎಂಟು ಲೈನ್‌ನ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಅಂದಿನ ಬಿಬಿಎಂಪಿ ಆರಂಭಿಸಿತ್ತು. ಇದೀಗ ಆರು ಪಥ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಆದರೆ, ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಕೆಳ ಸೇತುವೆ ನಿರ್ಮಾಣ ಕಾರ್ಯ ಬಾಕಿ ಇತ್ತು. ಇದೀಗ ಬಹುತೇಕ ಪೂರ್ಣಗೊಂಡಿದೆ. ಇದರಿಂದ ಮಲ್ಲೇಶ್ವರ ಮತ್ತು ರಾಜಾಜಿನಗರ ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ಹಾಗೂ ಮೆಜೆಸ್ಟಿಕ್ ನಿಂದ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 6,7 ಹಾಗೂ 8ಕ್ಕೆ ನೇರವಾಗಿ ಪ್ರವೇಶ ಪಡೆಯುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.