
ಮಂಗಳೂರು: ಪ್ರಯಾಣಿಕರ ದಟ್ಟಣೆ ನಿವಾರಿಸಲು ಚೆನ್ನೈ ಎಗ್ಮೋರ್‌ನಿಂದ ಹೊರಡುವ ರೈಲು ಸಂಖ್ಯೆ 16159 ಚೆನ್ನೈ ಎಗ್ಮೋರ್ - ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಪ್ರಯಾಣಕ್ಕೆ ಮೇ 27 ಮತ್ತು 29 ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ಒದಗಿಸಲಾಗುವುದು. ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 16160 ಮಂಗಳೂರು ಸೆಂಟ್ರಲ್ - ಚೆನ್ನೈ ಎಗ್ಮೋರ್ ಎಕ್ಸ್‌ಪ್ರೆಸ್ ಪ್ರಯಾಣಕ್ಕೆ ಜೂ. 29 ಮತ್ತು 31ರಂದು ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ಒದಗಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಮಂಗಳೂರು ಜಂಕ್ಷನ್‌ನಿಂದ ಮೇ 30 ರಿಂದ ಜೂ. 12 ರ ವರೆಗೆ ಹೊರಡುವ ರೈಲು ಸಂಖ್ಯೆ 12134 ಮಂಗಳೂರು ಜಂಕ್ಷನ್ - ಮುಂಬೈ ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಥಾಣೆಯಲ್ಲಿ ಅಲ್ಪಾವಧಿಗೆ ಕೊನೆಗೊಳಿಸಲಾಗುತ್ತದೆ. ಈ ರೈಲು ಸಂಚಾರವನ್ನು ಥಾಣೆ ಮತ್ತು ಮುಂಬೈ ಸಿಎಸ್‌ಎಂಟಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ರೈಲು ಓಡಾಟ ಮಾಡುವ ಪೂರ್ವಭಾವಿಯಾಗಿ ಮಂಗಳೂರಿನಿಂದ ಬೆಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪರೀಕ್ಷಾರ್ಥಿ ಸಂಚಾರ (ಟ್ರಯಲ್ )ಈಗಾಗಲೇ ಆರಂಭವಾಗಿದೆ ಎಂದು ಬಂಟ್ವಾಳ ತಾಲೂಕು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರಭಾಕರ ಪ್ರಭು ಹೇಳಿದ್ದಾರೆ.
ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರೊಂದಿಗೆ ಮಾತುಕತೆ ಮಾಡುವ ಮೂಲಕ ಮಂಗಳೂರು ಬೆಂಗಳೂರು ಓಡಾಟದ ಮನವರಿಕೆ ಮಾಡಿಸುವುದರ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲಿ ಈ ಸೇವೆಯು ಕರಾವಳಿ ಭಾಗದ ಸಾವಿರಾರು ಜನರಿಗೆ ಲಭಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವರು ಇತ್ತೀಚಿಗೆ ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ
ಕೇಂದ್ರ ರೈಲ್ವೆ ಸಚಿವರು ಬೆಂಗಳೂರು ನಿಂದ ಮುಂಬೈ ನಡುವಿನ ಎಕ್ಸ್ ಪ್ರೆಸ್ ರೈಲಿಗೆ ವರ್ಚುವಲ್ ವೇದಿಕೆ ಮೂಲಕ ಹಸಿರು ನಿಶಾನೆ ತೋರಿಸಿ ಮಂಗಳೂರು ಬೆಂಗಳೂರು ಮಾರ್ಗ ನಡುವೆಯೂ ವಂದೇ ಭಾರತ್ ರೈಲು ಸಂಚಾರ ಶೀಘ್ರದಲ್ಲಿ ಪ್ರಾರಂಭ ಗೊಳ್ಳುವುದು ಎಂದೂ ತಿಳಿಸಿದ್ದಾರೆ.
ಕಳೆದ ಕೆಲವು ಸಮಯದಲ್ಲಿ ನಿರಂತರವಾಗಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಸಂಪರ್ಕ ಮಾಡಿ ಕರಾವಳಿ ಭಾಗದ ಜನರಿಗೆ ರೈಲ್ವೆ ಸೌಕರ್ಯ ಒದಗಿಸಿ ಕೊಟ್ಟ ದಕ್ಷಿಣ ಕನ್ನಡ ಸಂಸದ ಚೌಟರ ಬಗ್ಗೆ ಜನಸಾಮಾನ್ಯರಲ್ಲಿ ವ್ಯಾಪಕ ಅಭಿಮಾನ ಮೂಡಿಬರುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪರವಾಗಿ ಬಂಟ್ವಾಳ ತಾಲೂಕು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ಸಂತಸ ವ್ಯಕ್ತಪಡಿಸಿ ಧನ್ಯವಾದ ನೀಡಿದ್ದಾರೆ.